ADVERTISEMENT

ಭಾರತದ ಮುಂದಿನ ತಲೆನೋವಾದೀತೇ ಇರಾನಿನ ಅಸ್ಥಿರತೆ?

ಗಿರೀಶ್ ಲಿಂಗಣ್ಣ
Published 17 ಜನವರಿ 2026, 10:01 IST
Last Updated 17 ಜನವರಿ 2026, 10:01 IST
   

ಟೆಹರಾನಿನ ಬೀದಿಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡು, ಆರ್ಥಿಕ ಸಮಸ್ಯೆಗಳು ಇರಾನ್ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದರೆ, ಅದರಿಂದ ನಮಗೆ ಏನು ತೊಂದರೆಯಾದೀತು ಎಂದು ಬಹಳಷ್ಟು ಭಾರತೀಯರು ಯೋಚಿಸುವುದು ಸಹಜ. ಆದರೆ, ಈ ಸಹಜ ಪ್ರಶ್ನೆಯ ಉತ್ತರ ಬಹಳಷ್ಟು ಸಂಕೀರ್ಣವಾಗಿದ್ದು, ನಾವು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ದುರ್ಬಲಗೊಂಡ, ಅಥವಾ ಕುಸಿಯುತ್ತಿರುವ ಇರಾನ್ ಈಗಾಗಲೇ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುವ ಈ ಪ್ರದೇಶದಲ್ಲಿ ಸ್ವತಂತ್ರವಾಗಿ ವ್ಯವಹರಿಸುವ ಭಾರತದ ಸಾಮರ್ಥ್ಯಕ್ಕೂ ಅಡಚಣೆ ಉಂಟುಮಾಡುವ ಸಾಧ್ಯತೆಗಳಿವೆ.

ಭಾರತದ ಕಾರ್ಯತಂತ್ರದ ಸ್ಥಾನವನ್ನು ಒಂದು ಚದುರಂಗದ ಮಣೆಯಂತೆ ಕಲ್ಪಿಸಿಕೊಳ್ಳಿ. ಇಲ್ಲಿ ಚೆಸ್ ಬೋರ್ಡಿನ ಗಾತ್ರ ನಿರಂತರವಾಗಿ ಸಣ್ಣದಾಗುತ್ತಲೇ ಇದೆ. ಬಾಂಗ್ಲಾದೇಶದಲ್ಲಿ ತಲೆದೋರಿದ ರಾಜಕೀಯ ದಂಗೆ ನಮ್ಮ ಪೂರ್ವದ ಗಡಿಯಲ್ಲಿನ ಲೆಕ್ಕಾಚಾರಗಳನ್ನು ಬದಲಾಯಿಸಿವೆ. ಇನ್ನು ಪಾಕಿಸ್ತಾನವಂತೂ ನಿರಂತರವಾಗಿ ನಮಗೆ ಭದ್ರತಾ ಅಪಾಯಗಳನ್ನು ತಂದೊಡ್ಡುತ್ತಲೇ ಇದೆ. ನಮ್ಮ ನೆರೆಹೊರೆಯಲ್ಲಿ ಚೀನಾದ ಪ್ರಭಾವವೂ ದಿನೇ ದಿನೇ ಹೆಚ್ಚಾಗುತ್ತಿದೆ. ಈಗ ಪಶ್ಚಿಮ ದಿಕ್ಕಿನಲ್ಲಿ ಭಾರತದ ಪ್ರಮುಖ ಸಹಯೋಗಿಯಾದ ಇರಾನ್ ಸಹ ಅಸ್ಥಿರವಾಗಿದ್ದು, ಭಾರತದ ಚಲನವಲನಗಳಿಗೆ ಇನ್ನಷ್ಟು ಮಿತಿ ಹೇರಿದಂತಾಗಿದೆ.

ದಶಕಗಳ ಕಾಲ ಭಾರತ ಮತ್ತು ಇರಾನ್ ಒಂದು ಬಲವಾದ ಸಹಯೋಗ ಹೊಂದಿದ್ದವು. ಎರಡು ದೇಶಗಳ ನಡುವೆ ಐತಿಹಾಸಿಕ, ಭೌಗೋಳಿಕ ಮತ್ತು ಪರಸ್ಪರ ಹಿತಾಸಕ್ತಿಯ ಬಾಂಧವ್ಯವಿತ್ತು. ಈ ಸಂಬಂಧ ಕೇವಲ ಪರಸ್ಪರ ಸ್ನೇಹಕ್ಕೆ ಮಾತ್ರ ಸೀಮಿತವಾಗದೆ, ಸಂಕೀರ್ಣ ಭೂ ಪ್ರದೇಶದಲ್ಲಿ ಉಳಿದುಕೊಳ್ಳುವ ಸವಾಲನ್ನು ಎದುರಿಸುವ ಸಂಬಂಧವೂ ಆಗಿತ್ತು. ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಗೆ ಭಾರತದ ಎಲ್ಲ ಭೂ ಮಾರ್ಗಗಳನ್ನು ಪಾಕಿಸ್ತಾನ ತಡೆಗಟ್ಟುವುದರಿಂದ, ಪಶ್ಚಿಮದತ್ತ ಸಾಗಲು ಇರಾನ್ ನಮಗಿದ್ದ ಏಕೈಕ ಮಾರ್ಗವಾಗಿತ್ತು. ಟೆಹರಾನಿನ ಶಿಯಾ ನಾಯಕತ್ವ ಐತಿಹಾಸಿಕವಾಗಿಯೂ ಪಾಕಿಸ್ತಾನದ ಪ್ರಭಾವವನ್ನು ಎದುರಿಸಲು ನೆರವಾಗಿದ್ದು, ಭಾರತದ ಪಶ್ಚಿಮ ಏಷ್ಯಾ ನೀತಿಯನ್ನು ನಿರ್ವಹಿಸಲು ಇರಾನ್ ಒಂದು ನಂಬಿಕಾರ್ಹ ಸಹಯೋಗಿಯಾಗಿತ್ತು.

ADVERTISEMENT

ಆದರೆ ಇರಾನ್ ಯಾಕೆ ಭಾರತಕ್ಕೆ ಇಷ್ಟು ಮುಖ್ಯವಾಗುತ್ತದೆ? ಅದನ್ನು ಈ ಲೇಖನದಲ್ಲಿ ಗಮನಿಸೋಣ.

ಮೊದಲನೆಯದಾಗಿ, ಇರಾನಿನ ಚಬಹಾರ್ ಬಂದರು ಭಾರತಕ್ಕೆ ಬಹಳ ಮುಖ್ಯ. ಇದು ಯಾವುದೋ ಹತ್ತರಲ್ಲಿ ಹನ್ನೊಂದು ಎನ್ನುವಂತಹ ಬಂದರಲ್ಲ. ಭಾರತ ಪಶ್ಚಿಮದಲ್ಲಿ ಭೂ ಆವೃತವಾಗಿರುವ ಸಮಸ್ಯೆಗೆ ಬಹಳ ಜಾಗರೂಕವಾಗಿ ನಿರ್ಮಿಸಿರುವ ಉತ್ತರ ಈ ಬಂದರು. ಇರಾನಿನ ಕರಾವಳಿಯಲ್ಲಿರುವ ಚಬಹಾರ್, ಭಾರತಕ್ಕೆ ಮಧ್ಯ ಏಷ್ಯಾವನ್ನು ಸಂಪರ್ಕಿಸುವ ರೈಲು ಮತ್ತು ಭೂ ಮಾರ್ಗಕ್ಕೆ ನೇರ ಸಂಪರ್ಕ ಒದಗಿಸುತ್ತದೆ. ಇದು ಪಾಕಿಸ್ತಾನವನ್ನು ಸಂಪೂರ್ಣವಾಗಿ ತಪ್ಪಿಸಿ ಸಾಗುವ ಮಾರ್ಗವಾಗಿದೆ. ಭಾರತ ಈ ಬಂದರು ಮತ್ತು ಇದಕ್ಕೆ ಸಂಬಂಧಿಸಿದ ಯೋಜನೆಗಳ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್‌ಗೂ (9,000 ಕೋಟಿ ರೂಪಾಯಿ) ಹೆಚ್ಚಿನ ಹಣವನ್ನು ವಿನಿಯೋಗಿಸಿದೆ. ಆದರೆ, ಇಲ್ಲಿ ಒಂದು ಸಮಸ್ಯೆಯಿದೆ: ಇಂತಹ ಸಂಪರ್ಕ ಮಾರ್ಗಗಳು ಸರಿಯಾಗಿ ಕಾರ್ಯಾಚರಿಸಬೇಕೆಂದರೆ, ಅಲ್ಲಿ ಸ್ಥಿರ ರಾಜಕೀಯ ಸಂಬಂಧ, ಭದ್ರತಾ ಭರವಸೆಗಳು, ಮತ್ತು ದೀರ್ಘಾವಧಿಯ ಯೋಜನೆಗಳು ಇರಬೇಕು. ಟೆಹರಾನಿನಲ್ಲಿ ಏನಾದರೂ ಸರ್ಕಾರ ಬದಲಾವಣೆ ಉಂಟಾದರೆ, ಈ ಯೋಜನೆಗೆ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಉಪನ್ಯಾಸಕರಾದ ರಾಜನ್ ಕುಮಾರ್ ಅವರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ವೇಳೆ ಇರಾನಿನಲ್ಲಿ ಸರ್ವೋಚ್ಛ ನಾಯಕರ ಬಳಿಕ, ಅಧಿಕಾರದ ಕಿತ್ತಾಟ ಉಂಟಾದರೆ, ಆಗ ಚಬಹಾರ್ ಬಂದರು ಭಾರತದ ಕಾರ್ಯತಂತ್ರದ ಆಸ್ತಿಯಾಗುವುದಕ್ಕಿಂತಲೂ, ಪ್ರಮುಖ ಸಮಸ್ಯೆಯಾಗಿ ಪರಿಣಮಿಸಬಹುದು ಎಂದು ಎಚ್ಚರಿಸಿದ್ದಾರೆ.

ಎರಡನೆಯದಾಗಿ, ಇರಾನ್ ಸ್ವತಃ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿದ್ದರೂ, ಅದು ಪಾಕಿಸ್ತಾನದ ಪ್ರಭಾವಕ್ಕೆ ವಿರೋಧಿಯಾಗಿಯೇ ಕಾರ್ಯಾಚರಿಸುತ್ತಾ ಬಂದಿದೆ. ಇರಾನಿನ ಶಿಯಾ ಮುಸ್ಲಿಂ ಆಡಳಿತ ಭಾರತ ವಿರೋಧಿ ಧೋರಣೆಗಳನ್ನು ಹಬ್ಬಿಸುವ ಪಾಕಿಸ್ತಾನದ ಸುನ್ನಿ ಮುಸ್ಲಿಂ ತೀವ್ರವಾದಿ ಗುಂಪುಗಳನ್ನು ಬಹಿರಂಗವಾಗಿಯೇ ಟೀಕಿಸಿದೆ. 1990ರ ದಶಕ ಮತ್ತು 2000ನೇ ದಶಕದ ಆರಂಭದಲ್ಲಿ, ಪಾಕಿಸ್ತಾನದ ಬೆಂಬಲ ಹೊಂದಿದ್ದ ತಾಲಿಬಾನ್ ಪಡೆ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನ ನಡೆಸುತ್ತಿದ್ದಾಗ ಇರಾನಿನ ನಿಲುವು ಬಹಳ ಮುಖ್ಯವಾಗಿತ್ತು. ಭಾರತ ಮತ್ತು ಇರಾನ್‌ಗಳು ಜೊತೆಯಾಗಿ ತಾಲಿಬಾನ್ ವಿರೋಧಿ ಪಡೆಗಳಿಗೆ ಬೆಂಬಲ ನೀಡಿ, ಪಾಕಿಸ್ತಾನ ಅಫ್ಘಾನಿಸ್ತಾನವನ್ನು ತನ್ನ ದುಷ್ಕೃತ್ಯಗಳಿಗೆ ಹಿತ್ತಲಾಗಿ ಬಳಸಿಕೊಳ್ಳಲು ಸಾಧ್ಯವಾಗದಂತೆ ತಡೆದಿದ್ದವು. 1990ರ ದಶಕದ ಮಧ್ಯ ಭಾಗದಲ್ಲಿ, ಪಾಕಿಸ್ತಾನ ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಜಾಗತಿಕ ನಿರ್ಬಂಧಗಳನ್ನು ಹೇರಿಸಲು ಪ್ರಯತ್ನ ನಡೆಸಿದಾಗ, ಇರಾನ್ ಭಾರತದ ಪರವಾಗಿ ಸ್ಥಿರವಾಗಿ ನಿಂತಿತ್ತು. ಒಂದು ವೇಳೆ ಇರಾನ್ ಈಗ ಆಂತರಿಕವಾಗಿ ದುರ್ಬಲಗೊಂಡರೆ, ಅದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಪ್ರಯೋಜನಕಾರಿಯಾಗಬಹುದು. ಪಾಕಿಸ್ತಾನದ ಮಹತ್ವಾಕಾಂಕ್ಷೆಗಳನ್ನು ನಿರ್ಬಂಧಿಸಿದ್ದ ಪ್ರಾದೇಶಿಕ ಸಮತೋಲನವೂ ಇದರಿಂದ ದುರ್ಬಲಗೊಳ್ಳಬಹುದು.

ಮೂರನೆಯದಾಗಿ, ನಾವು ಇದರ ಆರ್ಥಿಕ ಆಯಾಮವನ್ನೂ ಗಮನಿಸಬೇಕಾಗುತ್ತದೆ. ಭಾರತ ಇರಾನಿನ ಎಂಟನೇ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿದ್ದು, ಕಳೆದ ವರ್ಷ ಉಭಯ ದೇಶಗಳ ನಡುವಿನ ವ್ಯಾಪಾರ 1.3ರಿಂದ 1.7 ಬಿಲಿಯನ್ ಡಾಲರ್ (11,700 ಕೋಟಿಯಿಂದ 15,300 ಕೋಟಿ ರೂಪಾಯಿ) ನಡುವೆ ಇತ್ತು. ಭಾರತ ಈಗಾಗಲೇ ಅಮೆರಿಕದ ನಿರ್ಬಂಧಗಳ ಕಾರಣದಿಂದ ಚಬಹಾರ್ ಬಂದರು ಯೋಜನೆಯ ಕಾಮಗಾರಿಗಳನ್ನು ನಿಧಾನಗೊಳಿಸಬೇಕಾಗಿ ಬಂತು. ಒಂದು ವೇಳೆ ಇರಾನಿನ ಸರ್ಕಾರದಲ್ಲಿ ಏನಾದರೂ ನಾಟಕೀಯ ಬದಲಾವಣೆ ಕಂಡುಬಂದರೆ, ಇದರಿಂದ ಇನ್ನಷ್ಟು ಸಂಕೀರ್ಣತೆಗಳು ಉಂಟಾಗಬಹುದು. ಅಂದರೆ, ಭಾರತೀಯ ತೆರಿಗೆದಾರರ ಬಿಲಿಯನ್‌ಗಟ್ಟಲೆ ರೂಪಾಯಿಗೆ ಇದರಿಂದ ತೊಂದರೆ ಉಂಟಾಗಬಹುದು.

ಇನ್ನು ಚೀನಾದ ಪಾತ್ರವನ್ನೂ ನಾವು ಕಡೆಗಣಿಸಲು ಸಾಧ್ಯವಿಲ್ಲ. ಅದು ಸಂಕೀರ್ಣತೆಗೆ ಇನ್ನೊಂದು ಪದರವನ್ನು ಸೇರಿಸುತ್ತಿದೆ. ಪಾಕಿಸ್ತಾನದ ವಿಚಾರದಲ್ಲಿ ಇರಾನ್ ಭಾರತವನ್ನೇ ಬೆಂಬಲಿಸುತ್ತಾ ಬಂದಿದ್ದರೂ, ಇತ್ತೀಚಿನ ದಿನಗಳಲ್ಲಿ ಅದು ಚೀನಾ ಪರ ವಾಲುತ್ತಿರುವುದು ಎದ್ದು ಕಾಣುತ್ತಿದೆ. ಚೀನಾ ಮತ್ತು ಇರಾನ್ 2021ರಲ್ಲಿ 25 ವರ್ಷಗಳ ಅವಧಿಯ ಕಾರ್ಯತಂತ್ರದ ಸಹಯೋಗ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರ ಪರಿಣಾಮ ಸ್ಪಷ್ಟವಾಗಿದೆ. ಚೀನಾ 2025ರಲ್ಲಿ ಇರಾನಿನ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿದ್ದು, 14.5 ಬಿಲಿಯನ್ ಡಾಲರ್ (ಅಂದಾಜು 1,30,500 ಕೋಟಿ ರೂಪಾಯಿ) ಮೌಲ್ಯದ ಸರಕುಗಳನ್ನು ಚೀನಾಗೆ ರಫ್ತು ಮಾಡಿದೆ. ಪಾಶ್ಚಾತ್ಯ ನಿರ್ಬಂಧಗಳು ಟೆಹರಾನ್ ಚೀನಾ ಮೇಲೆ ಅತಿಯಾಗಿ ಅವಲಂಬಿತವಾಗುವಂತೆ ಮಾಡಿದ್ದು, ತನ್ನ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಲು, ಮೂಲಭೂತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇರಾನ್ ಈಗ ಚೀನಾವನ್ನು ಅವಲಂಬಿಸಿದೆ. ಚಬಹಾರ್ ಬಂದರಿನಲ್ಲಿ ಭಾರತದ ಉಪಸ್ಥಿತಿ ಒಂದು ಮಟ್ಟಿಗೆ ಸಣ್ಣದಾದರೂ, ಚೀನಾದ ಪ್ರಭಾವವನ್ನು ತಗ್ಗಿಸಲು ಒಂದಷ್ಟು ಮಟ್ಟಿಗೆ ನೆರವಾಗುತ್ತದೆ. ಒಂದು ವೇಳೆ ಇರಾನಿನ ಅಸ್ಥಿರತೆ ಮುಂದುವರಿದು, ಒಂದು ಹೊಸ ಸರ್ಕಾರ ಬಂದರೆ, ಅದೂ ಭದ್ರತೆ ಮತ್ತು ಹೂಡಿಕೆಗೆ ಚೀನಾದ ಮೇಲಿನ ಅವಲಂಬನೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಗಳಿದ್ದು, ಅದು ಈ ಪ್ರದೇಶದಲ್ಲಿ ಚೀನಾದ ಹೆಜ್ಜೆ ಗುರುತನ್ನು ಇನ್ನಷ್ಟು ಹೆಚ್ಚಿಸಲಿದೆ. ಇರಾನಿನ ಅಧಿಕಾರಿಗಳು ಈಗಾಗಲೇ ವಿದ್ಯುತ್ ಘಟಕಗಳು ಮತ್ತು ಬಂದರು ಯೋಜನೆಗಳ ಕುರಿತು ಚೀನಾದ ಹೂಡಿಕೆಗಾಗಿ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇಂತಹ ಪರಿಸ್ಥಿತಿಯಲ್ಲಿ, ಭಾರತ ಏನು ಮಾಡಬೇಕು? ಮಾಜಿ ಭಾರತೀಯ ರಾಜತಂತ್ರಜ್ಞರಾದ, ಅಮೆರಿಕ, ಚೀನಾ ಮತ್ತು ಶ್ರೀಲಂಕಾಗಳಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿರುವ ನಿರುಪಮಾ ಮೆನನ್ ರಾವ್ ಅವರು ಈ ಕುರಿತು ಒಂದಷ್ಟು ಸ್ಪಷ್ಟ ಸಲಹೆಗಳನ್ನು ನೀಡಿದ್ದಾರೆ. ಇಲ್ಲಿಯ ತನಕವೂ ಇರಾನ್ ಕುರಿತ ಭಾರತದ ನೀತಿ ಬಹಳ ಜಾಗರೂಕ ಮತ್ತು ಸಮತೋಲನದಿಂದ ಕೂಡಿದ್ದು, ಅದನ್ನೇ ಭಾರತ ಮುಂದುವರಿಸಬೇಕು ಎಂದಿದ್ದಾರೆ. ಇರಾನಿನ ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿರುವ ಕಾರಣ, ಭಾರತ ಒಂದಷ್ಟು ಅಂತರ ಕಾಯ್ದುಕೊಳ್ಳಬೇಕು. ಏಕೆಂದರೆ, ಯಾವುದೇ ಬಾಹ್ಯ ರಾಷ್ಟ್ರ ಇರಾನನ್ನು ನಂಬಿಕಾರ್ಹವಾಗಿ ನಿಯಂತ್ರಿಸಲಾಗಲಿ, ಫಲಿತಾಂಶ ಏನಾಗಬಹುದು ಎಂದು ಊಹಿಸಲಾಗಲಿ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಈಗಿನ ತಕ್ಷಣದ ಆದ್ಯತೆ ಇರಾನಿನಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಇರುವ ಭಾರತೀಯರನ್ನು ರಕ್ಷಿಸುವುದಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕಾಗಿ ಬಲವಾದ ರಾಜತಾಂತ್ರಿಕ ಬೆಂಬಲ ಮತ್ತು ತುರ್ತು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಭಾರತ ಎಲ್ಲ ಆಯಾಮಗಳಿಂದಲೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಯಾವುದೇ ಗಡಿಬಿಡಿಯ ತೀರ್ಮಾನಕ್ಕೆ ಭಾರತ ಈಗ ಬರಬಾರದು. ಇದರೊಡನೆ, ಸಂಭಾವ್ಯ ಹಲವಾರು ಸಂದರ್ಭಗಳಿಗೆ ಭಾರತ ಸಿದ್ಧತೆ ನಡೆಸಬೇಕು. ಈಗ ಕೇವಲ ಬಿಕ್ಕಟ್ಟಿನ ಕುರಿತು ಮಾತನಾಡುವುದರಿಂದ ಯಾವುದೇ ಪ್ರಯೋಜನ ಉಂಟಾಗದು‌. ಆದರೆ, ಮುಂದೆ ಏನಾಗಬಹುದು ಎಂದು ಆಲೋಚಿಸಿ, ಅದಕ್ಕೆ ಸಿದ್ಧತೆ ನಡೆಸುವುದು, ಯಾವ ಸಮಸ್ಯೆಗಳು ಬಿಗಡಾಯಿಸಬಹುದು ಎಂದು ಅಂದಾಜಿಸಿ, ಸಂವಹನ ಮಾರ್ಗಗಳನ್ನು ಮುಕ್ತವಾಗಿಡುವುದು ಭಾರತದ ನಡೆಯಾಗಬೇಕು.

ಒಂದು ವೇಳೆ ಇರಾನ್ ದೀರ್ಘಾವಧಿಯ ಅಸ್ಥಿರತೆ ಅಥವಾ ಬಿಕ್ಕಟ್ಟಿಗೆ ತುತ್ತಾದರೆ, ಅದರ ಪರಿಣಾಮ ಇರಾನಿನ ಗಡಿಗಳನ್ನು ಮೀರಿ ಹಬ್ಬಲಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಕ್ಷಿಪ್ರವಾಗಿ ತೈಲ ಬೆಲೆ, ಸಮುದ್ರ ವ್ಯಾಪಾರ ಮಾರ್ಗಗಳ ಮೇಲೆ ತಕ್ಷಣವೇ ಪರಿಣಾಮ ಬೀರಿ, ಸಶಸ್ತ್ರ ಗುಂಪುಗಳಿಗೆ ಬಲವಾಗಿ ಬೆಳೆಯಲು ಉತ್ತೇಜನ ನೀಡಬಲ್ಲದು. ದಕ್ಷಿಣ ಏಷ್ಯಾವೂ ಆಗ ಸುರಕ್ಷಿತವಾಗಿರಲು ಸಾಧ್ಯವಿಲ್ಲ.

ಭಾರತ ಈ ವಿಚಾರವನ್ನು ಬಹಳ ಸೂಕ್ಷ್ಮವಾಗಿ, ಜಾಗರೂಕತೆಯಿಂದ ನಿರ್ವಹಿಸಬೇಕು. ಭಾರತ ಸಂಪರ್ಕದಲ್ಲಿದ್ದರೂ, ಅತಿಯಾಗಿ ಪ್ರತಿಕ್ರಿಯಿಸಬಾರದು. ಯಾವುದೇ ತಕ್ಷಣದ ತೀರ್ಮಾನಕ್ಕೆ ಬರದೆ, ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿರಬೇಕು. ಈ ಪ್ರದೇಶದಲ್ಲಿ ಕಾರ್ಯತಂತ್ರದ ಸ್ಥಳ ದಿನೇ ದಿನೇ ಕಡಿಮೆಯಾಗುತ್ತಿದ್ದು, ಒಂದು ಸ್ಥಿರ ಸಹಯೋಗಿಯಾದ ಇರಾನನ್ನು ಕಳೆದುಕೊಳ್ಳುವುದು ಭಾರತದ ಇನ್ನೊಂದು ಆಯ್ಕೆಯ ಬಾಗಿಲು ಮುಚ್ಚಿದಂತಾಗಲಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.