ADVERTISEMENT

'ಟ್ರ್ಯಾಕ್ಟರ್ ಕ್ರಾಂತಿ'ಗೆ ಕರೆ ನೀಡಿದ ರೈತ ಮುಖಂಡ ರಾಕೇಶ್ ಟಿಕಾಯತ್

ಪಿಟಿಐ
Published 7 ಫೆಬ್ರುವರಿ 2021, 1:13 IST
Last Updated 7 ಫೆಬ್ರುವರಿ 2021, 1:13 IST
ರೈತ ಮುಖಂಡ ರಾಕೇಶ್ ಟಿಕಾಯತ್
ರೈತ ಮುಖಂಡ ರಾಕೇಶ್ ಟಿಕಾಯತ್   

ಗಾಜಿಯಾಬಾದ್: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾಗವಾಗಿ ಟ್ರ್ಯಾಕ್ಟರ್ ಕ್ರಾಂತಿಯಲ್ಲಿ ಭಾಗವಹಿಸುವಂತೆ ದೇಶದಾದ್ಯಂತ ರೈತರಿಗೆ ರೈತ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.

ಗಾಜಿಪುರ ಪ್ರತಿಭಟನಾ ಸ್ಥಳದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ 10 ವರ್ಷಕ್ಕೂ ಹಳೆಯವಾದ ಟ್ರ್ಯಾಕ್ಟರ್ ಸೇರಿದಂತೆ ಡಿಸೇಲ್ ವಾಹನಗಳನ್ನು ನಿಷೇಧಿಸಿರುವುದನ್ನು ಖಂಡಿಸಿದರು.

ಇತ್ತೀಚಿನವರೆಗೂ, ಯಾವ ವಾಹನಗಳು 10 ವರ್ಷ ಹಳೆಯದು ಎಂದವರು ಕೇಳಲಿಲ್ಲ. ಅವರ ಯೋಜನೆ ಏನು? 10 ವರ್ಷಕ್ಕೂ ಹಳೆಯದಾದ ಟ್ರ್ಯಾಕ್ಟರ್‌ಗಳನ್ನು ನಿಷೇಧಿಸಿ ಕಾರ್ಪೋರೇಟ್‌‍ಗಳಿಗೆ ಸಹಾಯ ಮಾಡಲು ಬಯಸುತ್ತಾರೆಯೇ? 10 ವರ್ಷಕ್ಕೂ ಹಳೆಯದಾದ ಟ್ರ್ಯಾಕ್ಟರ್‌ಗಳು ಸಹ ಓಡಾಡಲಿದ್ದು, ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಅಂದೋಲನದಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದೇಶದೆಲ್ಲೆಡೆಯ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.

ಇತ್ತೀಚೆಗೆ 20,000 ಟ್ರ್ಯಾಕ್ಟರ್‌ಗಳು ದೆಹಲಿಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಮುಂದಿನ ಗುರಿ 40 ಲಕ್ಷ ಟ್ರಾಕ್ಟರ್‌ಗಳಾಗಿವೆ ಎಂದು ಹೇಳಿದರು.

ನಿಮ್ಮ ಟ್ರ್ಯಾಕ್ಟರ್‌ಗಳಲ್ಲಿ 'ಜನವರಿ 26 ಟ್ರ್ಯಾಕ್ಟರ್ ಕ್ರಾಂತಿ 2021' ಎಂದು ನಮೂದಿಸಿರಿ. ನೀವು ಎಲ್ಲಿಗೆ ಹೋದರೂ ನಿಮಗೆ ಗೌರವ ಸಿಗಲಿದೆ. ಮುಂದಿನ ಗುರಿ 40 ಲಕ್ಷ ಟ್ರ್ಯಾಕ್ಟರ್‌ಗಳಾಗಿವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನವೆಂಬರ್ 26ರಿಂದಲೇ ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ ನಡೆದಿತ್ತು. ದೆಹಲಿ ಪ್ರತಿಭಟನೆಯನ್ನು ಬೆಂಬಲಿಸುವ ಸಲುವಾಗಿ ಫೆ.6 ಶನಿವಾರದಂದು ದೇಶವ್ಯಾಪ್ತಿ ಚಕ್ಕಾ ಜಾಮ್ (ರಸ್ತೆ ದಿಗ್ಬಂಧನ) ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.