ಏಕನಾಥ ಶಿಂದೆ ಮತ್ತು ಕುನಾಲ್ ಕಾಮ್ರಾ
ಮುಂಬೈ: ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ‘ದೇಶದ್ರೋಹಿ’ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ.
ಕುನಾಲ್ ಕಾಮ್ರಾ ಅವರ ಕಾರ್ಯಕ್ರಮವನ್ನು ಚಿತ್ರೀಕರಿಸಿದ ಮುಂಬೈನ ಖಾರ್ ಪ್ರದೇಶದ ಹೋಟೆಲ್ ಅನ್ನು ಶಿಂದೆ ನೇತೃತ್ವದ ಶಿವಸೇನಾ ಕಾರ್ಯಕರ್ತರು ಹಾನಿಗೊಳಿಸಿದ್ದಾರೆ.
ಶಿಂದೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕುನಾಲ್ ಕಾಮ್ರಾ ವಿರುದ್ಧ ಶಿವಸೇನಾ ಪಕ್ಷದ ಸಾಮಾಜಿಕ ಮಾಧ್ಯಮ ಉಸ್ತುವಾರಿ ರಸೂಲ್ ಎನ್. ಕನಾಲ್ ದೂರು ದಾಖಲಿಸಿದ್ದಾರೆ.
‘ಸಾರ್ವಜನಿಕ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡುವುದು, ಅಶ್ಲೀಲ ಪದಗಳನ್ನು ಬಳಸುವುದು ಮತ್ತು ಶಿಂದೆ ಅವರನ್ನು ಗುರಿಯಾಗಿಸಿಕೊಂಡು ಮಾನಹಾನಿಕರವಾದ ಆರೋಪಗಳನ್ನು ಮಾಡುವುದು ಸೇರಿದಂತೆ ಕಾಮ್ರಾ ಮಾಡಿದ ಕೃತ್ಯಗಳು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ನಿಬಂಧನೆಗಳ ಅಡಿಯಲ್ಲಿ ಆಕ್ರಮಣಕಾರಿ ಮಾತ್ರವಲ್ಲದೆ ಕಾನೂನುಬಾಹಿರವೂ ಆಗಿವೆ’ ಎಂದು ಕನಾಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಏಕನಾಥ ಶಿಂದೆ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಕುನಾಲ್ ಕಾಮ್ರಾ ಅವರು ಶಿವಸೇನಾ (ಯುಬಿಟಿ) ನಾಯಕರಾದ ಸಂಜಯ್ ರಾವುತ್, ಆದಿತ್ಯ ಠಾಕ್ರೆ ಅವರೊಂದಿಗೆ ಕೈಜೋಡಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕನಾಲ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.