ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಅವರೊಂದಿಗೆ ಅರ್ಮಾನ್ ಮಲಿಕ್
Credit: Instagram/@armaan__malik9
ನವದೆಹಲಿ: ಯೂಟ್ಯೂಬರ್, ಗಾಯಕ ಹಾಗೂ ರಿಯಾಲಿಟಿ ಶೋ ಖ್ಯಾತಿ ಅರ್ಮಾನ್ ಮಲಿಕ್ ಅವರು ನನಗೆ ಜೀವ ಬೆದರಿಕೆ ಇರುವ ಕಾರಣ ರಕ್ಷಣೆಗಾಗಿ ಬಂದೂಕು ಪರವಾನಗಿ ನೀಡುವಂತೆ ಪಂಜಾಬ್ ಪೊಲೀಸರಿಗೆ ಮನವಿ ಮಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
‘ನಾನು ಸುರಕ್ಷತೆಗಾಗಿ ಬಂದೂಕು ಪರವಾನಗಿ ನೀಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ, ಪ್ರತಿ ಬಾರಿಯೂ ಆಡಳಿತವು ನನ್ನ ವಿರುದ್ಧ ಒಂದು ಪ್ರಕರಣವಿದೆ ಎಂದು ಹೇಳುತ್ತಾ ಬಂದಿದೆ. ಆ ಪ್ರಕರಣವು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ. ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆ ಇದೆ. ಸತ್ಯವೇ ಮೇಲುಗೈ ಸಾಧಿಸುತ್ತದೆ. ಆದರೆ, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ನಾನು ಮತ್ತು ನನ್ನ ಕುಟುಂಬದವರು ಅಭದ್ರತೆಯಿಂದಲೇ ಬದುಕಬೇಕೇ’ ಎಂದು ಅರ್ಮಾನ್ ಮಲಿಕ್ ಪ್ರಶ್ನಿಸಿದ್ದಾರೆ.
ಒಬ್ಬ ತಂದೆ, ಜವಾಬ್ದಾರಿಯುತ ನಾಗರಿಕನಾಗಿ ನಾನು, ನನ್ನನ್ನು ಮತ್ತು ನನ್ನ ಮಕ್ಕಳನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದ್ದೇನೆ. ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಂಡು ಬಂದೂಕು ಪರವಾನಗಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಅರ್ಮಾನ್ ಮಲಿಕ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ
‘ಕಾನೂನು ಮಾರ್ಗಗಳನ್ನು ಅನುಸರಿಸುತ್ತಿದ್ದರೂ ನನಗೆ ಮತ್ತು ಕುಟುಂಬಕ್ಕೆ ನಿರಂತರವಾಗಿ ಜೀವ ಬೆದರಿಕೆಗಳು ಬರುತ್ತಿವೆ. ನಾನು ಯಾವಾಗಲೂ ಕಾನೂನನ್ನು ನಂಬಿದ್ದೇನೆ. ಆದರೆ, ಭಯವು ಮುಂದುವರೆದಿದೆ’ ಎಂದು ತಿಳಿಸಿದ್ದಾರೆ.
ಅರ್ಮಾನ್ ಮಲಿಕ್ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟನೆ, ಸಂಗೀತ ಹಾಗೂ ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿದ್ದಾರೆ.
ಪಂಜಾಬ್‌ನ ಕಲಾವಿದರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ನಿರಂತರವಾಗಿ ಬೆದರಿಕೆಗಳನ್ನು ಹಾಕುವ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಗಳು ಈಚೆಗೆ ಹೆಚ್ಚಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.