ರಾಜ್ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ
ಪಿಟಿಐ ಚಿತ್ರ
ಮುಂಬೈ: 'ಠಾಕ್ರೆ' ಸಹೋದರರಾದ ಉದ್ಧವ್ ಹಾಗೂ ರಾಜ್, ಮರಾಠಿ ಭಾಷೆ ವಿಚಾರವಾಗಿ ಹದಿನೈದು ದಿನಗಳ ಹಿಂದೆ (ಶನಿವಾರ, ಜುಲೈ 5ರಂದು) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ, ಶಿವಸೇನಾ (ಯುಬಿಟಿ) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಪಕ್ಷಗಳು ರಾಜಕೀಯವಾಗಿ ಒಂದಾಗಲಿವೆ ಎಂಬ ಚರ್ಚೆಗಳು ಬಿರುಸುಪಡೆದುಕೊಂಡಿವೆ.
ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲೇ ಉಭಯ ನಾಯಕರು ಕೈಜೋಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಶಿವಸೇನಾದ ಮುಖವಾಣಿ 'ಸಾಮ್ನಾ'ಗೆ ನೀಡಿರುವ ಸಂದರ್ಶನದಲ್ಲಿ ರಾಜ್ ಪಕ್ಷದೊಂದಿಗಿನ ಮೈತ್ರಿಯ ಬಗ್ಗೆ ಮಾತನಾಡಿರುವ ಉದ್ಧವ್, 'ಮಾತುಕತೆ ನಡೆಯಲಿವೆ' ಎಂದು ಹೇಳಿದ್ದಾರೆ.
ಉದ್ಧವ್ ಅವರು ಶಿವಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಮಗ. ರಾಜ್ ಅವರು, ಬಾಳಾ ಅವರ ಸಹೋದರ ಶ್ರೀಕಾಂತ್ ಠಾಕ್ರೆ ಪುತ್ರ. 2024ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾ (ಯುಬಿಟಿ) ಹಾಗೂ ಎಂಎನ್‌ಎಸ್‌ಗೆ ಎದುರಾದ ಮುಖಭಂಗದ ನಂತರ, ಇವರಿಬ್ಬರೂ ಒಂದಾಗುವುದು ಅನಿವಾರ್ಯವೆನ್ನುವಂತಾಗಿದೆ.
ರಾಜಕೀಯದ ಕಾರಣಕ್ಕೆ ಬಹುಕಾಲದಿಂದ ದೂರವಾಗಿದ್ದ ಈ ಇಬ್ಬರು, ರಾಜ್ಯ ಸರ್ಕಾರದ ತ್ರಿಭಾಷಾ ಸೂತ್ರ ಹಾಗೂ ಹಿಂದಿ ಹೇರಿಕೆಯನ್ನು ವಿರೋಧಿಸಿ ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಆದರೆ, ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದ ನಂತರ, 'ಪ್ರತಿಭಟನಾ ಸಮಾವೇಶ'ದ ಬದಲು 'ವಿಜಯ' ರ್‍ಯಾಲಿ ನಡೆಸಿದ್ದರು.
ಮಿರಾ ರಸ್ತೆಯಲ್ಲಿ ನಡೆದಿದ್ದ ರ್‍ಯಾಲಿ ವೇಳೆ, ರಾಜಕೀಯವಾಗಿ ಒಂದಾಗುವ ಸೂಚನೆಗಳನ್ನು ಉದ್ಧವ್ ಹಾಗೂ ರಾಜ್ ನೀಡಿದ್ದರು.
'ನಾವು ಹಿಂದೂಗಳು. ಹಿಂದಿಗಳಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಹಿಂದುತ್ವದ ಹೆಸರಲ್ಲಿ ಹಿಂದಿಯನ್ನು ಹೇರುವ ಪ್ರಯತ್ನ ಮಾಡಬೇಡಿ. ಅದನ್ನು ನಾವು ಸಹಿಸುವುದಿಲ್ಲ. ಮರಾಠಿ ಹಿತರಕ್ಷಣೆಯನ್ನು ಕಾಪಾಡದ ಯಾರೊಂದಿಗೂ ನಾವು (ಎಂಎನ್‌ಎಸ್) ಸಂಬಂಧ ಮುಂದುವರಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಹಿಂದಿ ಹೇರಿಕೆ ಯತ್ನವು ಬಿಜೆಪಿ ಪಾಲಿಗೆ ಆತ್ಮಹತ್ಯೆ ಇದ್ದಂತೆ' ಎಂದು ರಾಜ್ ಹೇಳಿದ್ದರು.
ರಾಜ್ಯ ಸಭಾ ಸದಸ್ಯ ಹಾಗೂ ಸಾಮ್ನಾದ ಕಾರ್ಯಕಾರಿ ಸಂಪಾದಕ ಸಂಜಯ್ ರಾವುತ್ ನಡೆಸಿದ ಸಂದರ್ಶನದಲ್ಲಿ ಉದ್ಧವ್ ಅವರು ರಾಜ್ ಹೇಳಿಕೆಗಳನ್ನು ಪುನರುಚ್ಛರಿಸುತ್ತಲೇ, ಮೈತ್ರಿ ಸಾಧ್ಯತೆಯ ಕುರಿತು ಮಾತನಾಡಿದ್ದಾರೆ.
ಎರಡು ದಶಕಗಳ ನಂತರ ಒಟ್ಟಿಗೆ ಸೇರಿದ್ದೀರಾ ಎಂಬ ಪ್ರಶ್ನೆಗೆ, 'ಇದರಲ್ಲಿ ಯಾರಿಗೆ ಸಮಸ್ಯೆ ಇದೆ?' ಎಂದು ಉದ್ಧವ್ ಮರುಪ್ರಶ್ನೆ ಹಾಕಿದ್ದಾರೆ. ಮುಂದುವರಿದು, 'ಯಾರಿಗಾದರೂ ಸಮಸ್ಯೆಯಾಗುತ್ತದೆ ಎಂದರೆ, ಅದರ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು' ಎಂದೂ ಕೇಳಿದ್ದಾರೆ.
'ನಾವು ಒಂದಾಗಿರುವುದು ಮರಾಠಿಗರಿಗೆ ಮಾತ್ರವಲ್ಲ, ಇತರ ಭಾಷಿಕರಲ್ಲೂ ಸಂತಸ ತಂದಿದೆ. ಹಿಂದಿ ಮಾತನಾಡುವ ಹಾಗೂ ಮುಸ್ಲಿಂ ಸಹೋದರರಿಗೂ ಇದರಿಂದ ಸಂತೋಷವಾಗಿದೆ ಎಂದು ಖಚಿತವಾಗಿ ಹೇಳಬಲ್ಲೆ. ಅವರು ಬಹಿರಂಗವಾಗಿಯೇ ಸಂಭ್ರಮಿಸಿದ್ದಾರೆ. ಗುಜರಾತಿ ಮತ್ತು ಹಿಂದಿ ಮಾತನಾಡುವ ಜನರು ಕೂಡ 'ನೀವು ಸರಿಯಾಗಿ ಮಾಡಿದ್ದೀರಿ' ಎಂದಿದ್ದಾರೆ. ಅವರೆಲ್ಲರ ಸಂತೋಷವನ್ನು ನಾನು ಕಾಣಬಲ್ಲೆ. ಆದರೆ, ನಾವು ಒಂದಾಗುವುದರಿಂದ ಯಾರಿಗಾದರೂ ಹೊಟ್ಟೆ ನೋವಾದರೆ, ಅದನ್ನು ಅವರೇ ಅನುಭವಿಸಬೇಕು. ಆ ಬಗ್ಗೆ ಗಮನ ನೀಡುವುದಿಲ್ಲ' ಎಂದು ಹೇಳಿದ್ದಾರೆ.
ರಾಜ್ಯದ ಮರಾಠಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆಯ ಭಾಗವಾಗಿ 1ರಿಂದ 5ನೇ ತರಗತಿವರೆಗೆ ಹಿಂದಿಯನ್ನು ಹೇರಲು ಮುಂದಾಗಿದ್ದ ಸರ್ಕಾರ, ತನ್ನ ನಿರ್ಧಾರ ಬದಲಿಸಿಕೊಂಡಿದ್ದು ನಮ್ಮಿಂದಲೇ (ಠಾಕ್ರೆ ಸಹೋದರರಿಂದಲೇ) ಎಂದೂ ಉದ್ಧವ್ ಹೇಳಿಕೊಂಡಿದ್ದಾರೆ.
ರಾಜಕೀಯ ಮೈತ್ರಿ ಕುರಿತ ಊಹಾಪೋಹಗಳ ಕುರಿತು, '20 ವರ್ಷಗಳ ಬಳಿಕ ನಾವು ಒಂದಾಗಿದ್ದೇವೆ. ಎಲ್ಲದರಲ್ಲಿಯೂ ರಾಜಕೀಯ ಬೆರೆಸಬಾರದು. ಜನರಿಗಾಗಿ, ಮಹಾರಾಷ್ಟ್ರಕ್ಕಾಗಿ ಏನೆಲ್ಲ ಮಾಡಲು ಸಾಧ್ಯವೋ ಅದಕ್ಕೆ ಸಿದ್ಧರಿದ್ದೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
ಮೈತ್ರಿ ಕುರಿತು ರಾಜ್ ಅವರೊಂದಿಗೆ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ, 'ಮಾತುಕತೆ ನಡೆಯಲಿವೆ. 20 ವರ್ಷಗಳ ನಂತರ ನಾವು ಒಂದಾಗಿದ್ದೇವೆ. ಇದೇನು ಸಣ್ಣ ವಿಚಾರವಲ್ಲ. ಹಾಗಾಗಿಯೇ ನಾನು ರ್‍ಯಾಲಿ ವೇಳೆ ಮಾಡಿದ ಭಾಷಣದಲ್ಲಿ, ನಮ್ಮ ಭಾಷಣಗಳನ್ನು ಆಲಿಸುವುದಕ್ಕಿಂತಲೂ ಒಬ್ಬರನ್ನೊಬ್ಬರು ನೋಡಿಕೊಳ್ಳುವುದೇ ನಮಗೆ ಮುಖ್ಯ ಎಂದು ಹೇಳಿದ್ದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.