ADVERTISEMENT

10 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 14:32 IST
Last Updated 10 ಫೆಬ್ರುವರಿ 2026, 14:32 IST
   

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ರೇಣುಕಸ್ವಾಮಿ ಕೊಲೆ ಪ್ರಕರಣ: ಪ್ರದೂಷ್ ವಿರುದ್ಧದ ಆರೋಪ ಕೈಬಿಡಲು ಹೈಕೋರ್ಟ್ ನಕಾರ

'ನಿಮ್ಮ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟೇ ತಿರಸ್ಕರಿಸಿರುವಾಗ ದೋಷಾರೋಪಗಳಿಂದ ಕೈಬಿಡಬೇಕು ಎಂದು ಹೇಗೆ ತಾನೇ ಕೋರುತ್ತೀರಿ’ ಎಂದು ಹೈಕೋರ್ಟ್‌, ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗೆ ಪ್ರಶ್ನಿಸಿದೆ. ‘ಈ ಪ್ರಕರಣದಲ್ಲಿ ಪೊಲೀಸರು ನನ್ನ ವಿರುದ್ಧ ಹೊರಿಸಿರುವ, ಕೊಲೆ ಮತ್ತು ಕೊಲೆ ಅಪರಾಧದ ಜಂಟಿ ಹೊಣೆಗಾರಿಕೆ ಆರೋಪಗಳಿಂದ ಕೈಬಿಡಲು ವಿಚಾರಣಾ ಕೋರ್ಟ್‌ಗೆ ನಿರ್ದೇಶಿಸಬೇಕು’ ಎಂದು ಕೋರಿ 14ನೇ ಆರೋಪಿ ಪ್ರದೂಷ್ ಎಸ್‌.ರಾವ್ ಅಲಿಯಾಸ್ ಪ್ರದೂಷ್‌ ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಎ.ಐ ಕಂಟೆಂಟ್‌ಗಳ ನಿಯಂತ್ರಣಕ್ಕೆ ಕೇಂದ್ರದಿಂದ ಕಠಿಣ ಕಾನೂನು: ಫೆ. 20ರಿಂದಲೇ ಜಾರಿ

ಆನ್‌ಲೈನ್‌ ವೇದಿಕೆಗಳಲ್ಲಿ ಡೀಪ್‌ ಫೇಕ್‌ ಹಾಗೂ ಕೃತಕ ಬುದ್ದಿಮತ್ತೆ (ಎ.ಐ) ಮೂಲಕ ಸೃಜಿಸಿದ ವಿಷಯವಸ್ತು (ಕಂಟೆಂಟ್) ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಂಗಳವಾರ ಕಠಿಣ ಆದೇಶ ಹೊರಡಿಸಿದ್ದು, ಯಾವುದೇ ಪ್ರಾಧಿಕಾರ ಅಥವಾ ಕೋರ್ಟ್ ಸೂಚಿಸಿದ ಮೂರು ಗಂಟೆಯೊಳಗೆ ಅಂತಹ ಪೋಸ್ಟ್‌ಗಳನ್ನು ತೆಗೆದುಹಾಕಬೇಕು ಎಂದಿದೆ.

ADVERTISEMENT

ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಪದಚ್ಯುತಿಗೆ ವಿರೋಧ ಪಕ್ಷಗಳಿಂದ ನೋಟಿಸ್ ಸಲ್ಲಿಕೆ

ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ಮಂಗಳವಾರ ನೋಟಿಸ್ ನೀಡಿವೆ. ಓಂ ಬಿರ್ಲಾ ‍ಪದಚ್ಯುತಗೊಳಿಸುವ ನೋಟಿಸ್‌ಗೆ 119 ಸಂಸದರು ಸಹಿ ಹಾಕಿದ್ದು, ಟಿಎಂಸಿ ಸಂಸದರು ಇದರಿಂದ ದೂರ ಉಳಿದಿದ್ದಾರೆ.

ಕೆನಡಾದಲ್ಲಿ ನೆಲಮಂಗಲದ ಚಂದನ್ ಹತ್ಯೆ: ವಿದೇಶಾಂಗ ಇಲಾಖೆ ಜೊತೆ ಸಂಪರ್ಕ– ಪರಮೇಶ್ವರ

ಕೆನಡಾದಲ್ಲಿ ಅಪರಿಚಿತರಿಂದ ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟಿರುವ ನೆಲಮಂಗಲ ಮೂಲದ ಚಂದನ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಆದಷ್ಟು ಶೀಘ್ರ ಭಾರತಕ್ಕೆ ತರಲು ರಾಜ್ಯ ಪೊಲೀಸ್ ಇಲಾಖೆಯ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರ ಕೋರಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ.

ಅಬಕಾರಿ ಲಂಚ: ಅಧಿಕಾರಿಗಳಿಂದ ತಮ್ಮ ಹೆಸರು ದುರುಪಯೋಗ ಎಂದ ಸಚಿವ ತಿಮ್ಮಾಪುರ

‘ಮದ್ಯ ಮಾರಾಟ ಸನ್ನದು ನೀಡುವಲ್ಲಿ ಲಂಚ ಪಡೆಯಲು ಅಧಿಕಾರಿಗಳು ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹಾಗೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

ನರವಣೆ ಪುಸ್ತಕ ‌| ಇಬ್ಬರಲ್ಲಿ ಸುಳ್ಳು ಹೇಳುತ್ತಿರುವುದು ಯಾರು?: ರಾಹುಲ್ ಗಾಂಧಿ

ತಮ್ಮ ಕೃತಿ ‘ಈಗ ಲಭ್ಯ’ ಎಂಬ ಮಾಹಿತಿಯನ್ನು ಸೇನೆಯ ಮಾಜಿ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು 2023ರ ಡಿಸೆಂಬರ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಹೇಳಿದ್ದಾರೆ. ಈ ಮೂಲಕ ಅವರು, ‘ಜನರಲ್‌ ನರವಣೆ ಅವರ ಪುಸ್ತಕವನ್ನು ಇನ್ನೂ ಪ್ರಕಟಿಸಿಲ್ಲ’ ಎಂಬ ಪ್ರಕಾಶನ ಸಂಸ್ಥೆ ಪೆಂಗ್ವಿನ್‌ ರ್‍ಯಾಂಡಮ್ ಹೌಸ್‌ ಇಂಡಿಯಾ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ‘ಈ ಕೃತಿಯ ವಿಚಾರದಲ್ಲಿ ನಾನು ಪೆಂಗ್ವಿನ್‌ ರ‍್ಯಾಂಡಮ್‌ ಹೌಸ್‌ ಇಂಡಿಯಾ ಸಂಸ್ಥೆಗಿಂತ ಜನರಲ್‌ ನರವಣೆ ಅವರ ಮಾತನ್ನು ನಂಬುತ್ತೇನೆ’ ಎಂದೂ ಹೇಳಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣ: ಅನಿಲ್ ಅಂಬಾನಿ, ಟೀನಾ ಅಂಬಾನಿಗೆ ಇ.ಡಿ ಸಮನ್ಸ್‌

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಅನಿಲ್ ಅಂಬಾನಿ  ಮತ್ತು ಅವರ ಪತ್ನಿ ಟೀನಾ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ನೀಡಿದೆ.

ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪ್ರಕಟವಾಗಿಲ್ಲ: ಪೆಂಗ್ವಿನ್ ಇಂಡಿಯಾ

ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಯ ಪ್ರಕಾಶನ ಹಕ್ಕುಗಳನ್ನು ಹೊಂದಿರುವುದಾಗಿ ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಿದೆ.

ಬಾಂಗ್ಲಾ ಉತ್ಪನ್ನಗಳಿಗೆ ಅಮೆರಿಕದಿಂದ ತೆರಿಗೆ ಕಡಿತ; ಜವಳಿ ಸರಕುಗಳಿಗೆ ಬಂಪರ್

ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಬಾಂಗ್ಲಾದೇಶದ ಉತ್ಪನ್ನಗಳ ಮೇಲಿನ ಸುಂಕವನ್ನು ಡೊನಾಲ್ಡ್ ಟ್ರಂಪ್ ಸರ್ಕಾರ ಸೋಮವಾರ ಶೇ 19ಕ್ಕೆ ಇಳಿಸಿದೆ. ಇದೇ ಸಂದರ್ಭದಲ್ಲಿ ಅಮೆರಿಕದ ವಸ್ತುಗಳಿಂದ ತಯಾರಿಸಿದ ಕೆಲವು ಜವಳಿ ಮತ್ತು ಉಡುಪುಗಳ ಮೇಲಿನ ಸುಂಕಕ್ಕೂ ವಿನಾಯಿತಿ ನೀಡಿದೆ.

T20 World Cup: ಡಚ್ಚರ ಗೆಲುವಿನಲ್ಲಿ ‘ಬಾಸ್‌’ ಮಿಂಚು; ಸೂಪರ್ 8 ಹಂತದ ಆಸೆ ಜೀವಂತ

ಬಾಸ್‌ ಡಿ ಲೀಡೆ (20ಕ್ಕೆ2 ಮತ್ತು ಔಟಾಗದೇ 72) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ನೆದರ್ಲೆಂಡ್ಸ್ ತಂಡವು ಟಿ20 ವಿಶ್ವಕಪ್ ‘ಎ’ ಗುಂಪಿನ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಸೋಲಿಸಿತು. ಆ ಮೂಲಕ ಸೂಪರ್ 8 ಹಂತಕ್ಕೇರುವ ಅವಕಾಶ ಜೀವಂತವಾಗಿ ಉಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.