ADVERTISEMENT

ಬಿಜೆಪಿ ವಿಡಿಯೊ ವಿಚಾರ ಮುಗಿದು ಹೋಗಿರೋ ಕತೆ; ಸಚಿವ ಡಿಕೆ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 10:42 IST
Last Updated 10 ಫೆಬ್ರುವರಿ 2019, 10:42 IST
   

ಬೆಂಗಳೂರು: ಬಿಜೆಪಿಯವರು ಹೇಳ್ತಿರೋ ವಿಡಿಯೊ ವಿಚಾರ ಬಹಳ ಹಿಂದೆ ಜೆಡಿಎಸ್ ಪಕ್ಷದೊಳಗೇಚರ್ಚೆ ಆಗಿದೆ. ಕುಮಾರಸ್ವಾಮಿ ಅವರು ಅಧಿವೇಶನದಲ್ಲೆ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಹೊಸದೇನೂ ಇಲ್ಲ ಎಂದು ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಿಎಂ ಆಡಿಯೊ ಬಿಡುಗಡೆಯಿಂದ ಬಿಜೆಪಿಯವರು ಹತಾಶರಾಗಿದ್ದಾರೆ. ಅವರು ಅದನ್ನು ಬೋಗಸ್ ಅಂತಾದರೂ ಹೇಳಲಿ, ಫಿಲ್ಮ್ ಅಂತಾದರೂ ಹೇಳಲಿ. ಯಾರು ಏನು ಬೇಕಾದರೂ ವಾದ ಮಾಡಲಿ, ಸತ್ಯ ಮುಚ್ಚಿಡೊದಕ್ಕೆ ಆಗುವುದಿಲ್ಲ ಎಂದು ಮಾಧ್ಯಮದವರಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.

ಸ್ಪೀಕರ್ ಅವ್ರು ವಿಧಾನಸಭೆಯಲ್ಲಿ ನಾನೇ ವಿಷಯ ಪ್ರಸ್ತಾಪ ಮಾಡ್ತೀನಿ ಅಂತ ಹೇಳಿದ್ದಾರೆ. ಯಾವ ರೀತಿ ತನಿಖೆ ಆಗಬೇಕು ಅಂತ ಸ್ಪೀಕರ್ ಅವ್ರೇ ನಾಳೆ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ADVERTISEMENT

ರಾಜ್ಯದ ಜನತೆ ಇದೆಲ್ಲವನ್ನು ಗಮನಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ವಾದ-ಪ್ರತಿವಾದ, ಕೌಂಟರ್ ಎಲ್ಲ ಬೇಕಾದಷ್ಟು ಆಗುತ್ತೆ.ನಾನು ಮತ್ತು ನೀವು ಗಾಬರಿ ಪಡುವ ಅಗತ್ಯವಿಲ್ಲ. ನೀವು ದಿನಾ ಸಿನಿಮಾ‌ ನೋಡ್ತಿದ್ದೀರಾ ಮತ್ತು ತೋರಿಸ್ತಾ ಇದ್ದೀರಾ. ವಾಸ್ತವಾಂಶ ಯಾರು ಮುಚ್ಚಿಡೋದಿಕ್ಕೆ ಆಗೋದಿಲ್ಲ. ಯಾರೂ ಯಾವುದನ್ನು ಡಬ್ ಮಾಡೋದಕ್ಕೆ ಆಗೋದಿಲ್ಲ. ಬೇಕಾದಷ್ಟು ಸಂಸ್ಥೆಗಳು ಇದ್ದಾವೆ ತನಿಖೆ‌ ಮಾಡೋಕೆ ಎಂದು ಹೇಳಿದರು.

ದೇಶದಲ್ಲಿ ವಿದ್ಯಾವಂತರು, ಬುದ್ದಿವಂತರು ಇದ್ದರಷ್ಟೇ ಸಾಲದು. ಜತೆಗೆ ಪ್ರಜ್ಞಾವಂತಿಕೆಯೂ ಇರಬೇಕು. ನನ್ನ ಧ್ವನಿ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಧ್ವನಿಯನ್ನ ಯಾರಾದರೂ ಬದಲಾವಣೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಯಾರು ಮಿಮಿಕ್ರಿ ಮಾಡೋದಕ್ಕೆ ಆಗೊಲ್ಲ. ವಾಸ್ತವಾಂಶವನ್ನು ನಾವು ಒಪ್ಪಿಕೊಳ್ಳಬೇಕು. ಏಕೆಂದರೆ ಈಗ ಯಾವುದೂ ಮುಚ್ಚುಮರೆಯಿಂದ ನಡೆಯುತ್ತಿಲ್ಲ. ಎಲ್ಲಾ ಬಹಿರಂಗವಾಗಿ ನಡೆಯುತ್ತಿದೆ ಎಂದರು.

ಯಡಿಯೂರಪ್ಪನವರು ಶರಣಗೌಡರ ಜತೆ ಮಾತಾಡಿರುವುದನ್ನು ಒಪ್ಪಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದಾಗ, ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮಿಮಿಕ್ರಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೆಮ್ಮು, ಸುಕ್ಕು, ಕಳ್ಳತನ ಮತ್ತಿತರರ ವಿಚಾರಗಳನ್ನ ಮುಚ್ಚಿಡಲು ಆಗೊಲ್ಲ ಎಂದರು.

ಯಡಿಯೂರಪ್ಪನವರ ಆತ್ಮಸಾಕ್ಷಿಯನ್ನು ಮೆಚ್ಚುತ್ತೇನೆ. ನಾಳೆ ಏನು‌ ಮಾಡಬೇಕು ಅನ್ನೋದು ಸ್ಪೀಕರ್‌ಗೆ ಬಿಡೋಣ. ಯಡಿಯೂರಪ್ಪಗೆ ದೇವರು ಒಳ್ಳೆಯದು ಮಾಡಲಿ ಎಂದರು.

ಬಿ.ಸಿ.ಪಾಟೀಲ್, ಹೆಬ್ಬಾರ್ ಪತ್ನಿ ವಾಯ್ಸ್ ಕೇಳಿದ್ದೀರಲ್ವಾ? ಒಮ್ಮೆ ನಾನು‌ ಇರುವಾಗಲೇ‌ ಒಬ್ಬ ಶಾಸಕರಿಗೆ ಜನಾರ್ಧನ ರೆಡ್ಡಿ ಕರೆ ಮಾಡಿದ್ರು. ಅವರು ಕರೆ ಮಾಡಿದ್ದು ಹೊಸ ಶಾಸಕನಿಗೆ. ಆಗ ನಾನೇ ವಾಪಸ್ಸು ಕರೆ ಮಾಡಿ ನನ್ನ ಮುಖ್ಯಮಂತ್ರಿ ಮಾಡ್ರಯ್ಯ. ಹೊಸಬರನ್ನ ಯಾಕೆ ಗೋಳು ಹೊಯ್ಕೊತೀರಿ ಅಂದಿದ್ದೆ ಎಂದು ತಿಳಿಸಿದರು.

ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದಿರುವುದು ರಾಜ್ಯಕ್ಕೆ ಮಾಡಿದ ಅಪಮಾನ ಎಂದರು.

ಸಿಎಂ ಯಾರೇ ಆಗಿದ್ದರೂ ಅವರನ್ನು ಕೇಂದ್ರ ಸರ್ಕಾರ ಕರೆಯಬೇಕಾಗಿತ್ತು. ಕುಮಾರಸ್ವಾಮಿ ಅಂತ ಕರೆಯೋದು ಬೇಡ. ಕುಮಾರಸ್ವಾಮಿ ಇವತ್ತು ಇರ್ತಾರೆ, ನಾಳೆ ಹೋಗ್ತಾರೆ.ಆದ್ರೆ ಸಿಎಂ ಅಂತ ಅವರನ್ನು ಕರೆಯಬೇಕಾಗಿತ್ತು ಎಂದು ತಿಳಿಸಿದರು.

ಸಿಎಂ ಕೂಡಾ ಕಾರ್ಯಕ್ರಮಕ್ಕೆ ಹೋಗೋದಕ್ಕೆ ತಯಾರಿ ಮಾಡಿಕೊಂಡಿದ್ರು. ಆದ್ರೆ ಕೇಂದ್ರದಿಂದ ಯಾವುದೇ ಅಹ್ವಾನ ನೀಡಿಲ್ಲ. ಇದು ರಾಜ್ಯ ಜನರಿಗೆ ಮಾಡಿದ ಅಪಮಾನ ಎಂದರು.

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.