ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಬಿಜೆಪಿ-ಆರ್‌ಎಸ್‌ಎಸ್ ಮೀಸಲಾತಿ ವಿರೋಧಿ ಕ್ರಮಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಮಂಗಳವಾರ) ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಯೋಗ್ಯರಲ್ಲ' ಎಂಬುದು ಹೊಸ 'ಮನುವಾದ' ಆಗಿದೆ ಎಂದು ಟೀಕಿಸಿದ್ದಾರೆ.
'ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಅರ್ಹ ಅಭ್ಯರ್ಥಿಗಳನ್ನು ಶಿಕ್ಷಣ ಹಾಗೂ ನಾಯಕತ್ವದಿಂದ ವಂಚಿತರಾಗಿಸಲು ಉದ್ದೇಶಪೂರ್ವಕವಾಗಿ ಅನರ್ಹಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಡಾ.ಬಿ.ಆರ್. ಅಂಬೇಡ್ಕರ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. 'ಸಮಾನತೆಗೆ ಶಿಕ್ಷಣವು ದೊಡ್ಡ ಅಸ್ತ್ರವಾಗಿದೆ ಎಂದು ಬಾಬಾ ಸಾಹೇಬ್ ಹೇಳಿದ್ದರು. ಆದರೆ ಆ ಅಸ್ತ್ರವನ್ನು ಮುರಿಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಯತ್ನಿಸುತ್ತಿದೆ' ಎಂದು ಹೇಳಿದ್ದಾರೆ.
'ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಮೀಸಲು ಹುದ್ದೆಗಳಲ್ಲಿ ಶೇ 60ಕ್ಕಿಂತ ಹೆಚ್ಚು ಮತ್ತು ಸಹಾಯಕ ಪ್ರಾಧ್ಯಾಪಕರ ಮೀಸಲು ಹುದ್ದೆಗಳಲ್ಲಿ ಶೇ 30ಕ್ಕಿಂತ ಹೆಚ್ಚು ಹುದ್ದೆಗಳನ್ನು 'ನಾಟ್ ಫೌಂಡ್ ಸೂಟೇಬಲ್' (ಎನ್‌ಎಫ್‌ಎಸ್) ಎಂದು ಹೇಳಿ ಖಾಲಿ ಬಿಡಲಾಗಿದೆ' ಎಂದು ಹೇಳಿದ್ದಾರೆ.
'ಐಐಟಿ, ಕೇಂದ್ರೀಯ ವಿಶ್ವವಿದ್ಯಾಲಯಗಳು ಇದಕ್ಕೆ ಹೊರತಲ್ಲ. ಎಲ್ಲ ಕಡೆ ಒಂದೇ ರೀತಿಯ ಪಿತೂರಿ ನಡೆಯುತ್ತಿದೆ. ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ಮೇಲೆ ಎನ್‌ಎಫ್‌ಎಸ್ ದಾಳಿ ನಡೆದಿದೆ' ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.
'ಇದು ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅಲ್ಲ. ಹಕ್ಕು, ಗೌರವ, ಸಮಾನ ಪಾಲುದಾರಿಕೆಗಾಗಿ ನಡೆಯುವ ಹೋರಾಟ' ಎಂದು ಉಲ್ಲೇಖಿಸಿದ್ದಾರೆ.
'ನಾನು ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದೊಂದಿಗೆ (ಡಿಯುಎಸ್‌ಯು) ಚರ್ಚಿಸಿದ್ದೇನೆ. ನಾವೆಲ್ಲರೂ ಒಗ್ಗಟ್ಟಾಗಿ ಬಿಜೆಪಿ,ಆರ್‌ಎಸ್‌ಎಸ್‌ನ ಮೀಸಲಾತಿ ವಿರೋಧಿ ಕ್ರಮಗಳ ವಿರುದ್ಧ ಸಂವಿಧಾನದ ಶಕ್ತಿಯೊಂದಿಗೆ ಹೋರಾಡಲಿದ್ದೇವೆ' ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.