ಮುಂಬೈ: ಏರ್ ಇಂಡಿಯಾ ವಿಮಾನಗಳು ನಿರಂತರವಾಗಿ ವಿಳಂಬವಾಗುತ್ತಿರುವುದಕ್ಕೆ ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
‘ಏರ್ ಇಂಡಿಯಾ ವಿಮಾನಗಳು ನಿರಂತರವಾಗಿ ವಿಳಂಬವಾಗುತ್ತಿವೆ. ಇದು ಸ್ವೀಕಾರಾರ್ಹವಲ್ಲ! ನಾವು ದುಬಾರಿ ದರವನ್ನು ಪಾವತಿಸುತ್ತೇವೆ. ಆದರೆ, ವಿಮಾನಗಳು ಎಂದಿಗೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ವೃತ್ತಿಪರರು, ಮಕ್ಕಳು ಮತ್ತು ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಾಗರಿಕ ವಿಮಾನಯಾನ ಸಚಿವರು ಕೂಡಲೇ ಕ್ರಮ ಕೈಗೊಂಡು ಏರ್ ಇಂಡಿಯಾ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಸುಪ್ರಿಯಾ ಸುಳೆ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸುಪ್ರಿಯಾ ಅವರು ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವು 1 ಗಂಟೆ 19 ನಿಮಿಷ ವಿಳಂಬವಾಗಿತ್ತು. ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರ ಗಮನಕ್ಕೆ ತಂದಿದ್ದಾರೆ. ಜತೆಗೆ, ದುಬಾರಿ ದರ ಪಾವತಿಸಿದರೂ ವಿಮಾನಗಳ ವಿಳಂಬವು ಪ್ರಯಾಣಿಕರ ಮೇಲೆ ಪರಿಣಾಮ ಬೀರುವ ನಿರಂತರ ಪ್ರವೃತ್ತಿಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಏರ್ ಇಂಡಿಯಾದಂತಹ ವಿಮಾನಯಾನ ಸಂಸ್ಥೆಗಳು ಪದೇ ಪದೇ ವಿಳಂಬವಾದರೆ ಕಂಪನಿಯವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಪ್ರಯಾಣಿಕರಿಗೆ ಉತ್ತಮ ಸೇವಾ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಎಂದು ಸುಪ್ರಿಯಾ ಒತ್ತಾಯಿಸಿದ್ದಾರೆ.
‘ವಿಮಾನ ಟ್ರ್ಯಾಕರ್‌ಗಳು ದೋಷಪೂರಿತವಾಗಿದ್ದು, ಇವು ದಾರಿತಪ್ಪಿಸುವ ಫಲಿತಾಂಶ ನೀಡುತ್ತಿವೆ. ಈಚೆಗೆ ನಾನು ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದೆ. ಆದರೆ, ಟ್ರ್ಯಾಕರ್ ತಪ್ಪು ಮಾಹಿತಿ ತೋರಿಸುತ್ತಿತ್ತು. ಟ್ರ್ಯಾಕರ್‌ಗಳ ಸಮಸ್ಯೆಯನ್ನು ನಾಗರಿಕ ವಿಮಾನಯಾನ ಸಚಿವರೊಂದಿಗೆ ಚರ್ಚಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಈಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಭೋಪಾಲ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮುರಿದ ಆಸನ ನೀಡಿದ್ದು, ತಮಗಾದ ತೊಂದರೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಯಾಣಿಕರಿಂದ ಪೂರ್ಣ ಟಿಕೆಟ್ ದರ ಪಡೆಯುವ ವಿಮಾನಯಾನ ಕಂಪನಿಯು ಕಳಪೆ ದರ್ಜೆಯ ಸೌಲಭ್ಯ ಒದಗಿಸಿದೆ. ಹಣಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸದಿರುವುದು ಅನೈತಿಕವಾದುದು. ಪ್ರಯಾಣಿಕರಿಗೆ ಮಾಡುವ ಮೋಸವಾಗಿದೆ ಎಂದು ತಮಗಾದ ಕಹಿ ಅನುಭವವನ್ನು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.