ಜಯಂತ್ ಚೌಧರಿ
ಲಖನೌ: ನರೇಂದ್ರ ಮೋದಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ ಎನ್‌ಡಿಎ ಮೈತ್ರಿಕೂಟದ ಸಂಸದೀಯ ಸಭೆಯಲ್ಲಿ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರನ್ನು ವೇದಿಕೆಯಲ್ಲಿ ಕೂರಿಸದೇ ಇದ್ದಿದ್ದಕ್ಕೆ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಕಿಡಿಕಾರಿವೆ.
‘ಓರ್ವ ಸಂಸದರು ಇರುವ ಪಕ್ಷದ ನಾಯಕರಿಗೆ ವೇದಿಕೆಯಲ್ಲಿ ಆಸನ ನೀಡಲಾಗಿತ್ತು. ಆದರೆ ತಮ್ಮ ಪಕ್ಷದಿಂದ ಇಬ್ಬರು ಸಂಸದರಿದ್ದರೂ ಚೌಧರಿಯವರಿಗೆ ಆಸನ ಕಲ್ಪಿಸಿರಲಿಲ್ಲ’ ಎಂದು ಸಮಾಜವಾದಿ ಪಕ್ಷದ ಮಿಡಿಯಾ ಸೆಲ್ ‘ಎಕ್ಸ್‘ನಲ್ಲಿ ಪೋಸ್ಟ್ ಮಾಡಿದೆ.
‘ಜಾಟ್ ಸಮುದಾಯದ ಬಗ್ಗೆ ಬಿಜೆಪಿಗೆ ಇರುವ ದ್ವೇಷ ಹಾಗೂ ಚೌಧರಿ ಚರಣ್ ಸಿಂಗ್ ಬಗ್ಗೆ ಇರುವ ಕಪಟ ಗೌರವದ ಪ್ರತೀಕ ಇದು. ಒಂದು ವೇಳೆ ಜಯಂತ್ ಚೌಧರಿಯವರು ರೈತರ ಬಗ್ಗೆ ನಿಜವಾಗಿ ಕಾಳಜಿ ಉಳ್ಳವರೇ ಆಗಿದ್ದರೆ, ಎನ್‌ಡಿಎ ಮೈತ್ರಿಕೂಟದಿಂದ ಅಂತರ ಕಾಯ್ದುಕೊಂಡು, ಬಿಜೆಪಿ ವಿರುದ್ಧ ಧ್ವನಿ ಎತ್ತಬೇಕು. ತಾತ್ಕಾಲಿಕ ಲಾಭಕ್ಕಾಗಿ ತಮ್ಮ ಗೌರವ ಹಾಗೂ ರೈತರ ಹಿತವನ್ನು ಅವರು ಪಣಕ್ಕಿಡಬಾರದು’ ಎಂದು ಬರೆದುಕೊಂಡಿದೆ.
‘ಸಣ್ಣ ಮಿತ್ರಪಕ್ಷಗಳನ್ನು ಅವಮಾನ ಮಾಡುವುದು ಬಿಜೆಪಿಯ ಚಾಳಿ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಕಿಡಿಕಾರಿದ್ದಾರೆ.
ಒಂದೇ ಕ್ಷೇತ್ರದಲ್ಲಿ ಗೆದ್ದಿದ್ದರೂ, ಆಪ್ನಾ ದಳದ ಅಧ್ಯಕ್ಷ ಅನುಪ್ರಿಯಾ ಪಟೇಲ್ ಹಾಗೂ ಹಿಂದೂಸ್ಥಾನಿ ಅವಾಮಿ ಮೋರ್ಚಾದ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಅವರನ್ನು ವೇದಿಕೆಯಲ್ಲಿ ಕೂರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.