ADVERTISEMENT

ರಾಜ್ಯ ಸರ್ಕಾರದಲ್ಲಿನ ನಾಯಕತ್ವದ ಗೊಂದಲ ಹೈಕಮಾಂಡ್‌ ಸೃಷ್ಟಿಸಿಲ್ಲ: ಖರ್ಗೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 12:46 IST
Last Updated 21 ಡಿಸೆಂಬರ್ 2025, 12:46 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ಕಲಬುರಗಿ:‍‍ ‘ರಾಜ್ಯ ಸರ್ಕಾರದಲ್ಲಿನ ನಾಯಕತ್ವದ ಗೊಂದಲಗಳನ್ನು ಹೈಕಮಾಂಡ್‌ ಸೃಷ್ಟಿಸಿಲ್ಲ. ಅವೆಲ್ಲ ಸ್ಥಳೀಯವಾಗಿ ಸೃಷ್ಟಿಯಾಗುತ್ತಿದ್ದು, ಅವುಗಳನ್ನು ಸ್ಥಳೀಯ ನಾಯಕರೇ ಪರಿಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್‌ನತ್ತ ಬೊಟ್ಟು ಮಾಡಿದರೆ ಹೇಗೆ?’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷ ಕಾರ್ಯಕರ್ತರು ಒಳಗೊಂಡು ಎಲ್ಲರೂ ಸೇರಿ ಕಟ್ಟಿದ ಪಕ್ಷ. ಕಾಂಗ್ರೆಸ್‌ಗೆ ಯಾರೇ ನಾಯಕರು ಬಂದರೂ ಪಕ್ಷದ ಕಾರ್ಯಕರ್ತರು ಅವರನ್ನು ಬೆಂಬಲಿಸುತ್ತಾರೆ. ಪಕ್ಷ ಸಂಘಟನೆ ಕೆಲಸ ನನ್ನಿಂದ ಆಗಿದೆ, ತನ್ನಿಂದ ಆಗಿದೆ ಎಂದು ಯಾರೂ ಹೇಳಬಾರದು. ಕಾರ್ಯಕರ್ತರೂ ಪಕ್ಷ ಕಟ್ಟಿದ್ದು ಅವರು, ಇವರು ಎಂದು ಹೇಳುವುದನ್ನು ಬಿಡಬೇಕು. ಪಕ್ಷ ಎಂದ ಮೇಲೆ ಎಲ್ಲರ ಪಾತ್ರವೂ ಇರುತ್ತದೆ’ ಎಂದು ಪರೋಕ್ಷವಾಗಿ ಕುರ್ಚಿ ಕಿತ್ತಾಟದಲ್ಲಿ ತೊಡಗಿರುವ ನಾಯಕರಿಗೆ ಕಿವಿಮಾತು ಹೇಳಿದರು.

ADVERTISEMENT

ಡಿ.ಕೆ.ಶಿವಕುಮಾರ್‌ ಅವರ ನವದೆಹಲಿ ಭೇಟಿಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರದ ವಿರುದ್ಧ ವಾಗ್ದಾಳಿ: ‘ವಿಬಿ–ಜಿ ರಾಮ್ ಜಿ ಕಾಯ್ದೆ ಹಾಗೂ ಖಾಸಗಿ ಹೂಡಿಕೆಗೆ ಅಣುಶಕ್ತಿ ಕ್ಷೇತ್ರ ಮುಕ್ತಗೊಳಿಸುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಬಹಳ ಗಡಿಬಿಡಿಯಲ್ಲಿ ಜಾರಿಗೊಳಿಸುತ್ತಿದೆ. ಮನರೇಗಾ ಯೋಜನೆಗೆ ಮಹಾತ್ಮ ಗಾಂಧಿ ಹೆಸರು ಇದ್ದಿದ್ದರೆ ಕೇಂದ್ರ ಸರ್ಕಾರಕ್ಕೆ ತೊಂದರೆ ಏನಿತ್ತು? ಗಾಂಧೀಜಿ ಹೆಸರು ತೆಗೆದು ಜಿ–ರಾಮ್–ಜಿ ಇಟ್ಟಿದ್ದರಿಂದ ಏನು ಸಾಧಿಸಿದಂತಾಯಿತು’ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

‘ಯುಪಿಎ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ ಸರ್ಕಾರವು ಬಡವರಿಗಾಗಿ ಹಕ್ಕುಗಳ ರೂಪದಲ್ಲಿ ಕಾಯ್ದೆಗಳನ್ನು ಜಾರಿಗೊಳಿಸಿತ್ತು. ಶಿಕ್ಷಣದ ಹಕ್ಕು, ಆಹಾರ ಭದ್ರತೆ, ಕೆಲಸ ಹಕ್ಕು ಜಾರಿಗೆ ತಂದಿತ್ತು. ಆ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಒಂದೊಂದಾಗಿ ನಾಶ ಮಾಡುತ್ತಿದೆ. ಮನರೇಗಾ ಹೆಸರನ್ನು ಬರೀ ವಿಬಿ–ಜಿ ರಾಮ್ ಜಿ ಎಂದು ಬದಲಿಸಿಲ್ಲ. ಬದಲಿಗೆ ರೈಟ್‌ ಟು ವರ್ಕ್‌ ಇರುವಂಥದ್ದು (ಕೆಲಸದ ಹಕ್ಕು) ತೆಗೆದು, ತಮಗೆ ಬೇಕಾದಲ್ಲಿ, ಬೇಕಾದವರಿಗೆ ಮಾತ್ರವೇ ಕೆಲಸ ನೀಡುವಂತೆ ಬದಲಿಸಿದೆ. ಇದು ದೊಡ್ಡ ತಪ್ಪು. ಇದರ ವಿರುದ್ಧ ರಾಷ್ಟ್ರದಾದ್ಯಂತ ಚಳವಳಿ ನಡೆಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.