ADVERTISEMENT

ಅಲೋಕ್ ವರ್ಮಾ ಉತ್ತರ ಸೋರಿಕೆಗೆ ‘ಸುಪ್ರೀಂ’ ಅಸಮಾಧಾನ: ವಿಚಾರಣೆ 29ಕ್ಕೆ ಮುಂದೂಡಿಕೆ

ಪಿಟಿಐ
Published 20 ನವೆಂಬರ್ 2018, 6:54 IST
Last Updated 20 ನವೆಂಬರ್ 2018, 6:54 IST
ಅಲೋಕ್‌ ವರ್ಮಾ
ಅಲೋಕ್‌ ವರ್ಮಾ   

ನವದೆಹಲಿ:ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ತನಿಖೆ ವೇಳೆ ನೀಡಿರುವ ಉತ್ತರ ಸುದ್ದಿ ತಾಣಕ್ಕೆ ಸೋರಿಕೆಯಾಗಿದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದೆ.

ವರ್ಮಾ ಅವರ ಪ್ರತಿಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿ ಸೋಮವಾರ ಸಂಜೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರಿದ್ದ ನ್ಯಾಯಪೀಠವು ಸಂಬಂಧಿಸಿ ಸುದ್ದಿ ತಾಣವೊಂದರಲ್ಲಿ ಪ್ರಕಟವಾದ ವರದಿಯನ್ನುವರ್ಮಾ ಅವರ ವಕೀಲ ಫಾಲಿ ಎಸ್‌. ನಾರಿಮನ್ ಅವರಿಗೆ ನೀಡಿ ಅಸಮಾಧಾನ ವ್ಯಕ್ತಪಡಿಸಿತು. ಈ ವೇಳೆ, ವರ್ಮಾ ಅವರ ಪ್ರತಿಕ್ರಿಯೆ ಮಾಧ್ಯಮಕ್ಕೆ ಸೋರಿಕೆಯಾಗಿರುವುದಕ್ಕೆ ನಾರಿಮನ್‌ ಕೂಡ ಆಘಾತ ವ್ಯಕ್ತಪಡಿಸಿದರು.

ADVERTISEMENT

ತಮ್ಮನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಅಲೋಕ್ ವರ್ಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ಕೇಂದ್ರ ಜಾಗೃತ ಆಯೋಗಕ್ಕೆ ಸೂಚಿಸಿತ್ತು.

ಈ ಮಧ್ಯೆ, ಕೇಂದ್ರ ಜಾಗೃತ ಆಯೋಗಕ್ಕೆ ಅಲೋಕ್ ವರ್ಮಾ ನೀಡಿದ್ದಾರೆ ಎನ್ನಲಾದ ಹೇಳಿಕೆ ಸೋಮವಾರ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ, ಪ್ರಧಾನಿ ಕಾರ್ಯಾಲಯದ (ಪಿಎಂಒ) ಹಿರಿಯ ಅಧಿಕಾರಿ ಮತ್ತು ಬಿಹಾರದ ಬಿಜೆಪಿ ನಾಯಕ ಸುಶೀಲ್ ಮೋದಿ ಸಂಚು ಹೂಡಿದ್ದರು ಎಂದು ವರ್ಮಾ ಆರೋಪಿಸಿದ್ದಾಗಿ ಸುದ್ದಿ ತಾಣವೊಂದು ವರದಿ ಮಾಡಿತ್ತು.

ಸಂಬಂಧಿತ ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.