ಗೂಡ್ಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ದೃಶ್ಯ
Credit: X/@ajmalji
ಚೆನ್ನೈ: ತಮಿಳುನಾಡಿನ ತಿರುವಳ್ಳೂರಿನಲ್ಲಿ ಡಿಸೇಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿಗೆ ಭಾನುವಾರ ಬೆಳಿಗ್ಗೆ 5.30ಕ್ಕೆ ಬೆಂಕಿ ಹತ್ತಿಕೊಂಡಿದೆ.
ಯಾವುದೇ ಪ್ರಾಣ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳನ್ನು ಸಂಪರ್ಕಿಸುವ ಚೆನ್ನೈ– ಅರಕ್ಕೊನಂ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿತ್ತು.
ಹೀಗಾಗಿ, ರೈಲ್ವೆ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಕರೆದೊಯ್ಯಲು ರಾಜ್ಯ ಸಾರಿಗೆ ಸಂಸ್ಥೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ಚೆನ್ನೈ ಹಾರ್ಬರ್‌ನಿಂದ ವಾಲಜ ರೋಡ್‌ಗೆ ಈ ರೈಲು ತೆರಳುತ್ತಿತ್ತು. ತಿರುವಳ್ಳೂರು ರೈಲು ನಿಲ್ದಾಣವನ್ನು ದಾಟಿದ ಬಳಿಕ ಈ ಅವಘಡ ಸಂಭವಿಸಿದೆ. ಮೂರನೇ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಲೋಕೊಪೈಲಟ್ ರೈಲನ್ನು ನಿಲ್ಲಿಸಿದರು. ಬಳಿಕ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಯಿತು ಎಂದು ದಕ್ಷಿಣ ರೈಲ್ವೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಹಲವು ಬೋಗಿಗಳು ಹಳಿ ತಪ್ಪಿದ್ದವು ಮತ್ತು 18 ಬೋಗಿಗಳು ಸುಟ್ಟು ಕರಕಲಾಗಿವೆ. ಸುರಕ್ಷಿತವಾಗಿರುವ 30 ಬೋಗಿಗಳನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ, ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಮತ್ತು ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.