ನವದೆಹಲಿ: ‘ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಬೇಕಿದ್ದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನೇರವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕು’ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ 2024ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿವಿಧ ಪತ್ರಿಕೆಗಳಿಗೆ ರಾಹುಲ್ ಗಾಂಧಿ ಅವರು ಸುದೀರ್ಘ ಲೇಖನ ಬರೆದಿದ್ದರು. ‘ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ರೀತಿಯಲ್ಲೇ ಬಿಹಾರದಲ್ಲಿಯೂ ನಡೆಯಲಿದೆ. ಬಿಜೆಪಿ ತಾನು ಸೋಲುವ ಎಲ್ಲ ಕಡೆಗಳಲ್ಲಿಯೂ ಈ ರೀತಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತದೆ’ ಎಂದು ಅವರು ಆರೋಪಿಸಿದ್ದರು. ತಮ್ಮ ಲೇಖನಕ್ಕೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಬಯಸಿದ್ದರು.
ಆದರೆ, ಆಯೋಗದ ಅಧಿಕಾರಿಗಳು ರಾಹುಲ್ ಆರೋಪವನ್ನು ಅಲ್ಲಗಳೆದಿದ್ದರು. ಶನಿವಾರ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ರಾಹುಲ್, ‘ಸತ್ಯ ಹೇಳುವುದರಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಉಳಿಯುತ್ತದೆಯೇ ಹೊರತು, ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡದೆ ನುಣುಚಿಕೊಳ್ಳುವುದರಿಂದ ಅಲ್ಲ’ ಎಂದಿದ್ದರು. ರಾಹುಲ್ ಹೇಳಿಕೆಯ ಬೆನ್ನಲ್ಲೇ, ಆಯೋಗದ ಅಧಿಕಾರಿಯೊಬ್ಬರು ಭಾನುವಾರ ಪ್ರತಿಕ್ರಿಯಿಸಿದ್ದು, ‘ರಾಹುಲ್ ನೇರವಾಗಿ ಪತ್ರ ಬರೆದಲ್ಲಿ ಮಾತ್ರ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ಪ್ರತಿಕ್ರಿಯೆ ನೀಡಲಿದೆ’ ಎಂದಿದ್ದಾರೆ.
‘ಚುನಾವಣಾ ಆಯೋಗವು ಆರು ರಾಷ್ಟ್ರೀಯ ಪಕ್ಷಗಳನ್ನ ಪ್ರತ್ಯೇಕವಾಗಿ ಮಾತುಕತೆಗೆ ಆಹ್ವಾನಿಸಿತ್ತು. ಐದು ಪಕ್ಷಗಳ ಸದಸ್ಯರು ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಆದರೆ, ಕಾಂಗ್ರೆಸ್ ಮೇ 15ರ ಸಭೆಗೆಹಾಜರಾಗದೇ ದೂರ ಉಳಿದಿತ್ತು’ ಎಂದೂ ಅವರು ಹೇಳಿದರು.
ಮಹಾರಾಷ್ಟ್ರ ಚುನಾವಣೆಯ ಮತದಾನದ ದಿನದಂದು ಸಂಜೆ ಮತಗಟ್ಟೆಗಳ ಬಳಿ ನಡೆದ ಘಟನೆಗಳ ಸಿಸಿಟಿವಿ ದೃಶ್ಯ ಒದಗಿಸಬೇಕು ಎಂಬ ರಾಹುಲ್ ಬೇಡಿಕೆಗೆ ಪ್ರತಿಕ್ರಿಯಿಸಿರುವ ಅಧಿಕಾರಿ, ‘ಚುನಾವಣಾ ತಕರಾರು ಅರ್ಜಿ ಸಲ್ಲಿಕೆಯಾದ ಸಂದರ್ಭದಲ್ಲಿ ಮಾತ್ರ ಆಯೋಗವು ಸಿಸಿಟಿವಿ ದೃಶ್ಯಗಳನ್ನು ಹೈಕೋರ್ಟ್‌ಗೆ ಸಲ್ಲಿಸುತ್ತದೆ. ಕೋರ್ಟ್ ಈ ದೃಶ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಚುನಾವಣೆಯ ಸಮಗ್ರತೆ ಮತ್ತು ಮತದಾರರ ಗೋಪ್ಯತೆ ಕಾಪಾಡುವ ದೃಷ್ಟಿಯಿಂದ ಇದು ಮಹತ್ವದ್ದು’ ಎಂದು ಅವರು ಹೇಳಿದರು.
‘ರಾಹುಲ್ ಗಾಂಧಿ ಯಾಕೆ ಮತದಾರರ ಗೋಪ್ಯತೆಗೆ ದ್ರೋಹ ಮಾಡಲು ಬಯಸುತ್ತಾರೆ’ ಎಂದು ಪ್ರಶ್ನಿಸಿರುವ ಅಧಿಕಾರಿ, ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ವಿಚಾರವಾಗಿ, ‘ರಾಹುಲ್ ಗಾಂಧಿ ಅವರು ತಮ್ಮದೇ ಪಕ್ಷ ನೇಮಿಸಿರುವ ಬೂತ್ ಮಟ್ಟದ ಏಜೆಂಟರನ್ನು, ಚುನಾವಣಾ ಏಜೆಂಟರನ್ನು ಪ್ರಶ್ನಿಸಬೇಕು’ ಎಂದಿದ್ದಾರೆ.
‘ಜನಾದೇಶ ತಿರಸ್ಕರಿಸುತ್ತಿರುವ ರಾಹುಲ್’
‘ರಾಹುಲ್ ಗಾಂಧಿ ಅವರು 2024ರ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುವುದನ್ನು ಬಿಟ್ಟು, ಮತದಾರರು ತಮ್ಮನ್ನು ತಿರಸ್ಕರಿಸಿದ್ದಾರೆ ಎಂಬ ಜನಾದೇಶವನ್ನೇ ನಿರಾಕರಿಸುತ್ತಿದ್ದಾರೆ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜನಾದೇಶವನ್ನು ರಾಹುಲ್‌ಗಾಂಧಿ ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಜನರು ತಮ್ಮನ್ನು ತಿರಸ್ಕರಿಸಿರುವುದಕ್ಕೆ ಪ್ರತೀಕಾರವಾಗಿ ರಾಹುಲ್ ಜನರನ್ನು ಮತ್ತು ಜನಾದೇಶವನ್ನು ತಿರಸ್ಕರಿಸುತ್ತಿದ್ದಾರೆ. ಬಿಹಾರ ಸೇರಿದಂತೆ ಮುಂಬರುವ ವಿಧಾನಸಭಾ ಚುನಾವಣೆಗಳ ಭವಿಷ್ಯದ ಸೋಲುಗಳಿಗೆ ಅವರು ಈಗಲೇ ನೆಪಗಳನ್ನು ಹಡುಕುತ್ತಿದ್ದಾರೆ’ ಎಂದು ಫಡಣವೀಸ್ ಪತ್ರಿಕೆಗಳಿಗೆ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.