ADVERTISEMENT

ಬಸ್‌ ಪ್ರಯಾಣ ದರ ಏರಿಕೆಗೆ ಪ್ರತಿಪಕ್ಷ ಆಕ್ರೋಶ: ಸರ್ಕಾರದ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 23:30 IST
Last Updated 3 ಜನವರಿ 2025, 23:30 IST
ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ವಿರೋಧ ಪಕ್ಷದ ನಾಯಕರಾದ ಆರ್‌.ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡುವ ಮೂಲಕ ಪ್ರತಿಭಟನೆ ನಡೆಸಿದರು.
ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ವಿರೋಧ ಪಕ್ಷದ ನಾಯಕರಾದ ಆರ್‌.ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡುವ ಮೂಲಕ ಪ್ರತಿಭಟನೆ ನಡೆಸಿದರು.   
ನಾಲ್ಕು ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಲು ಅನುವು ಮಾಡಿಕೊಟ್ಟ ಕಾಂಗ್ರೆಸ್ ಸರ್ಕಾರದ ತೀರ್ಮಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿರೋಧ ಪಕ್ಷ ಬಿಜೆಪಿ, ಮೊದಲ ದಿನವೇ ಬೀದಿಗೆ ಇಳಿದಿದೆ. ಏರಿಕೆ ಅನಿವಾರ್ಯವನ್ನು ವಿವರಿಸಿರುವ ಸರ್ಕಾರ, ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ.

ಗುಲಾಬಿ ಕೊಟ್ಟು ಬಿಜೆಪಿ ಪ್ರತಿಭಟನೆ

ಬಸ್‌ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಬಸ್‌ ಪ್ರಯಾಣಿಕರ ಕೈಗೆ ಗುಲಾಬಿ ಹೂವು ಕೊಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕ್ಷಮೆ ಯಾಚಿಸುವ ಮೂಲಕ ಪ್ರತಿಭಟಿಸಿದರು.

ಬಸ್‌ನಲ್ಲಿದ್ದ ಪ್ರಯಾಣಿಕರ ಬಳಿ ಹೋದ ಅಶೋಕ, ‘ಕಾಂಗ್ರೆಸ್‌ ಸರ್ಕಾರ ಬೆಲೆ ಏರಿಕೆ ಮಾಡುವುದಿಲ್ಲವೆಂದು ನೀವು ಮತ ನೀಡಿದ್ದೀರಿ. ಆದರೆ, ಮಾತಿಗೆ ತಪ್ಪಿದ ಸರ್ಕಾರ ಹೊಸ ವರ್ಷದಂದೇ ಟಿಕೆಟ್‌ ದರ ಏರಿಕೆಯ ಕೊಡುಗೆ ನೀಡಿದೆ. ಆದ್ದರಿಂದ, ಮುಖ್ಯಮಂತ್ರಿ ಪರವಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದರು. 

ADVERTISEMENT

ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಜೆಪಿ ಅವಧಿಯಲ್ಲಿ ನಷ್ಟ ಆಗಿತ್ತು ಎಂದು ಸಬೂಬು ಹೇಳುತ್ತಾರೆ. ಆಗ ಕೋವಿಡ್‌ ಇತ್ತು. ಲಾಕ್‌ಡೌನ್‌ನಿಂದ ತಿಂಗಳುಗಟ್ಟಲೆ ಬಸ್‌ ಸಂಚಾರವೇ ನಿಂತು ಹೋಗಿತ್ತು. ಹತ್ತು ವರ್ಷಗಳಲ್ಲಿ ಇಂಧನ ಬೆಲೆ ಏರಿಕೆ ಆಗಿಲ್ಲವೇ? ನೌಕರರಿಗೆ ಟಿ.ಎ–ಡಿ.ಎ ಹೆಚ್ಚು ಮಾಡಿರಲಿಲ್ಲವೇ? ಹಿಂದಿನ ಬಿಜೆಪಿ ಸರ್ಕಾರ ಪ್ರಯಾಣ ದರ ಏರಿಕೆ ಮಾಡಿತ್ತೇ? 2013ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ, ₹1ಸಾವಿರ ಕೋಟಿಗೂ ಹೆಚ್ಚು ಲಾಭ ತಂದುಕೊಟ್ಟಿದ್ದೆ’ ಎಂದು ಹೇಳಿದರು.

‘ಪ್ರಯಾಣದ ದರ ₹200ರಿಂದ ₹300ರಷ್ಟು ಜಾಸ್ತಿ ಆಗಿದೆ. ಟಿಕೆಟ್‌ ದರ ಮಾತ್ರವಲ್ಲ, ಮುಂದೆ ಹಾಲಿನ ದರವನ್ನೂ ಏರಿಕೆ ಮಾಡುತ್ತಾರೆ. ನೀರಿನ ದರವನ್ನೂ ಏರಿಕೆ ಮಾಡುತ್ತಾರೆ. ಸಿದ್ದರಾಮಯ್ಯ ಎಲ್ಲ ವಸ್ತುಗಳ ಬೆಲೆಯನ್ನು ಗಗನಕ್ಕೆ ಮುಟ್ಟಿಸುವ ಶಪಥ ತೊಟ್ಟಿದ್ದಾರೆ’ ಎಂದು ಹೇಳಿದರು.

ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ದರ ನೀಡಿ, ಗಂಡಸರಿಗೆ ಬರೆ ಹಾಕಿದೆ. ಗ್ಯಾರಂಟಿ ಕಾರಣಗಳಿಂದ ಜನರು ಎಲ್ಲದಕ್ಕೂ ದುಬಾರಿ ಬೆಲೆ ತೆರಬೇಕಾಗಿದೆ. ಅಭಿವೃದ್ಧಿ ಒಂದು ಬಿಟ್ಟು ತಲೆ ಬೋಳಿಸುವ ಕೆಲಸ ಮಾಡುವ ಸರ್ಕಾರ ಇದಾಗಿದೆ’ ಎಂದು ಟೀಕಿಸಿದರು.

ಬಿಜೆಪಿಯ ಅವಧಿಯಲ್ಲಿ ಶೇ 47.8ರಷ್ಟು ಏರಿಕೆ: ರಾಮಲಿಂಗಾರೆಡ್ಡಿ

2008ರಿಂದ 2013ರ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅಂದು ಸಾರಿಗೆ ಸಚಿವರಾಗಿದ್ದ ಆರ್‌. ಅಶೋಕ ಅವರ ಅವಧಿಯಲ್ಲೇ ಏಳು ಬಾರಿ ಪ್ರಯಾಣದರ ಹೆಚ್ಚಳ ಮಾಡಿದ್ದಾರೆ. ಆಗ ಒಟ್ಟು ಶೇ 47.8ರಷ್ಟು ಏರಿಕೆ ಮಾಡಲಾಗಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು ‘ಬಿಜೆಪಿ ಅವಧಿಯಲ್ಲಿ ಸಾರಿಗೆ ನಿಗಮಗಳಿಗೆ ಬಿಟ್ಟು ಹೋಗಿದ್ದ ₹5900 ಕೋಟಿ ಸಾಲದ ಹೊರೆ ತೀರಿಸಲು ಬಸ್‌ ಪ್ರಯಾಣ ದರ ಹೆಚ್ಚಳದ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಸಮರ್ಥಿಸಿಕೊಂಡರು.

ಶಕ್ತಿ ಯೋಜನೆಯ ಹೊರೆ ಕಡಿಮೆ ಮಾಡಿಕೊಳ್ಳಲು ದರ ಹೆಚ್ಚಳ ಮಾಡಲಾಗಿದೆ ಎಂದು ಬಿಜೆಪಿ ಮುಖಂಡರು ಅಪಪ್ರಚಾರ ನಡೆಸುತ್ತಿದ್ದಾರೆ. ಮನುವಾದಿಗಳಿಗೆ ಮಹಿಳಾ ಸಬಲೀಕರಣ ಇಷ್ಟವಿಲ್ಲ. ಹಾಗಾಗಿ ಶಕ್ತಿ ಯೋಜನೆ ವಿರೋಧಿಸುತ್ತಿದ್ದಾರೆ ಎಂದು ದೂರಿದರು.

2018ರಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 18.46ರಷ್ಟು ಹೆಚ್ಚಳ ಮಾಡಲಾಗಿತ್ತು. ಡೀಸೆಲ್‌ ದರ ಇಳಿಕೆಯ ನಂತರ ಮತ್ತೆ ಶೇ 2ರಷ್ಟು ಇಳಿಕೆ ಮಾಡಲಾಗಿತ್ತು. ಬಿ.ಎಸ್‌. ಯಡಿಯೂರಪ್ಪ 2020ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಶೇ 12ರಷ್ಟು ಹೆಚ್ಚಳ ಮಾಡಿದ್ದರು. 2023ರಲ್ಲಿ ಬಿಜೆಪಿ ಸರ್ಕಾರದ ಅವಧಿ ಮುಗಿದಾಗ ₹5900 ಕೋಟಿ ಹೊರೆ ಉಳಿಸಿದ್ದರು ಎಂದು ವಿವರ ನೀಡಿದರು.

ಬಿಜೆಪಿ ಅವಧಿಯಲ್ಲಿ ಬೇಡಿಕೆಗಾಗಿ ಹೋರಾಟ ನಡೆಸಿದ್ದ 3 ಸಾವಿರ ನೌಕರರನ್ನು ವಜಾ ಮಾಡಿತ್ತು. 15 ಸಾವಿರ ನೌಕರರ ವಿರುದ್ಧ ಕ್ರಮ ಕೈಗೊಂಡಿತ್ತು. ವೇತನ ಪರಿಷ್ಕರಣೆ ಮಾಡಿದರೂ ಸೌಲಭ್ಯ ನೀಡಿರಲಿಲ್ಲ. ಖಾಲಿ ಹುದ್ದೆ ಭರ್ತಿ ಮಾಡಲಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದೆ. 9 ಸಾವಿರ ನೇಮಕಾತಿ ಮಾಡಿದೆ ಎಂದರು.

ಶಕ್ತಿ ಯೋಜನೆಗೆ ₹8800 ಕೋಟಿ ವೆಚ್ಚವಾಗಿದೆ. ಸರ್ಕಾರ ₹6543 ಕೋಟಿ ಬಿಡುಗಡೆ ಮಾಡಿದೆ. ದರ ಹೆಚ್ಚಳದಿಂದ ₹1300 ಕೋಟಿ ಹೆಚ್ಚುವರಿ ಸಂಗ್ರಹದ ನಿರೀಕ್ಷೆ ಇದೆ. ಶಕ್ತಿ ಯೋಜನೆ ಹೊರತಾಗಿ ನಾಲ್ಕು ನಿಗಮಗಳಿಗೆ ಪ್ರತಿ ವರ್ಷ ₹2 ಸಾವಿರ ಕೋಟಿ ನೆರವು ನೀಡಲು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಜನರು ಬೆಲೆ ಏರಿಕೆ ಮರೆತುಬಿಡುತ್ತಾರೆ: ಎಚ್‌ಡಿಕೆ

‘ಬಸ್‌ ದರ ಏರಿಕೆ ಬಗ್ಗೆ ಜನ ಒಂದೆರಡು ದಿನ ಗೊಣಗುತ್ತಾರೆ. ಆಮೇಲೆ ಮರೆತುಹೋಗುತ್ತಾರೆ. ಗ್ಯಾರಂಟಿಗಳ ಸಂತೋಷದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುವುದನ್ನೇ ಮರೆತಿದ್ದಾರೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಈ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿಗಳನ್ನು ನೀಡಿ ಇನ್ನೊಂದು ಕೈಯಲ್ಲಿ ಬೆಲೆ ಏರಿಕೆ ಮಾಡುತ್ತಿದೆ. ಆದರೆ ಜನರು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ’ ಎಂದರು.

‘ಈ ಸರ್ಕಾರದ ಅವಧಿಯಲ್ಲಿ ಜನರು ಬೆಲೆ ಏರಿಕೆಗೆ ಹೊಂದಿಕೊಂಡುಬಿಟ್ಟಿದ್ದಾರೆ. ರಾಜ್ಯದಲ್ಲಿ ಈಗ ಬೆಲೆ ಏರಿಕೆ ಎಂಬುದು ಅಚ್ಚರಿಯ ವಿಷಯವೇ ಅಲ್ಲ. ಸರ್ಕಾರವು ಜನರ ಮೇಲೆ ಬರೆ ಎಳೆಯುತ್ತಲೇ ಇದೆ. ಜನರು ಅದನ್ನು ಸಹಿಸಿಕೊಳ್ಳುತ್ತಲೇ ಇದ್ದಾರೆ. ಇದನ್ನೇ ಬೆಲೆ ಏರಿಕೆಗೆ ಜನರ ಸಮ್ಮತಿ ಇದೆ ಎಂದು ಸರ್ಕಾರ ಭಾವಿಸಿದಂತಿದೆ. ಆದರೆ ಇದು ಹೆಚ್ಚು ದಿನ ನಡೆಯುವುದಿಲ್ಲ’ ಎಂದು ಹೇಳಿದರು.

‘ಡೀಸೆಲ್ ಬೆಲೆ ಇಳಿಸುವಂತೆ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ಮನವೊಲಿಸಲಿ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಡೀಸೆಲ್ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಆಧರಿಸಿರುತ್ತದೆ. ರಾಜ್ಯ ಸರ್ಕಾರವು ಏರಿಕೆ ಮಾಡಿರುವ ಸೆಸ್‌ ಅನ್ನು ಮೊದಲು ಇಳಿಸಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.