ADVERTISEMENT

₹ 12,500 ಖರ್ಚಿನಲ್ಲೇ ಲೋಕಸಭಾ ಚುನಾವಣೆ ಗೆದ್ದ TMC ಸಂಸದೆ ಪ್ರತಿಮಾ ಮೊಂಡಲ್‌!

ಶಮಿನ್‌ ಜಾಯ್‌
Published 13 ಫೆಬ್ರುವರಿ 2025, 4:41 IST
Last Updated 13 ಫೆಬ್ರುವರಿ 2025, 4:41 IST
   

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸತ್ತಿಗೆ ಪ್ರವೇಶಿಸಿರುವ ಅಭ್ಯರ್ಥಿಗಳು ಪ್ರಚಾರದ ವೇಳೆ ಸರಾಸರಿ ₹ 57.23 ಲಕ್ಷ ಖರ್ಚು ಮಾಡಿದ್ದಾರೆ. ಪಶ್ಚಿಮ ಬಂಗಾಳ ಸಂಸದೆ ಪ್ರತಿಮಾ ಮೊಂಡಲ್‌ ಅವರು ಕೇವಲ ₹ 12,500 ಖರ್ಚು ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿ ಪ್ರಕಾರ, 15 ಮಂದಿ ₹ 91.75 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಕಾಂಗ್ರೆಸ್‌ ಸಂಸರಾದ ಶಶಿ ತರೂರ್, ರಾಹುಲ್‌ ಗಾಂಧಿ, ಕರ್ನಾಟಕದವರಾದ ಸುನೀಲ್‌ ಬೋಸ್‌, ಬಿ.ವೈ. ವಿಜಯೇಂದ್ರ ಹಾಗೂ ಇ.ತುಕಾರಾಂ ಈ ಪಟ್ಟಿಯಲ್ಲಿದ್ದಾರೆ.

ಗರಿಷ್ಠ ಖರ್ಚು ಮಾಡಿದವರು
ಕಾಂಗ್ರೆಸ್‌ ಸಂಸದರಾದ ಶಶಿ ತರೂರ್‌, ಸುನೀಲ್‌ ಬೋಸ್‌ ಹೆಚ್ಚು ಖರ್ಚು ಮಾಡಿದ ಸಂಸದರೆನಿಸಿದ್ದಾರೆ. ಕೇರಳದ ತಿರುವನಂತಪುರ ಕ್ಷೇತ್ರದ ತರೂರ್‌ ₹ 94.89 ಲಕ್ಷ ವ್ಯವಯಿಸಿದ್ದರೆ, ಕರ್ನಾಟಕದ ಚಾಮರಾಜನಗರ ಸಂಸದ ಬೋಸ್‌ ₹ 94.88 ಲಕ್ಷ ಖರ್ಚು ಮಾಡಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಗೆದ್ದಿರುವ ಬಿಜೆಪಿಯ ಬಿ.ವೈ. ರಾಘವೇಂದ್ರ (₹ 93.26 ಲಕ್ಷ), ಬಳ್ಳಾರಿಯನ್ನು ಪ್ರತಿನಿಧಿಸುವ ಕಾಂಗ್ರೆಸ್‌ನ ಇ.ತುಕಾರಾಂ (₹ 91.83 ಲಕ್ಷ) ನಂತರದ ಸ್ಥಾನಗಳಲ್ಲಿದ್ದಾರೆ.

ADVERTISEMENT

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 2024ರ ಚುನಾವಣೆಯಲ್ಲಿ ಕೇರಳದ ವಯನಾಡ್‌ ಹಾಗೂ ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ಕಣಕ್ಕಿಳಿದು, ಎರಡೂ ಕಡೆ ಜಯಿಸಿದ್ದರು. ರಾಯ್‌ ಬರೇಲಿಯನ್ನು ಉಳಿಸಿಕೊಂಡು, ವಯನಾಡ್‌ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ರಾಹುಲ್, ವಯನಾಡ್‌ ಗೆಲ್ಲಲು ₹ 92.82 ಲಕ್ಷ ವ್ಯಯಿಸಿದ್ದರು. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಗೆದ್ದಿರುವ ಬಾಲಿವುಡ್‌ ನಟಿ ಕಂಗನಾ ರನೌತ್‌ ₹ 94.29 ಲಕ್ಷ ಖರ್ಚು ಮಾಡಿದ್ದಾರೆ.

ಕಡಿಮೆ ಖರ್ಚು ಮಾಡಿದವರು
ಚುನಾವಣಾ ಪ್ರಚಾರದ ವೇಳೆ, ಪಕ್ಷಗಳು ಮಾಡಬಹುದಾದ ವೆಚ್ಚಕ್ಕೆ ಮಿತಿಯಿಲ್ಲ. ಆದರೆ, ಅಭ್ಯರ್ಥಿಯು ಮಾಡುವ ಖರ್ಚಿಗೆ ₹ 95 ಲಕ್ಷ ಮಿತಿ ಇದ್ದರೂ, ಪಶ್ಚಿಮ ಬಂಗಾಳದ ಜಯನಗರ ಕ್ಷೇತ್ರದ ತೃಣಮೂಲ ಕಾಂಗ್ರೆಸ್‌ಸ ಸಂಸದೆ ಪ್ರತಿಮಾ ಮೊಂಡಲ್‌ ಅವರು ಕೇವಲ ₹ 12,500 ಖರ್ಚು ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಎಂಜಿನಿಯರ್‌ ರಶೀದ್ ಹಾಗೂ ಪಶ್ಚಿಮ ಅರುಣಾಚಲ ಸಂಸದ ಕಿರಣ್‌ ರಿಜಿಜು ಅವರು ಮೊಂಡಲ್‌ ನಂತರದ ಸ್ಥಾನಗಳಲ್ಲಿ ಇದ್ದಾರೆ. ರಶೀದ್ ₹ 2.10 ಲಕ್ಷ ಖರ್ಚು ಮಾಡಿದ್ದರೆ, ಕೇಂದ್ರ ಸಚಿವ ರಿಜಿಜು ₹ 20.67‌ ವ್ಯಯಿಸಿದ್ದಾರೆ.

ಒಟ್ಟಾರೆ ಖರ್ಚಾಗಿದ್ದು ₹ 862 ಕೋಟಿ
2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ 543 ಅಭ್ಯರ್ಥಿಗಳು, ಪ್ರಚಾರದ ವೇಳೆ ಖರ್ಚು ಮಾಡಿದ ಒಟ್ಟು ಮೊತ್ತ ₹ 310.77 ಕೋಟಿ. ಕಣದಲ್ಲಿದ್ದ ಎಲ್ಲರೂ ಖರ್ಚು ಮಾಡಿದ್ದನ್ನು ಲೆಕ್ಕಹಾಕಿದರೆ ₹ 862.68 ಕೋಟಿ ಆಗುತ್ತದೆ. ವಿಜೇತರ ಪೈಕಿ ಅತಿಹೆಚ್ಚು ಖರ್ಚು ಮಾಡಿದ ಸರಾಸರಿ ಹಿಮಾಚಲ ಪ್ರದೇಶದ ಸಂಸದರದ್ದಾಗಿದ್ದು, ಅಲ್ಲಿನವರು ₹ 85.46 ಲಕ್ಷ ವ್ಯವಯಿಸಿದ್ದಾರೆ ಎಂದು ಆಯೋಗ ಉಲ್ಲೇಖಿಸಿದೆ.

ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದ ಸಂಸದರು ಹೆಚ್ಚು (ಸರಾಸರಿ ₹ 78.13 ಲಕ್ಷ) ಖರ್ಚು ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ತಮಿಳುನಾಡು (ಸರಾಸರಿ ₹ 74.54 ಲಕ್ಷ), ಕೇರಳ (ಸರಾಸರಿ ₹ 73.87 ಲಕ್ಷ) ಇವೆ.

ಇತರ ರಾಜ್ಯಗಳ ಪೈಕಿ, ಹರಿಯಾಣ ಸಂಸದರು ಸರಾಸರಿ ₹ 77.22 ಲಕ್ಷ ಹಾಗೂ ಪಶ್ಚಿಮ ಬಂಗಾಳದವರು ಸರಾಸರಿ ₹ 73.23 ಲಕ್ಷ ಖರ್ಚು ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಗೆದ್ದ 80 ಸಂಸದರ ಸರಾಸರಿ ಖರ್ಚು ₹ 57.30 ಲಕ್ಷ.

ಉನ್ನಾವೊದಲ್ಲಿ ಪ್ರತಿ ಮತಕ್ಕೆ ₹ 2.14
ಆಯೋಗದ ಮಾಹಿತಿ ಪ್ರಕಾರ, ಪಂಜಾಬ್‌ನ ಫರೀದ್‌ ಕೋಟ್‌ ಕ್ಷೇತ್ರದಲ್ಲಿ ಪ್ರತಿ ಮತಕ್ಕೆ ₹ 26.34 ಖರ್ಚು ಮಾಡಲಾಗಿದೆ. ಇದು, ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಅತ್ಯಂತ ಕಡಿಮೆ ಖರ್ಚಾಗಿರುವುದು, ಉತ್ತರ ಪ್ರದೇಶದ ಉನ್ನಾವೊ ಕ್ಷೇತ್ರದಲ್ಲಿ. ಇಲ್ಲಿ ಪ್ರತಿ ಮತಕ್ಕೆ ಖರ್ಚಾಗಿರುವುದು ಕೇವಲ ₹ 2.14. ಫರೀದ್‌ಕೋಟ್‌ನಲ್ಲಿ ಕಣದಲ್ಲಿದ್ದವರು ಖರ್ಚು ಮಾಡಿದ್ದ ಒಟ್ಟು ಮೊತ್ತ ₹ 4.19 ಕೋಟಿಯಾದರೆ, ಉನ್ನಾವೊದಲ್ಲಿ ಖರ್ಚಾಗಿದ್ದು ₹ 50.17 ಲಕ್ಷವಷ್ಟೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.