
ಅಹ್ಮದ್ ಮೊಹಿಯುದ್ದೀನ್ ಸೈಯದ್, ಹರಳೆ ಬೀಜ
ಎಕ್ಸ್ ಚಿತ್ರ
ಅಹಮದಾಬಾದ್: ಸಸಾರಜನಕ ವಿಷದ ಮೂಲಕ ಭಯೋತ್ಪಾದಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಹೈದರಾಬಾದ್ ಮೂಲದ ಅಹ್ಮದ್ ಮೊಹಿಯುದ್ದೀನ್ ಸೈಯದ್ (35) ಎಂಬಾತ ಸದ್ಯ ಗುಜರಾತ್ ಎಟಿಎಸ್ ಬಂಧನದಲ್ಲಿದ್ದಾನೆ. ಆದರೆ ಈತ ದಕ್ಷಿಣ ಭಾರತವನ್ನೇ ಪ್ರತ್ಯೇಕಗೊಳಿಸುವ ಯೋಜನೆ ಹೊಂದಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಚೀನಾದಿಂದ ವೈದ್ಯಕೀಯ ಕೋರ್ಸ್‌ನ ಪದವಿ ಪೂರೈಸಿರುವ ಈತ, ಭಾರತದಲ್ಲಿ ವೃತ್ತಿ ನಡೆಸಲು ಅಗತ್ಯವಿರುವ ಎಂಸಿಐ ಪರೀಕ್ಷೆ ಪಾಸು ಮಾಡುವಲ್ಲಿ ವಿಫಲನಾಗಿದ್ದ. ಹರಳೆಣ್ಣೆ ತಯಾರಿಸಲು ಬಳಸುವ ಹರಳೆ ಬೀಜದಿಂದ ಎಣ್ಣೆ ತೆಗೆದ ನಂತರ ಉಳಿಯುವ ಅತ್ಯಲ್ಪ ವಿಷವನ್ನೇ ಈತ ತನ್ನ ಕೃತ್ಯಕ್ಕೆ ಬಳಸಲು ಯೋಜನೆ ರೂಪಿಸಿದ್ದ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಇಸ್ಲಾಮಿಕ್ ಸ್ಟೇಟ್‌ನ ಖೊರಸಾನ್ ಪ್ರಾಂತ್ಯದ ಮುಖ್ಯಸ್ಥ ಅಫ್ಗಾನಿಸ್ತಾನದ ಅಬು ಖಜಿದಾ ಜೊತೆ ಕೆಲ ವಿಷಯಗಳನ್ನು ಸೈಯದ್ ಹಂಚಿಕೊಂಡಿದ್ದಾನೆ. ‘ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿಸುವ ಉದ್ದೇಶಕ್ಕೆ ಹಣ ಮತ್ತು ರಕ್ಷಣಾ ಸಾಮಗ್ರಿಗಳು ಅಗತ್ಯ’ ಎಂದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಹು ರಾಷ್ಟ್ರೀಯ ಕಂಪನಿಗಳಿಗೆ ವೈದ್ಯಕೀಯ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದ ಸೈಯದ್, ₹90 ಸಾವಿರ ವೇತನ ಪಡೆಯುತ್ತಿದ್ದ. ಜತೆಗೆ ಆಹಾರಕ್ಕೆ ಸಂಬಂಧಿಸಿದ ವ್ಯವಹಾರವನ್ನೂ ನಡೆಸುತ್ತಿದ್ದ. ತನ್ನ ಇಬ್ಬರು ಸಹಚರರ ಜತೆಗೂಡಿ ಭಯೋತ್ಪಾದಕ ಕೃತ್ಯ ಎಸಗುವ ಯೋಜನೆ ನಡೆಸಿದ್ದ ಸಂದರ್ಭದಲ್ಲೇ ಈತ ಉತ್ತರ ಪ್ರದೇಶ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಎಟಿಎಸ್ ಮೂಲಗಳು ಹೇಳಿವೆ.
ಟೆಲಿಗ್ರಾಂ ಆ್ಯಪ್‌ನಲ್ಲಿ ವರ್ಷದ ಹಿಂದೆ ಒಂದು ವಿಡಿಯೊ ಹಂಚಿಕೊಳ್ಳಲಾಗಿತ್ತು. ಅದರಲ್ಲಿ ಮುಸ್ಲಿಂ ಬಾಲಕಿಯರ ಮೇಲೆ ಅತ್ಯಾಚಾರ, ಕೆಲ ಪುರುಷರ ಮೇಲೆ ದೈಹಿಕ ಹಲ್ಲೆ ಸೇರಿದಂತೆ ಸಮುದಾಯದ ವಿರುದ್ಧದ ದೌರ್ಜನ್ಯವನ್ನು ಬಿಂಬಿಸುವಂತೆ ಅದನ್ನು ಸಿದ್ಧಪಡಿಸಲಾಗಿತ್ತು. ಇದನ್ನು ನೋಡಿದ್ದ ಈತ, ಅಲ್ಲೇ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದ. ‘ದೇವರನ್ನು ನಂಬದ ಇವರನ್ನು ತಡೆಯಲು ಎಲ್ಲರೂ ಜತೆಗೂಡಬೇಕು. ನಿಮ್ಮಿಂದ ಇವರನ್ನು ತಡೆಯಲು ಸಾಧ್ಯವಿಲ್ಲವಾದರೆ, ನನ್ನನ್ನು ಬೆಂಬಲಿಸಿ’ ಎಂದು ಕೋರಿದ್ದ ಎಂಬ ಅಂಶ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಇದೇ ಅವಧಿಯಲ್ಲಿ ಪಾಕಿಸ್ತಾನದ ಫೋನ್ ಸಂಖ್ಯೆಯಿಂದ ಸೈಯದ್‌ಗೆ ಕರೆಯೊಂದು ಬಂದಿತ್ತು. ಸಂಘಟನೆ ಸೇರಲು ಆಹ್ವಾನ ನೀಡಲಾಗಿತ್ತು. ಆ ಕರೆ ಮತ್ತೆ ಬರಲಿಲ್ಲ. ಆದರೆ ವಿವಿಧ ಸಂಘಟನೆಗಳ ಟೆಲಿಗ್ರಾಂ ಗುಂಪಿನಲ್ಲಿ ಸಕ್ರಿಯನಾದೆ. ಧರ್ಮದ ಕುರಿತ ಚರ್ಚೆಯಲ್ಲಿ ನಿರಂತರ ಭಾಗವಹಿಸುವಿಕೆ, ಜಿಹಾದ್ ಕುರಿತ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು ಮತ್ತು ಮುಸ್ಲಿಮರ ಮೇಲಿನ ದೌರ್ಜನ್ಯಗಳನ್ನು ಖಂಡಿಸುವುದು ಇದರಲ್ಲಿ ಸೇರಿತ್ತು’ ಎಂದು ಆತ ಹೇಳಿರುವುದಾಗಿ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
‘ಟೆಲಿಗ್ರಾಂ ಖಾತೆಯ ಮೂಲಕವೇ ಅಬು ಖದಿಜಾ (@abuqasim00) ಎಂಬಾತನ ಸಂಪರ್ಕವಾಯಿತು. ದೇವರಲ್ಲಿ ನಂಬಿಕೆ ಇಲ್ಲದವರು ಹೇಗೆ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಾ ಅವರನ್ನು ಕೊಲೆ ಮಾಡುತ್ತಿದ್ದಾರೆ ಎಂಬ ವಿಷಯವಾಗಿ ಇಬ್ಬರು ಚರ್ಚಿಸಿದೆವು. ಇದರ ವಿರುದ್ಧ ಏಕೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದೂ ಚರ್ಚೆಯಾಯಿತು. ನಂತರ ಜಿಹಾದ್ ಕುರಿತು ಆತ ಹಲವು ವಿಡಿಯೊ, ಭಾಷಣ ಮತ್ತು ಪುಸ್ತಕಗಳನ್ನು ಹಂಚಿಕೊಂಡ’ ಎಂದೂ ಎಫ್‌ಐಆರ್‌ನಲ್ಲಿದೆ.
‘ತಾನು ದಕ್ಷಿಣ ಭಾರತದಲ್ಲಿದ್ದು, ಈ ಭಾಗದಲ್ಲಿ ಮುಸ್ಲಿಂ ಸಮುದಾಯದ ಯುವಕರನ್ನು ಒಗ್ಗೂಡಿಸಿ ಬಲಿಷ್ಠ ತಂಡವನ್ನು ಕಟ್ಟುವ ಯೋಜನೆ ಹೊಂದಿರುವುದಾಗಿ ಖದಿಜಾಗೆ ಸೈಯದ್ ಹೇಳಿದ್ದ. ದಕ್ಷಿಣ ಭಾರತವನ್ನು ಭಾರತದಿಂದ ಪ್ರತ್ಯೇಕಿಸುವ ಯೋಜನೆ ಇದ್ದು, ಅದಕ್ಕಾಗಿ ಹಣ ಮತ್ತು ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಕೋರಿದ್ದ’ ಎಂದೂ ಹೇಳಲಾಗಿದೆ.
‘ಸೈಯದ್‌ನ ಕೋರಿಕೆಯನ್ನು ಒಪ್ಪಿಕೊಂಡಿದ್ದ ಖದಿಜಾ, ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರಗಳನ್ನು ನೀಡುವ ಭರವಸೆ ನೀಡಿದ್ದ. ಜತೆಗೆ ಈತನನ್ನು ದಕ್ಷಿಣ ಭಾರತದ ಅಮೀರ್ (ಕಮಾಂಡರ್) ಆಗಿ ನೇಮಕ ಮಾಡಿದ್ದ. ಭಾರತ ಸರ್ಕಾರದ ವಿರುದ್ಧ ಹೋರಾಡಲು ₹2 ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಹಣ ನೀಡುವುದಾಗಿ ಹೇಳಿದ್ದ. ಇದರ ಭಾಗವಾಗಿ ₹1 ಲಕ್ಷ ಮುಂಗಡ ಪಡೆಲು ಈಗ ಅಹಮದಾಬಾದ್‌ಗೆ ಬಂದಿದ್ದ’ ಎಂದು ಎಟಿಎಸ್ ಹೇಳಿದೆ.
‘ಈ ಹಂತದಲ್ಲೇ ರಿಸಿನ್ (ಸಸಾರಜನಕ ವಿಷ) ತಯಾರಿಸುವಂತೆ ಸೈಯದ್‌ಗೆ ಖದಿಜಾ ಹೇಳಿದ್ದ. ಅದಕ್ಕಾಗಿ 10 ಕೆ.ಜಿ. ಹರಳೆ ಬೀಜ ಖರೀದಿಸುವಂತೆಯೂ ತಿಳಿಸಿದ್ದ. ಆತನ ಆದೇಶ ಪಾಲನೆಯ ಜತೆಗೆ, ಸಸಾರಜನಕ ವಿಷವನ್ನು ಹೇಗೆ ಸಿದ್ಧಪಡಿಸುವುದು ಎಂಬುದರ ಕುರಿತು ಈತ ಅಧ್ಯಯನ ನಡೆಸಿದ್ದ. ಎಟಿಎಸ್ ತಂಡ ಈತನ ಮನೆ ಮೇಲೆ ದಾಳಿ ನಡೆಸಿ ಶೋಧಿಸಿದಾಗ 4 ಕೆ.ಜಿ. ಹರಳೆ ಬೀಜ ದೊರೆತಿದೆ’ ಎಂಬ ಸಂಗತಿಯನ್ನೂ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
‘ಈ ವಿಷವನ್ನು ಬಳಸಿ ಹಲವು ಜನರನ್ನು ಕೊಲ್ಲುವ ಯೋಜನೆಯನ್ನು ಖದಿಜಾ ತಿಳಿಸಿದ್ದ. ಆ ಮೂಲಕ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಇರಾದೆ ಇತ್ತು. ಈ ವಿಷವನ್ನು ಹೇಗೆ ತಯಾರಿಸುವುದು ಎಂದು ಗೂಗಲ್ ಮತ್ತು ಚಾಟ್‌ಜಿಪಿಟಿಯಿಂದ ಮಾಹಿತಿ ಸಂಗ್ರಹಿಸಿದ್ದೆ. ಅದಕ್ಕಾಗಿ 10 ಕೆ.ಜಿ. ಹರಳೆ ಬೀಜ ತರಿಸಿ, ಅದನ್ನು ಅರೆಸಿ ಎಣ್ಣೆ ತೆಗೆಸಿದ್ದೆ. ಅದರ ತ್ಯಾಜ್ಯಕ್ಕೆ ಅಸಿಟೋನ್ ಬೆರೆಸಿ ಅದನ್ನು ಡ್ರಂನಲ್ಲಿ ಸಂಗ್ರಹಿಸಿಟ್ಟೆ. ನಂತರ ಖದಿಜನ ಆಜ್ಞೆಯಂತೆ 10 ಡಾಲರ್‌ನ ಎರಡು ನೋಟುಗಳನ್ನು ಖರೀದಿಸಿದೆ. ಅದರೊಂದಿಗೆ ಹರಳೆಣ್ಣೆ, ಅಳತೆ ಪಾತ್ರೆ, ಖಾಲಿ ಚೀಲ ಮತ್ತು ಎರಡು ಬಾಟಲಿಯನ್ನು ತೆಗೆದುಕೊಂಡ ಹೋದೆ’ ಎಂದು ಸೈಯದ್ ಹೇಳಿದ್ದಾನೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.
ಹೀಗಾಗಿ ನ. 5ರಂದು ಫೋರ್ಡ್ ಫಿಗೊ ಕಾರಿನಲ್ಲಿ ಸೈಯದ್ ಅಹಮದಾಬಾದ್‌ಗೆ ಹೊರಟ. ಲಾಲ್ ದರ್ವಾಜಾ ಬಳಿ ನ. 7ರಂದು ಹೋಟೆಲ್ ಕಾಯ್ದಿರಿಸಿದ. ಅದೇ ದಿನ ಎಲ್ಲಿ ಚೀಲವನ್ನು ಸಂಗ್ರಹಿಸಬೇಕು ಎಂಬ ಮಾಹಿತಿಯನ್ನು ಖದಿಜಾ ಈತನಿಗೆ ತಿಳಿಸಿದ್ದ. ಅದನ್ನು ಸೈಯದ್ ಸಂಗ್ರಹಿಸಿದ. ನೇರವಾಗಿ ಹೋಟೆಲ್‌ಗೆ ಹೋಗುವಂತೆ ಖದಿಜಾ ಹೇಳಿದ್ದ. ಆದರೆ ಮಾರ್ಗ ಮಧ್ಯದಲ್ಲೇ ಅದಾಲಜ್ ಟೋಲ್ ಪ್ಲಾಜಾ ಬಳಿ ಈತನನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು. ಆರಂಭದಿಂದಲೇ ವಿವಿಧ ತನಿಖಾ ಸಂಸ್ಥೆಗಳು ಈತನ ಮೇಲೆ ನಿಗಾ ಇರಿಸಿದ್ದವು ಎಂದು ಮೂಲಗಳು ಹೇಳಿವೆ.
ಈತ ಕಾರಿನಲ್ಲಿ 2 ಗ್ಲಾಕ್ ಪಿಸ್ತೂಲ್, ಒಂದು ಬ್ರೆಟ್ಟಾ ಪಿಸ್ತೂಲ್, 30 ಕಾಡತೂಸುಗಳು, 4 ಲೀಟರ್ ಹರಳೆಣ್ಣೆ ಪತ್ತೆಯಾಯಿತು. ಇವುಗಳನ್ನು ರಾಜಸ್ಥಾನದ ಹನುಮಾನ್‌ಗಢದಿಂದ ತರಲಾಗಿತ್ತು ಎಂಬುದು ಪತ್ತೆಯಾಗಿದೆ. ಇದು ಪಾಕಿಸ್ತಾನದಿಂದ ರಾಜಸ್ಥಾನ ಗಡಿ ಮೂಲಕ ಡ್ರೋನ್ ಬಳಸಿ ಕಳ್ಳಸಾಗಣೆ ಮಾಡಲಾಗಿತ್ತು. ಈ ಸಂಬಂಧ ಆಜಾದ್ ಸುಲೇಮಾನ್ ಶೇಖ್, ಮೊಹಮ್ಮದ್ ಸುಹೈಲ್ ಮೊಹಮ್ಮದ್ ಸಲೀಂ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ಸೈಯದ್ ಶಸ್ತ್ರಾಸ್ತ್ರಗಳಿರುವ ಚೀಲವನ್ನು ಪಡೆದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಬರಮತಿ ಕೇಂದ್ರ ಕಾರಾಗೃಹದಲ್ಲಿರುವ ಸೈಯದ್ ಮೇಲೆ ಇಬ್ಬರು ವಿಚಾರಣಾಧೀನ ಕೈದಿಗಳು ಮಂಗಳವಾರ ಹಲ್ಲೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಸೈಯದ್‌ನಿಂದ ವೈದ್ಯೆಯಾಗಿರುವ ಆತನ ಸೋದರಿ ಹಾಗೂ ಭಾವ ಅಂತರ ಕಾಯ್ದುಕೊಂಡಿದ್ದಾರೆ. ಹಲವು ವರ್ಷಗಳಿಂದ ಪತ್ನಿಯೂ ಈತನನ್ನು ತೊರೆದಿದ್ದಾರೆ ಎಂದೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.