ADVERTISEMENT

ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸದ CCTV: ಸ್ವಯಂಪ್ರೇರಿತ PIL ದಾಖಲಿಸಿಕೊಂಡ SC

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:59 IST
Last Updated 4 ಸೆಪ್ಟೆಂಬರ್ 2025, 6:59 IST
   

ನವದೆಹಲಿ: ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗುರುವಾರ ದಾಖಲಿಸಿಕೊಂಡಿದೆ.

ಮಾನವ ಹಕ್ಕುಗಳ ಉಲ್ಲಂಘನೆ ಪರಿಶೀಲನೆಗೆ ಸಂಬಂಧಿಸಿದಂತೆ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ 2018ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

‘ಕಳೆದ ಎಂಟು ತಿಂಗಳಲ್ಲಿ ಪೊಲೀಸ್ ವಶದಲ್ಲಿದ್ದ 11 ಜನರು ಮೃತಪಟ್ಟಿದ್ದಾರೆ. ಈ ಠಾಣೆಗಳಲ್ಲಿ ಸಿಸಿಟಿವಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ‘ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕಾರ್ಯನಿರ್ವಹಣೆಯ ಕೊರತೆ’ ಎಂಬ ಶೀರ್ಷಿಕೆಯಡಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿದೆ.

ADVERTISEMENT

ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಎನ್‌ಐಎ ಕಚೇರಿಗಳಲ್ಲೂ ಸಿಸಿಟಿವಿ ಕ್ಯಾಮೆರಾ ಮತ್ತು ಅದರ ದೃಶ್ಯಾವಳಿ ದಾಖಲಾಗುವ ಸಾಧನಗಳನ್ನು ಅಳವಡಿಸುವಂತೆ 2020ರ ಡಿಸೆಂಬರ್‌ನಲ್ಲಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ಠಾಣೆಯ ಪ್ರವೇಶ ದ್ವಾರ, ಹೊರಗೆ ಹೋಗುವ ಮಾರ್ಗ, ಮುಖ್ಯ ಗೇಟ್, ಲಾಕ್‌ಅಪ್‌, ಕಾರಿಡಾರ್‌ಗಳು, ಸ್ವಾಗತಕಾರರ ಮೇಜಿನ ಬಳಿ ಸೇರಿದಂತೆ ಇಡೀ ಠಾಣೆಯ ಪ್ರತಿಯೊಂದು ಚಟುವಟಿಕೆಗಳು ಕಾಣುವಂತೆ ಸಿಸಿಟಿವಿ ಅಳವಡಿಸಲು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಜತೆಗೆ ಪ್ರತಿ ಠಾಣೆಗೂ ಇದ್ದು ಕಡ್ಡಾಯ ಎಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. 

ಅಳವಡಿಸುವ ಕ್ಯಾಮೆರಾಗಳು ರಾತ್ರಿ ಸಮಯದ ದೃಶ್ಯಗಳೂ ಸ್ಪಷ್ಟವಾಗಿ ದಾಖಲಾಗುವ ಗುಣಮಟ್ಟದ್ದಾಗಿರಬೇಕು. ಜತೆಗೆ ಧ್ವನಿ ಮತ್ತು ವಿಡಿಯೊ ಎರಡೂ ದಾಖಲಾಗುವಂತಿರಬೇಕು. ಕನಿಷ್ಠ ಒಂದು ವರ್ಷದ ದೃಶ್ಯಗಳನ್ನು ದಾಖಲಿಸುವ ಸಾಮರ್ಥ್ಯದ ಸ್ಮೃತಿಕೋಶ ಹೊಂದಿರಬೇಕು ಎಂದೂ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.