ಕೋಲ್ಕತ್ತದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿತ್ತು.
–ಪಿಟಿಐ ಚಿತ್ರ
ಕೋಲ್ಕತ್ತ: ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಬಿಜೆಪಿಯ ಇಬ್ಬರು ಶಾಸಕರು, ಒಬ್ಬ ನಾಯಕ ಹಾಗೂ ಇತರರ ಮೇಲೆ ಕೋಲ್ಕತ್ತ ಪೊಲೀಸರು ಒಟ್ಟು 7 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ನಡೆದು ಶನಿವಾರಕ್ಕೆ ಒಂದು ವರ್ಷ ಆದ ಕಾರಣ, ಬಿಜೆಪಿ ನಾಯಕರು ಹಾಗೂ ಪ್ರತಿಭಟನಾಕಾರರು ಪಶ್ಚಿಮ ಬಂಗಾಳ ಸರ್ಕಾರದ ಕಾರ್ಯಾಲಯಕ್ಕೆ ಮೆರವಣಿಗೆ ನಡೆಸಿದ್ದರು.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿದೆ. ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದಲ್ಲದೇ ಸಾರ್ವಜನಿಕ ಆಸ್ತಿಗೂ ನಷ್ಟ ಉಂಟು ಮಾಡಿದ ಆರೋಪದಡಿ ಬಿಜೆಪಿ ಶಾಸಕರಾದ ಅಶೋಕ್ ದಿಂಡಾ, ಅಗ್ನಿಮಿತ್ರಾ ಪೌಲ್, ಬಿಜೆಪಿ ನಾಯಕ ಕೌಸ್ತವ್ ಬಾಗ್ಚಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಘರ್ಷದ ವೇಳೆ ಸಂತ್ರಸ್ತ ವೈದ್ಯ ವಿದ್ಯಾರ್ಥಿನಿಯ ತಾಯಿಯ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿ ಹೇಳಿದ್ದಾರೆ.
ಪ್ರತಿಭಟನಾಕಾರರೊಂದಿಗೆ ನಡೆದ ಸಂಘರ್ಷದಲ್ಲಿ ಗಾಯಗೊಂಡಿರುವ ಪೊಲೀಸರು ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಲ್ಕತ್ತ ಪೊಲೀಸ್ ಆಯುಕ್ತ ವರ್ಮಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
‘ಸಿಸಿಟಿವಿ ದೃಶ್ಯಾವಳಿಗಳು, ಇತರ ವಿಡಿಯೊ ತುಣುಕುಗಳು ಮತ್ತು ಡ್ರೋನ್ ಕಣ್ಗಾವಲಿನ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಕಲ್ಕತ್ತ ಹೈಕೋರ್ಟ್‌ನ ನಿರ್ದೇಶನಗಳನ್ನು ಉಲ್ಲಂಘಿಸಿದವರು, ಪೊಲೀಸ್ ಕಾರ್ಯಾಚರಣೆಗೆ ಅಡ್ಡಿಪಡಿಸಿದವರು, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರನ್ನು ಗುರುತಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದೂ ವರ್ಮಾ ಹೇಳಿದ್ದಾರೆ.
2024ರ ಆಗಸ್ಟ್ 9ರಂದು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆಯು ದೇಶದಾದ್ಯಂತ ಆಕ್ರೋಶ ಮೂಡಲು ಕಾರಣವಾಗಿತ್ತು. ಈ ಕೃತ್ಯವನ್ನು ಖಂಡಿಸಿ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು. ಪ್ರಕರಣದ ಅಪರಾಧಿ ಸಂಜಯ್ ರಾಯ್‌ಗೆ ಸಿಯಾಲದಹ ನ್ಯಾಯಾಲಯವು ಜೀವಿತಾವಧಿವರೆಗೆ ಜೈಲು ಶಿಕ್ಷೆ ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.