ADVERTISEMENT

2026 ಜನವರಿ 14: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಪ್ರಜಾವಾಣಿ ವಿಶೇಷ
Published 14 ಜನವರಿ 2026, 2:26 IST
Last Updated 14 ಜನವರಿ 2026, 2:26 IST
   

ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಮಾರ್ಚ್‌ ಮೊದಲ ವಾರದಲ್ಲಿ ಬಜೆಟ್‌ ಮಂಡನೆ: ಸಿದ್ದರಾಮಯ್ಯ

ಸಿದ್ದರಾಮಯ್ಯ

‘ಬಹುತೇಕ, ಮಾರ್ಚ್‌ ಮೊದಲ ವಾರದಲ್ಲಿ ರಾಜ್ಯ ಬಜೆಟ್‌ ಮಂಡಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಅವರು, ‘ಬಜೆಟ್‌ ಸಿದ್ಧತೆಗಳು ಆರಂಭವಾಗಿವೆ’ ಎಂದು ತಿಳಿಸಿದ್ದಾರೆ.

ADVERTISEMENT

ಚರ್ಚೆಗಾಗಿ ದೆಹಲಿಗೆ ಬನ್ನಿ: ಸಿ.ಎಂ, ಡಿಸಿಎಂಗೆ ಆಹ್ವಾನ ನೀಡಿದ ರಾಹುಲ್ ಗಾಂಧಿ

ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯಲ್ಲಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ‘ದೆಹಲಿಗೆ ಬನ್ನಿ’ ಎಂದು ಆ ಪಕ್ಷದ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ರಾಜ್ಯದ 12 ನದಿಗಳು ಕಲುಷಿತ

ನಗರಸಭೆ, ಪುರಸಭೆ, ಹಳ್ಳಿಗಳ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುವ ಗೃಹತ್ಯಾಜ್ಯ ಮತ್ತು ಕೈಗಾರಿಕೆಗಳ ಕೊಳಚೆ ನೀರು ಸೇರ್ಪಡೆಯಿಂದಾಗಿ ರಾಜ್ಯದ 12 ಪ್ರಮುಖ ನದಿಗಳು ಕಲುಷಿತಗೊಂಡಿವೆ. ಕಾವೇರಿ, ಕಬಿನಿ, ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಭದ್ರಾ, ತುಂಗಾ, ಕಾಗಿನ, ಕೃಷ್ಣಾ, ಶಿಂಷಾ, ಭೀಮಾ, ನೇತ್ರಾವತಿ ನದಿಗಳಿಗೆ ಒಳಚರಂಡಿ, ಕೊಳಚೆ ನೀರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸೇರ್ಪಡೆಯಾಗಿ ಜಲಚರಗಳಿಗೆ ಆಪತ್ತು ಎದುರಾಗಿದೆ. ಸುಮಾರು 700 ಕಿ.ಮೀ.ನಷ್ಟು ನದಿಯ ನೀರು ಮಲಿನಗೊಂಡಿದೆ.

ಬೆಂಗಳೂರು: 26 ಮಂದಿ ಶಂಕಿತ ಬಾಂಗ್ಲಾ ಅಕ್ರಮ ವಲಸಿಗರ ವಶ

ಬಂಧನ

ಬೆಂಗಳೂರು ನಗರದ ವಿವಿಧೆಡೆ ನೆಲಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು, ಎಲೆಕ್ಟ್ರಾನಿಕ್‌ ಸಿಟಿ ಉಪ ವಿಭಾಗದ ಎರಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನೆಲಸಿದ್ದ 26 ಮಂದಿ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

Gold & Silver Price: ಬೆಳ್ಳಿ ಬೆಲೆ ಕೆ.ಜಿಗೆ ₹2.71 ಲಕ್ಷ; ಚಿನ್ನದ ದರವೂ ಏರಿಕೆ

ನವದೆಹಲಿಯ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಹೊಸ ದಾಖಲೆ ಬರೆದಿದೆ. ಕೆ.ಜಿ. ಬೆಳ್ಳಿಯ ಬೆಲೆಯು ₹6,000 ಹೆಚ್ಚಾಗಿ ₹2.71 ಲಕ್ಷಕ್ಕೆ ತಲುಪಿದೆ. ಶೇಕಡ 99.9ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂ.ಗೆ ₹400ರಷ್ಟು ಹೆಚ್ಚಾಗಿದ್ದು ದಾಖಲೆಯ ₹1,45,000ಕ್ಕೆ ತಲುಪಿದೆ.

'ಆಪರೇಷನ್ ಸಿಂಧೂರ' ಮುಂದುವರಿದಿದೆ: ಪಾಕ್‌‍ಗೆ ಸೇನಾ ಮುಖ್ಯಸ್ಥರಿಂದ ಸ್ಪಷ್ಟ ಸಂದೇಶ

ಆಪರೇಷನ್‌ ಸಿಂಧೂರ ಇನ್ನೂ ಜಾರಿಯಲ್ಲಿಯೇ ಇದೆ. ಎದುರಾಳಿಗಳು ದುಸ್ಸಾಹಸ ತೋರಿದರೆ ಅದಕ್ಕೆ ತಕ್ಕ ತಿರುಗೇಟು ನೀಡಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರು ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇರಾನ್‌: ಪ್ರತಿಭಟನೆಯಿಂದ ಭಾರಿ ಸಂಖ್ಯೆಯ ಸಾವು

ಆಡಳಿತ ವಿರೋಧಿ ಪ್ರತಿಭಟನಕಾರರ ಮೇಲೆ ಇರಾನ್‌ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ವರದಿ ಯಾಗುತ್ತಿರುವ ಹಿಂಸಾಚಾರ ಕುರಿತು ವ್ಯಾಪಕ ಆತಂಕ ವ್ಯಕ್ತವಾಗುತ್ತಿದೆ. ಈ ವೇಳೆ ಮೃತಪಟ್ಟವರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ಇದೇ ಮೊದಲ ಬಾರಿಗೆ ಈ ಕುರಿತು ಮಾಹಿತಿ ಪ್ರಸಾರ ಮಾಡಿರುವ ಸರ್ಕಾರಿ ಒಡೆತನದ ಸುದ್ದಿವಾಹಿನಿ, ‘ಪ್ರತಿಭಟನಕಾರರ ವಿರುದ್ಧ ಕ್ರಮ ಕೈಗೊಂಡ ವೇಳೆ ಭಾರಿ ಸಂಖ್ಯೆಯಲ್ಲಿ ಸಾವು ಸಂಭವಿಸಿವೆ’ ಎಂದು ಹೇಳಿದೆ.

PV Web Exclusive: ಬೆಳವಲದ ನಾಡಲ್ಲಿ ಶ್ರೀಗಂಧ ಕೃಷಿ ಪ್ರಯೋಗ

ಹುಬ್ಬಳ್ಳಿಯ ರಾಜು ಪಟಾಡಿಯಾ ಅವರು ಧಾರವಾಡ ತಾಲ್ಲೂಕಿನ ವೆಂಕಟಾಪುರ ಸಮೀಪ 25 ಎಕರೆಯಲ್ಲಿ ಶ್ರೀಗಂಧದ ಗಿಡಗಳನ್ನು ನೆಟ್ಟು ನಿರ್ವಹಿಸುತ್ತಿದ್ದಾರೆ. ಶ್ರೀಗಂಧ ಕೃಷಿ ಪ್ರಯೋಗದಲ್ಲಿ ತೊಡಗಿದ್ದಾರೆ.

WPL 2026 | ಹರ್ಮನ್‌ಪ್ರೀತ್‌ ಕೌರ್‌ ಆಟ: ಗುಜರಾತ್ ವಿರುದ್ಧ ಮುಂಬೈಗೆ ಜಯ

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಅಜೇಯ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡವು ಮಂಗಳವಾರ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಗುಜರಾಜ್‌ ಜೈಂಟ್ಸ್‌ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.‌ 193 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್‌ ಮುಂಬೈ ತಂಡವು ನಾಲ್ಕು ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತು.

‘ಟಾಕ್ಸಿಕ್’ ಟೀಸರ್ ಹಸಿಬಿಸಿ ದೃಶ್ಯ: ಬಿಸಿಬಿಸಿ ಚರ್ಚೆ

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಈಚೆಗೆ ಬಿಡುಗಡೆಯಾಗಿದ್ದು, 'ಆಕ್ಷೇಪಾರ್ಹ ದೃಶ್ಯ' ಹೊಂದಿದೆ ಎಂಬ ಕಾರಣಕ್ಕೆ ವ್ಯಾಪಕ ಚರ್ಚೆಗೆ ಒಳಗಾಗಿದೆ. ವೃದ್ಧರಿಂದ ಹಿಡಿದು ಮಕ್ಕಳವರೆಗೆ ಯೂಟ್ಯೂಬ್ ಬಳಕೆದಾರರು ಇರುವುದರಿಂದ ಟೀಸರ್‌ನಲ್ಲಿರುವ ವಯಸ್ಕ ದೃಶ್ಯಗಳು ಅಪ್ರಾಪ್ತರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ಸಾಮಾಜಿಕ ವಲಯದಲ್ಲಿ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.