ADVERTISEMENT

ಬೂಕರ್ ಪ್ರಶಸ್ತಿ ಗೆದ್ದ ಬಾನು ಮುಷ್ತಾಕ್‌ಗೆ CM ಸಿದ್ದರಾಮಯ್ಯ, ಡಿಕೆಶಿ ಅಭಿನಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮೇ 2025, 5:47 IST
Last Updated 21 ಮೇ 2025, 5:47 IST
<div class="paragraphs"><p>ಬಾನು ಮುಷ್ತಾಕ್‌</p></div>

ಬಾನು ಮುಷ್ತಾಕ್‌

   

ಬೆಂಗಳೂರು: ಕನ್ನಡದ ಹೆಸರಾಂತ ಲೇಖಕಿ ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

‘ಅಂತರರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ADVERTISEMENT

‘ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಹೃದಯ ದೀಪ’ವನ್ನು ಇಂಗ್ಲೀಷ್‌ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದು ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕನ್ನಡ ಸಾಹಿತ್ಯದ ಗರಿಮೆಯನ್ನು ಬಾನೆತ್ತರಕ್ಕೇರಿಸಿದ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳು. ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಸಣ್ಣ ಕಥೆಗಳ ಸಂಕಲನವು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನವಾಗಿರುವುದು ಹೆಮ್ಮೆಯ ವಿಚಾರ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ. ಬಾನು ಮುಷ್ತಾಕ್ ಹಾಗೂ ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ದೀಪಾ ಭಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇನ್ನಷ್ಟು ಉತ್ತಮ ಕೃತಿಗಳು ನಿಮ್ಮ ಲೇಖನಿಯಿಂದ ಮೂಡಿಬರಲಿ, ಸಾಹಿತ್ಯ ಸೇವೆಯು ಜಗದಗಲ ಹೆಸರು ಮಾಡಲಿ ಎಂದು ಶುಭ ಹಾರೈಸುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಸಮಸ್ತ ಕನ್ನಡಿಗರಿಗೆ ಇದು ಹೆಮ್ಮೆಯ ಕ್ಷಣ. ಜಾಗತಿಕ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ನಮ್ಮ ನಾಡಿನ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಹಾಗೆಯೇ, ಬೂಕರ್ ಪ್ರಶಸ್ತಿ ಪುರಸ್ಕೃತವಾಗಿರುವ ಅವರ ‘ಹೃದಯ ದೀಪ’ ಕೃತಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿರುವ ಲೇಖಕಿ ದೀಪಾ ಭಸ್ತಿ ಅವರಿಗೂ ಅಭಿನಂದನೆಗಳು. ಬಾನು ಮುಷ್ತಾಕ್ ಅವರಿಂದ ಇದೇ ರೀತಿಯಲ್ಲಿ ಇನ್ನಷ್ಟು ಉತ್ತಮ ಕೃತಿಗಳು ಬರಲಿ. ಅವರಿಂದ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತವಾಗಲಿ ಹಾಗೂ ಜಗತ್ತಿನ ಉದ್ದಗಲಕ್ಕೂ ಕನ್ನಡದ ಕಂಪು ಹರಡಲಿ ಎಂದು ಹಾರೈಸುತ್ತೇನೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾನು ಮುಷ್ತಾಕ್ ಅವರ, ಸಣ್ಣ ಕತೆಗಳ ಅನುವಾದಿತ ಸಂಕಲನ 'ಹಾರ್ಟ್ ಲ್ಯಾಂಪ್'ಗೆ ಈ ಪ್ರಶಸ್ತಿ ಲಭಿಸಿದೆ.

ಇದರೊಂದಿಗೆ, ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಂತಾಗಿದೆ. ಪ್ರಶಸ್ತಿಯು ಅಂದಾಜು ₹ 57.28 ಲಕ್ಷ (50 ಸಾವಿರ ಪೌಂಡ್‌) ನಗದು ಒಳಗೊಂಡಿದೆ.

1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ.

ಟೇಟ್ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮುಷ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ.

'ಯಾವ ಕಥೆಯೂ ಸಣ್ಣದಲ್ಲ, ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿತು' ಎಂದು ಹೇಳಿದ್ದಾರೆ.

'ನನ್ನ ಸುಂದರವಾದ ಭಾಷೆಗೆ ದೊರೆತ ಎಂತಹ ಸೊಗಸಾದ ಗೆಲುವು ಇದು' ಎಂದು ಅನುವಾದಕಿ ಭಸ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.

ಫ್ರೆಂಚ್‌ನಿಂದ ಅನುವಾದವಾದ ಎರಡು ಕೃತಿಗಳು, ಜಪಾನ್‌, ಇಟಾಲಿಯನ್‌ ಹಾಗೂ ಡ್ಯಾನಿಷ್‌ ಭಾಷೆಯ ತಲಾ ಒಂದು ಕೃತಿ 'ಶಾರ್ಟ್‌ ಲಿಸ್ಟ್‌'ನಲ್ಲಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.