ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಅಂಗಿ ಬಿಚ್ಚಿ, ಚಾಟಿಯಲ್ಲಿ ಹೊಡೆದುಕೊಂಡ ಅಣ್ಣಾಮಲೈ

ಪಿಟಿಐ
Published 27 ಡಿಸೆಂಬರ್ 2024, 10:52 IST
Last Updated 27 ಡಿಸೆಂಬರ್ 2024, 10:52 IST
<div class="paragraphs"><p>ಕೆ. ಅಣ್ಣಾಮಲೈ</p></div>

ಕೆ. ಅಣ್ಣಾಮಲೈ

   

(ಪಿಟಿಐ ಚಿತ್ರ)

ಕೊಯಮತ್ತೂರು: ಕ್ರಿಸ್‌ಮಸ್ ಹಬ್ಬದ ಮುನ್ನಾದಿನ ಚೆನ್ನೈ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನಿಭಾಯಿಸುವಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಪೊಲೀಸ್ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಆರೋಪಿಸಿರುವ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ, ತಮಗೆ ತಾವೇ ಚಾಟಿಯಲ್ಲಿ ದಂಡಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.

ADVERTISEMENT

ಕೊಯಮತ್ತೂರಿನ ತಮ್ಮ ನಿವಾಸದ ಮುಂದೆ ಅಣ್ಣಾಮಲೈ, ಅಂಗಿ ಬಿಚ್ಚಿ ಸ್ವಯಂ ಚಾಟಿಯಲ್ಲಿ ಹೊಡೆದುಕೊಳ್ಳುವ ಮೂಲಕ ಪ್ರತಿಭಟಿಸಿದ್ದಾರೆ. ಈ ಸಂದರ್ಭದಲ್ಲಿ ಹತ್ತಿರದಲ್ಲಿದ್ದ ಕಾರ್ಯಕರ್ತರು ಅಣ್ಣಾಮಲೈ ಅವರನ್ನು ತಡೆದಿದ್ದಾರೆ.

ರಾಜ್ಯದಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಗುರುವಾರದಂದು ಅಣ್ಣಾಮಲೈ ಪ್ರತಿಜ್ಞೆ ಮಾಡಿದ್ದರು.

'ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಹೆಸರನ್ನು ರಾಜ್ಯ ಪೊಲೀಸರು ಉದ್ದೇಶಪೂರ್ವಕವಾಗಿಯೇ ಬಹಿರಂಗಪಡಿಸಿದ್ದು, ಎಫ್‌ಐಆರ್ ಸೋರಿಕೆಯಾಗಿದೆ' ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.

ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.

ಅಣ್ಣಾಮಲೈ ಪ್ರತಿಭಟನೆಗೆ ತಿರುಗೇಟು ನೀಡಿರುವ ಡಿಎಂಕೆಯ ಆರ್‌.ಎಸ್.ಭಾರತಿ, 'ಬಿಜೆಪಿಯವರೇ ಈ ಚಾಟಿಯೇಟು ಪ್ರತಿಭಟನೆಯನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬುದರಲ್ಲಿ ನನಗೆ ಅನುಮಾನವಿದೆ. ಯಾರಾದರೂ ಚಾಟಿಯಲ್ಲಿ ಸ್ವಯಂ ಹೊಡೆದುಕೊಳ್ಳುತ್ತಾರೆಯೇ? ನಾನು ಕಳೆದ 60 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಇಂತಹ ಕೆಲಸವನ್ನು ಯಾವ ನಾಯಕರೂ ಮಾಡಿಲ್ಲ' ಎಂದು ಹೇಳಿದ್ದಾರೆ.

'ಬಹುಶಃ ಬಿಜೆಪಿಯಲ್ಲಿ ಉನ್ನತ ಹುದ್ದೆ ಪಡೆಯಲು ಹೀಗೆ ಮಾಡುವಂತೆ ಜೋತಿಷಿಗಳು ಸಲಹೆ ನೀಡಿರಬಹುದು' ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.