ADVERTISEMENT

ಮೋದಿ–ಖಾನ್‌ ಜತೆ ಟ್ರಂಪ್‌ ಫೋನ್‌ ಮಾತುಕತೆ: ಕಾಶ್ಮೀರ, ವಾಣಿಜ್ಯ ವ್ಯವಹಾರಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 4:41 IST
Last Updated 21 ಆಗಸ್ಟ್ 2019, 4:41 IST
   

ನವದೆಹಲಿ (ಪಿಟಿಐ): ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರೊಂದಿಗೆ ಸೋಮವಾರ ದೂರವಾಣಿ ಸಂಭಾಷಣೆ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕಾಶ್ಮೀರದ ವಿಚಾರವಾಗಿ ಎರಡೂ ದೇಶಗಳ ನಡುವೆ ಮನೆ ಮಾಡಿರುವ ದ್ವೇಷದ ವಾತಾವರಣ ನಿವಾರಣೆಯಾಗಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದು, ‘ವಾಣಿಜ್ಯ ವ್ಯವಹಾರ, ಕಾರ್ಯತಂತ್ರ ಸಹಭಾಗಿತ್ವದ ಕುರಿತು ನಾನು ಇಂದು ನನ್ನ ಗೆಳೆಯರಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರೊಂದಿಗೆ ಸಮಾಲೋಚನೆ ನಡೆಸಿದೆ. ಎಲ್ಲಕ್ಕೂ ಮುಖ್ಯವಾಗಿ, ಕಾಶ್ಮೀರದ ವಿಚಾರವಾಗಿ ಆ ಎರಡೂ ದೇಶಗಳ ನಡುವೆ ಮನೆ ಮಾಡಿರುವ ಆತಂಕ, ದ್ವೇಷದ ವಾತಾವರಣ ನಿವಾರಣೆಗೊಳ್ಳಬೇಕಾದ ಅಗತ್ಯವನ್ನು ತಿಳಿಸಿದ್ದೇನೆ. ಕಠಿಣ ಸನ್ನಿವೇಶದಲ್ಲಿ ಉತ್ತಮ ಸಮಾಲೋಚನೆ ನಡೆಯಿತು,’ ಎಂದು ಅವರು ಹೇಳಿಕೊಂಡಿದ್ದಾರೆ.

ADVERTISEMENT

ಮಾತುಕತೆ ವೇಳೆ ಮೋದಿ ಅಮೆರಿಕದೊಂದಿಗಿನ ವಾಣಿಜ್ಯ ವ್ಯವಹಾರಗಳ ಕುರಿತು ಮಾತನಾಡಿದ್ದಾರೆ. ‘ಭಾರತದ ವಾಣಿಜ್ಯ ವ್ಯವಹಾರಗಳ ಸಚಿವರು ಅಮೆರಿಕದ ವಾಣಿಜ್ಯ ವ್ಯವಹಾರಗಳ ಪ್ರತಿನಿಧಿಯನ್ನು ಅತಿ ಶೀಘ್ರದಲ್ಲೇ ಭೇಟಿಯಾಗಿ, ದ್ವಿಪಕ್ಷೀಯ ವಾಣಿಜ್ಯ ವ್ಯವಹಾರಗಳ ಕುರಿತು ಮರುಸಮಾಲೋಚನೆ ನಡೆಸಲಿದ್ದಾರೆ,’ ಎಂದು ತಿಳಿಸಿದ್ದಾರೆ.

ಮೋದಿ ಮತ್ತು ಟ್ರಂಪ್‌ ನಡುವೆ ವಾಣಿಜ್ಯ ವ್ಯವಹಾರಗಳ ಕುರಿತೂ ಚರ್ಚಿಸಲಾಗಿದೆ ಎಂದು ವಾಷಿಂಗ್ಟನ್‌ ಸ್ಪಷ್ಟಪಡಿಸಿದೆ.

ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಈಗಾಗಲೇ ಪ್ರತಿಕೂಲ ಪರಿಸ್ಥಿತಿ ಮನೆ ಮಾಡಿತ್ತು. ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದು ಮಾಡುತ್ತಲೇ ಅದು ಮತ್ತಷ್ಟು ಉಲ್ಬಣಗೊಂಡಿದೆ. ಎರಡೂ ದೇಶಗಳ ನಡುವೆ ದ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಭಾರತದ ನಿರ್ಧಾರದಿಂದ ಕುಪಿತಗೊಂಡಿರುವ ಪಾಕ್‌, ಭಾರತೊಂದಿಗಿನ ವಾಣಿಜ್ಯ ವ್ಯವಹಾರ, ಸಾರಿಗೆ ವ್ಯವಸ್ಥೆಯನ್ನು ಕಡಿದುಕೊಂಡಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.