ADVERTISEMENT

ತಿರುಪತಿ | ತುಪ್ಪದ ಬದಲು ಸಸ್ಯಜನ್ಯ ಎಣ್ಣೆ ಬಳಕೆ: ₹234 ಕೋಟಿ ಮೊತ್ತದ ವಂಚನೆ ಬಯಲು

ತಿರುಮಲ ಲಡ್ಡು ವಿವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2026, 5:08 IST
Last Updated 30 ಜನವರಿ 2026, 5:08 IST
<div class="paragraphs"><p>ಲಡ್ಡು ಪ್ರಸಾದ</p></div>

ಲಡ್ಡು ಪ್ರಸಾದ

   

ಹೈದರಾಬಾದ್: ತಿರುಮಲದ ಪವಿತ್ರ ಲಡ್ಡು ಪ್ರಸಾದ ತಯಾರಿಸಲು ಬಳಸಲಾಗಿದ್ದ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡವು (ಎಸ್‌ಐಟಿ), ಸಸ್ಯಜನ್ಯ ಎಣ್ಣೆ ಬಳಸಿ ತುಪ್ಪ ತಯಾರಿಸುವ ಮೂಲಕ ₹234 ಕೋಟಿ ಮೊತ್ತದ ವಂಚನೆ ನಡೆದಿರುವುದನ್ನು ಪತ್ತೆ ಮಾಡಿದೆ.

ಎಸ್‌ಐಟಿ ತಂಡ ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ಎಸಿಬಿ ಪ್ರಕರಣಗಳ ವಿಶೇಷ ನ್ಯಾಯಾಧೀಶರಿಗೆ 223 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದೆ.

ADVERTISEMENT

2019–2024ರ ನಡುವೆ ತಿರುಮಲ ತಿರುಪತಿ ದೇಗುಲಕ್ಕೆ ಪೂರೈಕೆದಾರರು ಹಾಲಿನ ಬದಲು ಸಸ್ಯಜನ್ಯ ಎಣ್ಣೆ ಬಳಸಿ ತುಪ್ಪ ತಯಾರಿಸಿರುವ ಸಂಗತಿ ಬಯಲಾಗಿದೆ. ಜತೆಗೆ, ಪ್ರಾಣಿಗಳ ಕೊಬ್ಬು, ಹಂದಿ ಕೊಬ್ಬು ಅಥವಾ ಮೀನಿನ ಎಣ್ಣೆಯಿಂದ ತುಪ್ಪ ತಯಾರಿಸಿರುವ ಸಾಧ್ಯತೆ ವಿರಳ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

₹234 ಕೋಟಿ ಮೊತ್ತದ ವಂಚನೆ ಪ್ರಕರಣದಲ್ಲಿ ಹಲವು ಸಂಸ್ಥೆಗಳು ಸೇರಿದಂತೆ 36 ವ್ಯಕ್ತಿಗಳು ಭಾಗವಹಿಸಿದ್ದಾರೆ. ಉತ್ತರ ಪ್ರದೇಶದ ಭೋಲೆ ಬಾಬಾ ಆರ್ಗ್ಯಾನಿಕ್‌ ಡೇರಿ ಮಿಲ್ಕ್‌ ಪ್ರೈವೆಟ್‌ ಲಿಮಿಟೆಡ್‌ನ ನಿರ್ದೇಶಕರಾದ ಪೋಮಿಲ್‌ ಜೈನ್‌ ಮತ್ತು ವಿಪಿನ್‌ ಜೈನ್‌ ಅವರು ಉತ್ತರಾಖಂಡದ ರೂರ್ಕಿ ಬಳಿಯ ಭಗವಾನ್‌ಪುರದಲ್ಲಿರುವ ತಮ್ಮ ಘಟಕದಲ್ಲಿ ಕಲಬೆರಕೆ ತುಪ್ಪ ತಯಾರಿಸಿದ್ದರು. ಬಳಿಕ ತಿರುಪತಿಯ ಶ್ರೀ ವೈಷ್ಣವಿ ಡೇರಿ, ಮಹಾರಾಷ್ಟ್ರದ ಮಲ್ಗಂಗಾ ಮಿಲ್ಕ್ ಮತ್ತು ತಮಿಳುನಾಡಿನ ದಿಂಡಿಗಲ್‌ನ ಎಆರ್ ಡೇರಿಯ ಮೂಲಕ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡುತ್ತಿದ್ದರು ಎನ್ನುವುದು ತಿಳಿದುಬಂದಿದೆ.

ಆರೋಪಿಗಳು ಹಸುವಿನ ಶುದ್ಧ ತುಪ್ಪದ ಬದಲಿಗೆ ಕೋಲ್ಕತ್ತದ ಬ್ಯೂಜ್‌ ಬಡ್ಜ್‌ ಕಂಪನಿಯಿಂದ ಪಡೆದ ಪಾಮ್‌ ಆಯಿಲ್‌, ಪಾಮ್‌ ಕರ್ನಲ್‌ ಎಣ್ಣೆ ಮತ್ತು ಪಾಮೊಲಿನ್‌ನಂತಹ ಕಲಬೆರಕೆ ವಸ್ತುಗಳನ್ನು ಬಳಸಿದ್ದಾರೆ. ಈ ವಸ್ತುಗಳನ್ನು ಅಲ್ಪ ಪ್ರಮಾಣದ ಶುದ್ಧ ತುಪ್ಪದೊಂದಿಗೆ ಸೇರಿಸಿ ಬೀಟಾ–ಕೆರೋಟಿನ್‌, ಅಸಿಟಿಕ್‌ ಆ್ಯಸಿಡ್‌ ಎಸ್ಟರ್‌ ಮತ್ತು ಸಿಂಥೆಟಿಕ್‌ ತುಪ್ಪದ ಸುವಾಸನೆಯಂತಹ ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಭೋಲೆ ಬಾಬಾ ಆರ್ಗ್ಯಾನಿಕ್‌ ಸೇರಿದಂತೆ ವಿವಿಧ ಡೇರಿಗಳಿಂದ 59.7 ಲಕ್ಷ ಕೆ.ಜಿ ಕಲಬೆರಕೆ ತುಪ್ಪವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪೂರೈಸಿದ್ದು, ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ₹234.51 ಕೋಟಿ ನಷ್ಟವನ್ನುಂಟು ಮಾಡಿದೆ. ಟಿಟಿಡಿ ನೌಕರರು ಚಿನ್ನಾಭರಣ, ಮೊಬೈಲ್‌, ಹಣದ ಆಮಿಷಕ್ಕೆ ಒಳಗಾಗಿ ನಕಲಿ ತುಪ್ಪ ಪೂರೈಕೆದಾರರಿಗೆ ಅನುಕೂಲಕರ ವರದಿಗಳನ್ನು ನೀಡಿದ್ದಾರೆ. ನಕಲಿ ಎಫ್‌ಎಸ್‌ಎಸ್‌ಎಐ ದಾಖಲೆಗಳಲ್ಲಿ ತುಪ್ಪ ಖರೀದಿ ಅಂಕಿಅಂಶಗಳನ್ನು ತಿರುಚಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೋಲೆ ಬಾಬಾ ಡೇರಿಯಿಂದ 9.9 ಲಕ್ಷ ಕೆ.ಜಿ, ವೈಷ್ಣವಿ ಡೇರಿಯಿಂದ 33 ಲಕ್ಷ ಕೆ.ಜಿ, ಮಳಗಂಗಾ ಡೇರಿಯಿಂದ 15.8 ಲಕ್ಷ ಕೆ.ಜಿ ಮತ್ತು ಎಆರ್ ಡೇರಿಯಿಂದ 0.68 ಲಕ್ಷ ಕೆ.ಜಿ ಕಲಬೆರಕೆ ತುಪ್ಪವನ್ನು ಪೂರೈಸಲಾಗಿದೆ. ಹಸುವಿನ ಹಾಲು ಅಥವಾ ಬೆಣ್ಣೆ ಇಲ್ಲದೆ ತುಪ್ಪ ಉತ್ಪಾದಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

ಆರೋಪಿಗಳು ಹಸುವಿನ ಶುದ್ಧ ತುಪ್ಪದ ಬದಲಿಗೆ ಕೋಲ್ಕತ್ತದ ಬ್ಯೂಜ್‌ ಬಡ್ಜ್‌ ಕಂಪನಿಯಿಂದ ಪಡೆದ 5.2 ಲಕ್ಷ ಕೆ.ಜಿ ಸಂಸ್ಕರಿಸಿದ ಪಾಮ್‌ ಆಯಿಲ್‌, 2 ಲಕ್ಷ ಕೆ.ಜಿ ಪಾಮ್‌ ಕರ್ನಲ್‌ ಎಣ್ಣೆ, ಹರ್ಷ್ ಟ್ರೇಡಿಂಗ್ ಮತ್ತು ಫ್ರೆಶ್ ಡೈರಿ ಫುಡ್ಜ್‌ ಪ್ರೈವೆಟ್‌ ಲಿಮಿಟೆಡ್‌ನಿಂದ 2.5 ಲಕ್ಷ ಕೆ.ಜಿ ಪಾಮೊಲಿನ್‌ನಂತಹ ಕಲಬೆರಕೆ ವಸ್ತುಗಳನ್ನು ಬಳಸಿದ್ದಾರೆ. ಈ ವಸ್ತುಗಳನ್ನು ಅಲ್ಪ ಪ್ರಮಾಣದ ಶುದ್ಧ ತುಪ್ಪ, ಬೀಟಾ–ಕೆರೋಟಿನ್‌, ಅಸಿಟಿಕ್‌ ಆ್ಯಸಿಡ್‌ ಎಸ್ಟರ್‌ ಮತ್ತು ಸಿಂಥೆಟಿಕ್‌ ತುಪ್ಪದ ಸುವಾಸನೆಯಂತಹ ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು. ಒಟ್ಟು 68 ಲಕ್ಷ ಕೆ.ಜಿ ನಕಲಿ ತುಪ್ಪವನ್ನು ಉತ್ಪಾದಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಚಂದ್ರಬಾಬು ನಾಯ್ಡು ಕ್ಷಮೆಯಾಚನೆಗೆ ಪಟ್ಟು

ತಿರುಮಲ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ಯಾವುದೇ ಪ್ರಾಣಿಗಳ ಕೊಬ್ಬು ಕಂಡುಬಂದಿಲ್ಲ ಎಂದು ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ ಸಲ್ಲಿಸಿದ ಅಂತಿಮ ಆರೋಪಪಟ್ಟಿಯಲ್ಲಿ ದೃಢಪಟ್ಟಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೊಳಕು ರಾಜಕೀಯದ ರಾಯಭಾರಿಯಾಗಿದ್ದು, ಲಡ್ಡು ಪ್ರಸಾದ ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಲಡ್ಡು ವಿಚಾರದಲ್ಲಿ ನಾಯ್ಡು ರಾಜಕೀಯ ಲಾಭ ಪಡೆದಿದ್ದಾರೆ. ಅವರು ಕೂಡಲೇ ವೆಂಕಟೇಶ್ವರ ಸ್ವಾಮಿ ಭಕ್ತರಲ್ಲಿ ಕ್ಷಮೆಯಾಚಿಸಬೇಕು ಎಂದು ವೈಎಸ್‌ಆರ್‌ಸಿಪಿ ರಾಜ್ಯಸಭಾ ಸದಸ್ಯ ಮತ್ತು ಟಿಟಿಡಿ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.