ADVERTISEMENT

Rana ಗಡೀಪಾರು | UPA ಸರ್ಕಾರದ ಪರಿಣಾಮಕಾರಿ ಕ್ರಮ; PM ಮೋದಿಯದ್ದಲ್ಲ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 12:28 IST
Last Updated 10 ಏಪ್ರಿಲ್ 2025, 12:28 IST
ಚಿದಂಬರಂ
ಚಿದಂಬರಂ   

ನವದೆಹಲಿ: ‘2008ರಲ್ಲಿ ಮುಂಬೈಯಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ (26/11) ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಪ್ರಮುಖ ಆರೋಪಿ ಪಾಕಿಸ್ತಾನದ ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾ ಅಮೆರಿಕದಿಂದ ಗಡೀಪಾರಾಗಿದ್ದು ಹಿಂದಿನ ಯುಪಿಎ ಸರ್ಕಾರದ ಪ್ರಬುದ್ಧ ಮತ್ತು ನಿಪುಣ ರಾಜತಾಂತ್ರಿಕ ಪ್ರಯತ್ನದ ಫಲವಾಗಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಫಲ ಅನುಭವಿಸುತ್ತಿದೆ’ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ‘ರಾಣಾ ಹಸ್ತಾಂತರದಲ್ಲಿ ಈಗಿನ ಕೇಂದ್ರ ಸರ್ಕಾರ ಯಾವುದೇ ಪ್ರಯತ್ನವನ್ನೂ ನಡೆಸಿಲ್ಲ. ಜತೆಗೆ, ಅದರ ಫಲಿತಾಂಶವನ್ನೂ ನಿರೀಕ್ಷಿಸಿರಲಿಲ್ಲ. ಹೀಗಿದ್ದರೂ ನರೇಂದ್ರ ಮೋದಿ ಸರ್ಕಾರವು ಇದರ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದೆ. ಆದರೆ ಇದರ ವಾಸ್ತವವೇ ಬೇರೆ ಇದೆ’ ಎಂದಿದ್ದಾರೆ.‌

ರಾಣಾ ಗಡೀಪಾರಿನ ಹಿಂದಿದೆ ಒಂದೂವರೆ ದಶಕದ ಪ್ರಯತ್ನ

'ರಾಣಾನ ಗಡೀಪಾರು ಪ್ರಕ್ರಿಯೆಯ ಹಿಂದೆ ಒಂದೂವರೆ ದಶಕದ ಹಿಂದೆ ನಡೆಸಿದ ಕಠಿಣ ರಾಜತಾಂತ್ರಿಕ ಪ್ರಯತ್ನಗಳು ಅಡಗಿವೆ. ಕಾನೂನು ಮತ್ತು ಗುಪ್ತಚರ ಇಲಾಖೆಗಳ ಪ್ರಯತ್ನವೂ ಇದೆ. ಯುಪಿಎ ಸರ್ಕಾರವು ಅಮೆರಿಕದೊಂದಿಗೆ ನಿರಂತರ ಮಾತುಕತೆಯ ಫಲ ಈಗ ಲಭಿಸಿದೆ’ ಎಂದಿದ್ದಾರೆ.

ADVERTISEMENT

ಗಡೀಪಾರು ಮಾಡದಂತೆ ರಾಣಾ ಮಾಡಿಕೊಂಡ ಮನವಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಈತನನ್ನು ಭಾರತಕ್ಕೆ ಕರೆತರಲಾಗುತ್ತಿದೆ. 

‘2008ರ ನ. 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 166 ಜನ ಮೃತಪಟ್ಟಿದ್ದರು. 2009ರ ನ. 11ರಂದು ದಾಳಿಯ ರೂವಾರಿ ಅಮೆರಿಕದ ಡೇವಿಡ್‌ ಕೋಲ್ಮನ್‌ ಹೆಡ್ಲಿ, ಕೆನಡಾ ನಾಗರಿಕ ತಹವ್ವುರ್ ರಾಣಾ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತು. ಅದೇ ತಿಂಗಳು ಕೆನಡಾ ವಿದೇಶಾಂಗ ಸಚಿವರು ಭಾರತಕ್ಕೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದು, ಯುಪಿಎ ಸರ್ಕಾರದ ಪರಿಣಾಮಕಾರಿ ವಿದೇಶಾಂಗ ನೀತಿಗೆ ಹಿಡಿದ ಕನ್ನಡಿಯಾಗಿದೆ. ಕೋಪೆನ್‌ಹೆಗನ್‌ನಲ್ಲಿ ಲಷ್ಕರ್‌ ಎ ತಯ್ಯಬಾ ಹೆಣೆದ ಭಯೋತ್ಪಾದನಾ ಸಂಚು ರೂಪಿಸಿದ್ದ ರಾಣಾ ವಿರುದ್ಧ 2009ರಲ್ಲಿ ಎಫ್‌ಬಿಐ ಷಿಕಾಗೊದಲ್ಲಿ ಪ್ರಕರಣ ದಾಖಲಿಸಿಕೊಂಡಿತು’ ಎಂದು 2008ರಿಂದ 2012ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದ ಚಿದಂಬರಂ ವಿವರಿಸಿದ್ದಾರೆ.

‘ಮುಂಬೈ ದಾಳಿಯಲ್ಲಿ ಈತನ ನೇರ ಪಾತ್ರವಿಲ್ಲ ಎಂದು ಅಭಿಪ್ರಾಯಪಟ್ಟ ಅಮೆರಿಕದ ನ್ಯಾಯಾಲಯ ರಾಣಾನನ್ನು ಖುಲಾಸೆಗೊಳಿಸಿತ್ತು. ಆದರೆ ಬೇರೊಂದು ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆಗೆ ಈತ ಗುರಿಯಾಗಿದ್ದ. ಮುಂಬೈ ದಾಳಿಯಲ್ಲಿ ಈತನ ಪಾತ್ರವಿಲ್ಲ ಎಂಬ ನಿಲುವಿಗೆ ಆ ಸಂದರ್ಭದಲ್ಲಿ ಯುಪಿಎ ಸರ್ಕಾರ ಸಾರ್ವಜನಿಕವಾಗಿ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು’ ಎಂದು ನೆನಪಿಸಿಕೊಂಡಿದ್ದಾರೆ.

‘ಕಾನೂನು ಪ್ರಕ್ರಿಯೆಯಲ್ಲಿ ಹಿನ್ನಡೆಯಾದರೂ, ರಾಜತಾಂತ್ರಿಕ ನಡೆ ಮತ್ತು ಕಾನೂನು ಯಂತ್ರದ ಮೂಲಕ ಯುಪಿಎ ಸರ್ಕಾರವು ತನ್ನ ಹೋರಾಟ ಮುಂದುವರಿಸಿತು. 2011ರೊಳಗಾಗಿ ತ್ರಿಸದಸ್ಯ ಎನ್‌ಐಎ ತಂಡವು ಅಮೆರಿಕದಲ್ಲೇ ಹೆಡ್ಲಿ ವಿಚಾರಣೆ ನಡೆಸಿತ್ತು. ಈ ಪ್ರಕರಣದಲ್ಲಿ ಅಮೆರಿಕ ಸರ್ಕಾರವು ಪ್ರಮುಖ ಸಾಕ್ಷ್ಯಗಳನ್ನು ಭಾರತಕ್ಕೆ ಹಸ್ತಾಂತರಿಸಿತು. ಇದು 2011ರಲ್ಲಿ ಎನ್ಐಎ ಸಲ್ಲಿಸಿದ ಆರೋಪಪಟ್ಟಿಯಲ್ಲೇ ದಾಖಲಾಗಿದೆ. ಇದರಲ್ಲಿ ರಾಣಾ ಪಾತ್ರವೂ ಉಲ್ಲೇಖವಾಗಿದೆ’ ಎಂದು ಚಿದಂಬರಂ ಹೇಳಿದ್ದಾರೆ.

‘ದೆಹಲಿಯಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯವು ರಾಣಾ ವಿರುದ್ಧ ಜಾಮೀನು ರಹಿತ ವಾರೆಂಟ್‌ ಮತ್ತು ಇಂಟರ್‌ಪೋಲ್‌ ರೆಡ್‌ ನೋಟಿಸ್ ಅನ್ನು ಹೊರಡಿಸಿತ್ತು. ಇವೆಲ್ಲವೂ ಕಾನೂನಾತ್ಮಕ ರಾಜತಾಂತ್ರಿಕ ಪ್ರಕ್ರಿಯೆಗಳೇ ಹೊರತು, ಮಾಧ್ಯಮ ತಂತ್ರಗಳಲ್ಲ’ ಎಂದಿದ್ದಾರೆ.

‘2012ರಲ್ಲಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ವಿದೇಶಾಂಗ ಕಾರ್ಯದರ್ಶಿ ರಂಜನ್‌ ಮಥಾಯ್‌ ಅವರು ಹೆಡ್ಲಿ ಮತ್ತು ರಾಣಾ ಗಡೀಪಾರು ವಿಷಯವನ್ನು ಅಮೆರಿಕದ ಕಾರ್ಯದರ್ಶಿ ಹಿಲೇರಿ ಕ್ಲಿಂಟನ್‌ ಜತೆ ಚರ್ಚಿಸಿದ್ದರು. 2013ರ ಜನವರಿಯಲ್ಲಿ ಹೆಡ್ಲಿಗೆ 35 ವರ್ಷಗಳ ಕಾರಾಗೃಹವಾಸ ಮತ್ತು ರಾಣಾಗೂ ಶಿಕ್ಷೆಯಾಗಿತ್ತು’ ಎಂದು ಚಿದಂಬರಂ ಹೇಳಿದ್ದಾರೆ.

‘ಹೆಡ್ಲಿಗೆ ಅಮೆರಿಕ ಶಿಕ್ಷೆ ವಿಧಿಸಿದ್ದನ್ನು ಖಂಡಿಸಿದ್ದ ಭಾರತ, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿತ್ತು. ಅಮೆರಿಕದಲ್ಲಿನ ಭಾರತೀಯ ರಾಯಭಾರಿ ನಿರುಪಮಾ ರಾವ್ ಅವರೂ ನಿರಂತರವಾಗಿ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಎಲ್ಲಾ ಪ್ರಕ್ರಿಯೆಗಳು ಒಂದು ಸೂಕ್ಷ್ಮ ವಿಷಯಗಳನ್ನು ಪರಿಣಾಮಕಾರಿ ರಾಜತಾಂತ್ರಿಕ ಪ್ರಯತ್ನದ ಮೂಲ ಹೇಗೆಲ್ಲಾ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನಗಳಾಗಿವೆ’ ಎಂದಿದ್ದಾರೆ.

ಸರ್ಕಾರ ಬದಲಾದರೂ ನಿಲ್ಲದ ಪ್ರಕ್ರಿಯೆ

2014ರ ನಂತರ ಸರ್ಕಾರ ಬದಲಾದರೂ ವಿವಿಧ ಸಂಸ್ಥೆಗಳ ಪ್ರಯತ್ನ ಮುಂದುವರಿದಿತ್ತು. 26/11ರ ಪ್ರಕರಣದ ರೂವಾರಿ ತಾನು ಎಂದು ಒಪ್ಪಿಕೊಳ್ಳಲು ಹೆಡ್ಲಿ ಒಪ್ಪಿಕೊಂಡಿದ್ದ. ಝಬಿಯುದ್ದೀನ್ ಅನ್ಸಾರಿ ಪ್ರಕರಣದಲ್ಲಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡದ್ದಕ್ಕೆ 2016ರಲ್ಲಿ ಮುಂಬೈ ನ್ಯಾಯಾಲಯ ಹೆಡ್ಲಿಯನ್ನು ಕ್ಷಮಿಸಿತ್ತು. 2018ರಲ್ಲಿ ಅಮೆರಿಕಕ್ಕೆ ತೆರಳಿದ ತನಿಖಾ ತಂಡವು, ಇದ್ದ ಕಾನೂನು ತೊಡಕುಗಳನ್ನು ಪರಿಹರಿಸಲು ಯತ್ನಿಸಿತು. ರಾಣಾ ತನ್ನ ಶಿಕ್ಷೆಯನ್ನು ಅಮೆರಿಕದಲ್ಲೇ ಪೂರ್ಣಗೊಳಿಸಬೇಕು ಎಂದು 2019ರ ಜನವರಿಯಲ್ಲಿ ಅಲ್ಲಿನ ನ್ಯಾಯಾಲಯ ಹೇಳಿತ್ತು’ ಎಂದು ಚಿದಂಬರಂ ವಿವರಿಸಿದ್ದಾರೆ.

‘2023ರಲ್ಲಿ ರಾಣಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಇವು ಬಲವಾದ ನಾಯಕತ್ವದ ನಿದರ್ಶನಗಳಲ್ಲ. 2020ರ ಜೂನ್‌ನಲ್ಲಿ ಅನಾರೋಗ್ಯದ ಕಾರಣದಿಂದ ರಾಣಾ ಬಿಡುಗಡೆಯಾದ. ಆದರೆ ಈತನನ್ನು ಬಂಧಿಸುವಂತೆ ಭಾರತ ಕೋರಿಕೆ ಸಲ್ಲಿಸಿತು’ ಎಂದಿದ್ದಾರೆ.

‘ಹಿಂದಿನ ಅಧ್ಯಕ್ಷ ಜೋ ಬೈಡನ್ ಸರ್ಕಾರವು ಮೇ 2023ರಲ್ಲಿ ರಾಣಾ ಗಡೀಪಾರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಭಾರತ ಮತ್ತು ಅಮೆರಿಕ ಗಡೀಪಾರು ಒಪ್ಪಂದದನ್ವಯ ಈತನ ಗಡೀಪಾರಿಗೆ ಅಲ್ಲಿನ ನ್ಯಾಯಾಲಯವೂ ಒಪ್ಪಿಗೆ ಸೂಚಿಸಿತ್ತು. ಆದರೆ ತನ್ನನ್ನು ಗಡೀಪಾರು ಮಾಡದಂತೆ ಹಲವು ಮನವಿಗಳನ್ನು ರಾಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ. ಜತೆಗೆ ಹೇಬಿಯಸ್ ಕಾರ್ಪಸ ಅರ್ಜಿಯನ್ನೂ ಹಾಕಿದ್ದ. ಆದರೆ ಅವೆಲ್ಲವೂ ವಜಾಗೊಂಡವು. ಅಂತಿಮವಾಗಿ 2025ರ ಜ. 21ರಂದು ಡೊನಾಲ್ಡ್ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗಡೀಪಾರು ಆದೇಶ ಜಾರಿಗೆ ಬಂದಿತು’ ಎಂದು ಚಿದಂಬರಂ ವಿವರಿಸಿದ್ದಾರೆ.

‘2025ರ ಫೆಬ್ರುವರಿಯಲ್ಲಿ ಟ್ರಂಪ್ ಮತ್ತು ಮೋದಿ ಅವರು ಪತ್ರಿಕಾಗೋಷ್ಠಿ ನಡೆಸಿ ಇವೆಲ್ಲವೂ ತಮ್ಮದೇ ಪ್ರಯತ್ನದ ಫಲ ಎಂದು ಎದೆ ತಟ್ಟಿಕೊಳ್ಳುವ ಪ್ರಯತ್ನ ನಡೆಸಿದರು. ಆದರೆ ಅಸಲಿಗೆ ಇದು ಯುಪಿಎ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ನಡೆದುಕೊಂಡ ಪ್ರಯತ್ನದ ಭಾಗವಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.