
ಕರ್ನೂಲ್ ಬಳಿ ಕಾವೇರಿ ಟ್ರಾವೆಲ್ಸ್‌ನ ಖಾಸಗಿ ಬಸ್ ಬೆಂಕಿ ದುರಂತ ಘಟನೆ
ಹೈದರಾಬಾದ್: ಕರ್ನೂಲ್ ಬಳಿ ಕಾವೇರಿ ಟ್ರಾವೆಲ್ಸ್‌ನ ಖಾಸಗಿ ಬಸ್ ಬೆಂಕಿ ದುರಂತ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ತೆಲಂಗಾಣ ಸಾರಿಗೆ ಇಲಾಖೆ ಅಧಿಕಾರಿಗಳು ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಖಾಸಗಿ ಬಸ್‌ಗಳ ವಿರುದ್ಧ ಭಾರಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ನಿನ್ನೆ ಬೆಳಿಗ್ಗೆಯಿಂದ ಆರಂಭಿಸಲಾಗಿರುವ ಖಾಸಗಿ ಬಸ್‌ಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಸುರಕ್ಷತೆ ಮಾನದಂಡಗಳು ಹಾಗೂ ಬಸ್ ಫಿಟ್‌ನೆಸ್ ಕಾಪಾಡಿಕೊಳ್ಳದವರ ವಿರುದ್ಧ 14 ಪ್ರಕರಣಗಳನ್ನು ದಾಖಲಿಸಿ ₹46 ಸಾವಿರ ದಂಡ ಸಂಗ್ರಹಿಸಿದ್ದಾರೆ.
ಪ್ರತಿದಿನ ಹೈದರಾಬಾದ್‌ನಿಂದ ಅಂತರರಾಜ್ಯಗಳಿಗೆ ಸುಮಾರು 500 ಖಾಸಗಿ ಬಸ್‌ಗಳು ಸಂಚರಿಸುತ್ತವೆ.
ಖಾಸಗಿ ಬಸ್‌ಗಳಿಂದ ಆಗುತ್ತಿರುವ ಅನಾಹುತಗಳನ್ನು ತಡೆಗಟ್ಟಲು ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರಗಳ ಸಾರಿಗೆ ಇಲಾಖೆಯ ಸಚಿವರನ್ನು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸುತ್ತೇವೆ ಎಂದು ತೆಲಂಗಾಣ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ಅವರು ತಿಳಿಸಿದ್ದಾರೆ.
ಸುರಕ್ಷತಾ ಮಾನದಂಡಗಳನ್ನು ಪೂರೈಸದ ಹಾಗೂ ಬಸ್‌ಗಳ ಫಿಟ್‌ನೆಸ್ ಕಾಯ್ದುಕೊಳ್ಳದವರಿಗೆ ಇನ್ಮುಂದೆ ಭಾರಿ ದಂಡ ವಿಧಿಸಲಾಗುತ್ತದೆ. ಅಲ್ಲದೇ ಸಂಸ್ಥೆಯ ಪರವಾನಗಿಯನ್ನೇ ರದ್ದುಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಬೆಂಕಿ ಅಪಘಾತಕ್ಕೀಡಾದ ವಿ. ಕಾವೇರಿ ಟ್ರಾವೆಲ್ಸ್‌ನ ಎಸಿ ಸ್ಲೀಪರ್ ಬಸ್ ಹಲವು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರುವುದು ಆರಂಭಿಕ ತಪಾಸಣೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
‘ದುರಂತಕ್ಕೆ ಕಾರಣವಾಗಿರು ಬಸ್ ಅನ್ನು ಸ್ಲೀಪರ್ ಕೋಚ್ ಆಗಿ ಪರಿವರ್ತಿಸಲಾಗಿತ್ತು. ಅದರೆ ಪರಿವರ್ತನೆಗಾಗಿ ಅನುಮೋದನೆ ಪಡೆದಿಲ್ಲ’ ಎಂದು ಅವರು ಹೇಳಿದ್ದಾರೆ.
ವಾಹನ ನಿರ್ಮಾಣ, ಅಗ್ನಿ ಸುರಕ್ಷತೆ, ತುರ್ತು ನಿರ್ಗಮನ ಮತ್ತು ಒಳಗಾಂಣ ವಸ್ತುಗಳ ಬಳಕೆ ಸೇರಿದಂತೆ ಒಟ್ಟಾರೆ ರಚನೆಯಲ್ಲಿ ಹಲವು ಮಹತ್ವದ ಸುರಕ್ಷತಾ ಮಾರ್ಗಸೂಚಿಗಳ ಪಾಲನೆ ಆಗಿಲ್ಲ ಎಂದು ಹೇಳಿದ್ದಾರೆ
ಕಳೆದ ಶುಕ್ರವಾರ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎಸಿ ಬಸ್ ಬೆಂಕಿ ಹೊತ್ತಿಕೊಂಡು 20 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.