ADVERTISEMENT

‘ಕೈ’ ಶಾಸಕರಲ್ಲಿ ಮಡುಗಟ್ಟಿದ ಅಸಮಾಧಾನ; ಶಾಸಕರ ಜೊತೆ ಸುರ್ಜೇವಾಲಾ ಚರ್ಚೆ ಇಂದಿನಿಂದ

* 3 ದಿನ 40 ಶಾಸಕರ ಜತೆ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 0:30 IST
Last Updated 30 ಜೂನ್ 2025, 0:30 IST
<div class="paragraphs"><p>ರಣದೀಪ್‌ಸಿಂಗ್‌ ಸುರ್ಜೇವಾಲಾ</p></div>

ರಣದೀಪ್‌ಸಿಂಗ್‌ ಸುರ್ಜೇವಾಲಾ

   

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಕಾರ್ಯವೈಖರಿ ವಿರುದ್ಧ ಸ್ವಪಕ್ಷೀಯ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಅದರ ಶಮನಕ್ಕಾಗಿ ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸೋಮವಾರದಿಂದ (ಜೂನ್‌ 30) ಮೂರು ದಿನ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ.

‘ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಯಲ್ಲಿ ಲಂಚ ಪಡೆಯಲಾಗುತ್ತಿದೆ’ ಎಂದು ಆಳಂದ ಶಾಸಕ ಬಿ.ಆರ್‌. ಪಾಟೀಲ, ‘ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವೇ ಇಲ್ಲ’ ಎಂದು ಕಾಗವಾಡ ಶಾಸಕ ರಾಜು ಕಾಗೆ ಬಹಿರಂಗವಾಗಿ ಆರೋಪ ಮಾಡಿದ್ದಾರೆ. ಅವರಿಗೆ ಬೆಂಬಲವಾಗಿ ಇನ್ನಷ್ಟು ಶಾಸಕರು ಧ್ವನಿಗೂಡಿಸುವ ಸಾಧ್ಯತೆಯನ್ನು ಅರಿತ ಕಾಂಗ್ರೆಸ್‌ ಹೈಕಮಾಂಡ್‌, ಬೇಗುದಿ ವ್ಯಾಪಿಸುವುದನ್ನು ತಡೆಯಲು ಮತ್ತು ಶಾಸಕರ ಅಹವಾಲು ಆಲಿಸಲು ಸುರ್ಜೇವಾಲಾ ಅವರಿಗೆ ಸೂಚನೆ ನೀಡಿದೆ.

ADVERTISEMENT

‘ಸುರ್ಜೇವಾಲಾ ಅವರು ಜೂನ್‌ 30ರಿಂದ ಜುಲೈ 2ರವರೆಗೆ ಕೆಪಿಸಿಸಿಯ ಭಾರತ್‌ ಜೋಡೊ ಭವನದಲ್ಲಿ ಶಾಸಕರ ಜೊತೆ ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ. ವೇಳಾಪಟ್ಟಿಗೆ ಅನುಸಾರವಾಗಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಬಹುದು’ ಎಂದು ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪತ್ರ ಬರೆದಿದ್ದಾರೆ.

ಬಿ.ಆರ್​. ಪಾಟೀಲ ದ್ವನಿ ಎತ್ತಿದ ಬೆನ್ನಲ್ಲೇ ಸರ್ಕಾರದ ವಿರುದ್ಧ ರಾಜು ಕಾಗೆ ಸಿಡಿದಿದ್ದರು. ಅಲ್ಲದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನೂ ಒಡ್ಡಿದ್ದರು. ಈ ಇಬ್ಬರ ಬಹಿರಂಗ ಹೇಳಿಕೆಗಳನ್ನು ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಮತ್ತು ಜೆಡಿಎಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಜಮೀರ್ ಅಹಮದ್‌ ಖಾನ್‌ ಅವರ ರಾಜೀನಾಮೆಗೆ ಆಗ್ರಹಿಸಿದ್ದವು. 

ಪಕ್ಷದ ವರಿಷ್ಠರ ಸೂಚನೆಯಂತೆ ಬಿ.ಆರ್. ಪಾಟೀಲ ಮತ್ತು ರಾಜು ಕಾಗೆ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನೂ ನೀಡಿದ್ದಾರೆ. ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಯಾರೊಬ್ಬರೂ ಸರ್ಕಾರದ ವಿರುದ್ಧ ಹೇಳಿಕೆ ನೀಡದಂತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರಿಗೆ ಪಕ್ಷದ ವರಿಷ್ಠರು ಸೂಚಿಸಿದ್ದರು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಪ್ರತ್ಯೇಕ ಸಭೆ: ಸುರ್ಜೇವಾಲಾ ಅವರು ಬಿ.ಆರ್‌. ಪಾಟೀಲ ಮತ್ತು ರಾಜು ಕಾಗೆ ಅವರ ಜೊತೆ ಮೊದಲು ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಇಬ್ಬರಿಗೂ ತಲಾ ಅರ್ಧ ಗಂಟೆಯ ಸಮಯಾವಕಾಶ ನೀಡಲಾಗಿದೆ. ಈ ಇಬ್ಬರನ್ನಲ್ಲದೆ, ಮೂರು ದಿನಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮತ್ತು ಗೌರಿಬಿದನೂರಿನ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ, ಬೆಂಗಳೂರು ವಿಭಾಗದ 27 ಶಾಸಕರು ಸೇರಿ 40 ಶಾಸಕರ ಜೊತೆ ಸುರ್ಜೇವಾಲಾ ಚರ್ಚೆ ನಡೆಸಲಿದ್ದಾರೆ. ಪ್ರತಿಯೊಬ್ಬ ಶಾಸಕರಿಗೂ ತಲಾ 20 ನಿಮಿಷಗಳ ಸಮಯಾವಕಾಶ ನೀಡಲಾಗಿದೆ.  

‘ಸೆಪ್ಟೆಂಬರ್ ನಂತರ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ನಡೆಯಲಿದೆ’ ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ‘ವರ್ಷಾಂತ್ಯದಲ್ಲಿ ಸರ್ಕಾರದಲ್ಲಿ ಸಣ್ಣಪುಟ್ಟ ಬದಲಾವಣೆ ಆಗಲಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇತ್ತೀಚೆಗೆ ನೀಡಿದ ಹೇಳಿಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ನಾನಾ ಚರ್ಚೆಗಳಿಗೆ ಕಾರಣವಾಗಿದೆ. ಇದೇ ವೇಳೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಹಲವು ಶಾಸಕರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಸಂಭಾವ್ಯ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಪಕ್ಷದೊಳಗೆ ಧ್ವನಿ ಎದ್ದಿದೆ. ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿರುವ ಕಾರಣ ಸಂಪುಟ ಪುನರ್‌ರಚನೆಗೆ ಕಾಂಗ್ರೆಸ್‌ನಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ, ಶಾಸಕರ ಜೊತೆ ಸುರ್ಜೇವಾಲಾ ಅವರು ಸಭೆ ನಡೆಸುತ್ತಿರುವುದು ಮಹತ್ವ ಪಡೆದುಕೊಂಡಿದೆ.

ಸುರ್ಜೇವಾಲಾ ಅವರು ಶಾಸಕರನ್ನು ಖುದ್ದಾಗಿ ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಅವರೇ ಶಾಸಕರಿಗೆ ತಿಳಿಸಿದ್ದಾರೆ. ನಾನು ಕೂಡ ಶಾಸಕರಿಗೆ ಮಾಹಿತಿ ನೀಡಿದ್ದೇನೆ
ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.