ADVERTISEMENT

'ಕೈ' ಕಾರ್ಯಕರ್ತರ ಬಂಧಿಸಿದ ದೆಹಲಿ ಪೊಲೀಸರನ್ನೇ ವಶಕ್ಕೆ ಪಡೆದ ಶಿಮ್ಲಾ ಪೊಲೀಸ್!

ಏಜೆನ್ಸೀಸ್
Published 26 ಫೆಬ್ರುವರಿ 2026, 6:35 IST
Last Updated 26 ಫೆಬ್ರುವರಿ 2026, 6:35 IST
   

ನವದೆಹಲಿ: ಹಿಮಾಚಲ ಪ್ರದೇಶದ ಶಿಮ್ಲಾ ಪೊಲೀಸರು ದೆಹಲಿ ಪೊಲೀಸರ ವಿರುದ್ಧವೇ ಅಪಹರಣ ಪ್ರಕರಣ ದಾಖಲಿಸಿಕೊಂಡು ಬಂಧಿಸಿರುವ ನಾಟಕೀಯ ಬೆಳವಣಿಗೆ ಬುಧವಾರ–ಗುರುವಾರ ರಾತ್ರಿ ವರದಿಯಾಗಿದೆ.

ಇತ್ತೀಚೆಗೆ ಮುಕ್ತಾಯವಾದ 'ಎಐ ಇಂಪ್ಯಾಕ್ಟ್‌ ಸಮಾವೇಶ'ದಲ್ಲಿನ ಲೋಪಗಳನ್ನು ಖಂಡಿಸಿ, ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಪಕ್ಷದ ಮೂವರು ಕಾರ್ಯಕರ್ತರನ್ನು ದೆಹಲಿ ಪೊಲೀಸರು ಹಿಮಾಚಲದ ರೊಹ್ರುವಿನಲ್ಲಿ ಬಂಧಿಸಿದ್ದರು. ಬಂಧಿತರನ್ನು ಪೊಲೀಸ್‌ ಕಸ್ಟಡಿಗೆ ನೀಡಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆದೇಶಿಸಿದ್ದರು. ಆದಾಗ್ಯೂ, ಶಿಮ್ಲಾ ಪೊಲೀಸರು ದೆಹಲಿ ಪೊಲೀಸ್‌ ತಂಡದಲ್ಲಿದ್ದ 20 ಮಂದಿಯನ್ನು ಬಂಧಿಸಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರನ್ನು ವಶಕ್ಕೆ ಪಡೆದು ರಾಷ್ಟ್ರ ರಾಜಧಾನಿಯತ್ತ ಹೊರಟಿದ್ದ ದೆಹಲಿ ಪೊಲೀಸರ ವಾಹನಗಳನ್ನು ಶಿಮ್ಲಾ ಬಳಿಯ ಶೋಘಿ ಗಡಿಯಲ್ಲಿ ತಡರಾತ್ರಿ ತಡೆದಿದ್ದ ಹಿಮಾಚಲ ಪೊಲೀಸರು, ಆರೋಪಿಗಳನ್ನು ದೀನ್ಡಿಯಾಲ್ ಉಪಾಧ್ಯಾಯ ವಲಯ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ನಂತರ, ನಸುಕಿನ 1.30ರಲ್ಲಿ ದೆಹಲಿ ಪೊಲೀಸರನ್ನೂ ಕರೆದುಕೊಂಡು ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಏಕಾಂಶ್‌ ಕಪಿಲ್‌ ಅವರ ಎದುರು ಹಾಜರುಪಡಿಸಿದ್ದರು. ಇದಾದ ನಂತರ, ದೆಹಲಿ ಪೊಲೀಸರು ರಾಜಧಾನಿಯತ್ತ ಹೊರಟಿದ್ದಾರೆ.

ADVERTISEMENT

ಆದರೆ, ಗುರುವಾರ ಮುಂಜಾನೆ ಮತ್ತೆ ಕಾರ್ಯಾಚರಣೆಗೆ ಇಳಿದ ಶಿಮ್ಲಾ ಪೊಲೀಸರು, ಕನ್ಲೋಗ್‌ ಬಳಿ ದೆಹಲಿ ಸಿಬ್ಬಂದಿಯನ್ನು ತಡೆದಿದ್ದಾರೆ. ಆರೋಪಿಗಳೊಂದಿಗೆ ಹೆಚ್ಚುವರಿ ಪೊಲೀಸರು ದೆಹಲಿಗೆ ವಾಪಸ್‌ ಆಗುವಂತೆ ಮತ್ತು ಉಳಿದವರು ಅಲ್ಲೇ ಉಳಿದು, ಅವರ ವಿರುದ್ಧವೇ ದಾಖಲಾಗಿರುವ ಅಪಹರಣ ಪ್ರಕರಣದ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದಾರೆ.

ಅಷ್ಟೇ ಅಲ್ಲದೆ, ಕಾರ್ಯಕರ್ತರನ್ನು ರೊಹ್ರುವಿನಲ್ಲಿ ಬಂಧಿಸಿದ ಸಮಯದಲ್ಲಿ ಸಂಗ್ರಹಿಸಲಾಗಿದೆ ಎನ್ನಲಾದ ಡಿಜಿಟಲ್‌ ಸಾಕ್ಷ್ಯಗಳನ್ನು ಹಸ್ತಾಂತರಿಸುವಂತೆಯೂ ಕೇಳಿದ್ದಾರೆ.

ಈ ವೇಳೆ, ವಶದಲ್ಲಿರುವ ಮೂವರ ರಕ್ಷಣೆ ತಮ್ಮ ಹೊಣೆ. ಹಾಗೆಯೇ, ಯಾವೊಬ್ಬ ಸಿಬ್ಬಂದಿಯನ್ನೂ ಬಿಟ್ಟುಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ದೆಹಲಿ ಸಿಬ್ಬಂದಿ ಶೋಘಿ ಕಡೆಗೆ ಪ್ರಯಾಣ ಆರಂಭಿಸಿದ್ದಾರೆ.

ಮುಂಜಾನೆ 4ರ ಹೊತ್ತಿಗೆ ಶೋಘಿ ಗಡಿಯಲ್ಲಿ ಮತ್ತೆ ಅಡ್ಡಲಾದ ಶಿಮ್ಲಾ ಸಿಬ್ಬಂದಿ, ದೆಹಲಿ ಪೊಲೀಸರನ್ನು ವಶಕ್ಕೆ ತಡೆದಿದ್ದಾರೆ.

ಅದೇ ವೇಳೆ, ದೆಹಲಿ ಪೊಲೀಸರಿಗೆ ಸೇರಿದ ವಾಹನದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಅದರಲ್ಲಿ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳು, ಇತರ ಸಾಕ್ಷ್ಯಗಳು ಅದರಲ್ಲಿವೆ ಎನ್ನಲಾಗಿದೆ. ಆ ವಾಹನದ ಕೀ ನೀಡಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಇದರಿಂದಾಗಿ, ಉಭಯ ಪಡೆಗಳ ನಡುವಣ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ.

ಈ ಸಂದರ್ಭದಲ್ಲಿ, ದೆಹಲಿ ಪೊಲೀಸ್‌ ಸಿಬ್ಬಂದಿಯೊಬ್ಬರು, ಆರೋಪಿಗಳನ್ನು ವಶಕ್ಕೆ ಪಡೆಯುವ ಮುನ್ನ ನೋಟಿಸ್‌ ನೀಡಲಾಗಿದೆ. ಸಂಬಂಧಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ನ್ಯಾಯಾಲಯವು ಅವರನ್ನು ಕಸ್ಟಡಿಗೆ ನೀಡಿರುವುದೂ ಇದೇ ಆಧಾರದಲ್ಲಿ ಎಂದು ತಿಳಿಸಿದ್ದಾರೆ. ಬಳಿಕ, ಪರಿಸ್ಥಿತಿ ತಿಳಿಗೊಂಡಿದೆ.

ಆದರೆ, ಈ ಕುರಿತ ಮತ್ತಷ್ಟು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಪೊಲೀಸ್ ತಿಕ್ಕಾಟದ ಹಿಂದೆ ರಾಜಕೀಯ!
'ಎಐ ಸಮಾವೇಶ'ದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು. ಹೀಗಾಗಿ, ಪ್ರತಿಭಟನೆಯು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಅಂದಹಾಗೆ, ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್‌ ಸರ್ಕಾರವಿದೆ. ದೆಹಲಿಯಲ್ಲಿ ರೇಖಾ ಗುಪ್ತಾ ಸಿಎಂ ಆಗಿದ್ದು, ಬಿಜೆಪಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ, ಪೊಲೀಸರ ತಿಕ್ಕಾಟದ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.