ಬೆಂಗಳೂರು: ಸ್ವಪಕ್ಷೀಯ ಶಾಸಕರು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ, ಬೇಡಿಕೆಗಳಿಗೆ ಸ್ಪಂದಿಸದ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿರುವ ಬೆನ್ನಲ್ಲೆ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಚಿವರ ‘ಮೌಲ್ಯಮಾಪನ’ ಆರಂಭಿಸಿದ್ದಾರೆ. ಶಾಸಕರ ಆರೋಪ– ದೂರುಗಳಿಗೆ ಸಂಬಂಧಿಸಿದಂತೆ ವಿವರಣೆ ಪಡೆದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದ ಬಿ.ಜೆಡ್. ಜಮೀರ್ ಅಹಮದ್‌ಖಾನ್, ಬೈರತಿ ಸುರೇಶ್, ರಹೀಂ ಖಾನ್ ಜೊತೆ ಸುರ್ಜೇವಾಲಾ ಅವರು ಸೋಮವಾರ ಚರ್ಚೆ ನಡೆಸಿದರು. ಸಚಿವರ ಜೊತೆ ಮಂಗಳವಾರವೂ ಅವರು ಸಭೆ ನಡೆಸಲಿದ್ದಾರೆ.
ಶಾಸಕರು ಮಾಡಿದ್ದ ಆರೋಪಗಳ ಪಟ್ಟಿಯನ್ನು ಸಚಿವರ ಮುಂದಿಟ್ಟ ಸುರ್ಜೇವಾಲಾ, ‘ನಿಮ್ಮ ಇಲಾಖೆಗೆ ಸಂಬಂಧಿಸಿದಂತೆ ಹಲವು ಶಾಸಕರು ದೂರು ನೀಡಿದ್ದಾರೆ. ಯಾವುದೇ ಪತ್ರಗಳಿಗೂ ಮಾನ್ಯತೆ ನೀಡುತ್ತಿಲ್ಲ, ಯಾವ ಕೆಲಸಗಳನ್ನೂ ಮಾಡಿಕೊಡುವುದಿಲ್ಲ, ಕರೆ ಮಾಡಿದರೂ ಸ್ಪಂದಿಸುವುದಿಲ್ಲವೆಂದು ಆರೋಪಿಸಿದ್ದಾರೆ’ ಎಂದು ನೇರವಾಗಿ ಹೇಳಿದ್ದಾರೆ. ಸುರ್ಜೇವಾಲಾ ಅವರ ಪ್ರಶ್ನೆಗಳಿಗೆ ಸಚಿವರು ತಬ್ಬಿಬ್ಬಾಗಿದ್ದಾರೆ ಎಂದು ಗೊತ್ತಾಗಿದೆ.
‘ಶಾಸಕರ ಅಹವಾಲುಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಬೇಡಿಕೆಗಳಿಗೂ ಸ್ಪಂದಿಸುತ್ತಿದ್ದೇವೆ. ದೂರುಗಳಿದ್ದರೆ ಬಗೆಹರಿಸುತ್ತೇವೆ’ ಎಂದು ಬೈರತಿ ಸುರೇಶ್ ಮತ್ತು ಜಮೀರ್ ಅಹಮದ್‌ಖಾನ್ ಭರವಸೆ ನೀಡಿದ್ದಾರೆ ಎಂದೂ ಗೊತ್ತಾಗಿದೆ.
ಸಚಿವರೂ ಶಾಸಕರೇ. ಹೀಗಾಗಿ ಅವರ ಜೊತೆಯಲ್ಲೂ ಸಭೆ ನಡೆಸುತ್ತಿದ್ದೇನೆ. ಶಾಸಕರ ಕೆಲವು ಬೇಡಿಕೆಗಳ ಬಗ್ಗೆ ಸಚಿವರ ಜೊತೆ ಚರ್ಚೆ ಮಾಡುತ್ತೇನೆ.- ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ
‘ಸುರ್ಜೇವಾಲಾ ಜೊತೆ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ನನ್ನ ಇಲಾಖೆಯ ಕಾರ್ಯವೈಖರಿ ಬಗ್ಗೆ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಹೊಸತಾಗಿ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ, ‘ಎ’ ಖಾತೆ ‘ಬಿ’ ಖಾತೆಗಳ ಬಗ್ಗೆ ಚರ್ಚೆ ಆಗಿದೆ. ಬಡವರಿಗೆ ಅನುಕೂಲ ಆಗುವ ಯೋಜನೆಗಳನ್ನು ರೂಪಿಸುವಂತೆ ಅವರು ಸಲಹೆ ನೀಡಿದ್ದಾರೆ’ ಎಂದು ರಹೀಂ ಖಾನ್ ಹೇಳಿದರು.
‘ರಸ್ತೆ, ಮೂಲಸೌಕರ್ಯ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಬಗೆಹರಿಸುವಂತೆ ಸಲಹೆ ನೀಡಿದ್ದಾರೆ. ನನ್ನ ಕೆಲಸದ ಬಗ್ಗೆ ಸಮಾಧಾನವಿದೆ ಎಂದಿದ್ದಾರೆ. ನಾನೇ ಕರೆ ಮಾಡಿ, ಕ್ಷೇತ್ರದಲ್ಲಿ ಸಮಸ್ಯೆಗಳಿದ್ದರೆ ತಿಳಿಸುವಂತೆ ಶಾಸಕರಿಗೆ ಹೇಳುತ್ತೇನೆ’ ಎಂದರು.
ದೂರುಗಳ ಬಗ್ಗೆ ಚರ್ಚೆ ಮಾಡಿಲ್ಲ:
‘ಶಾಸಕರು ದೂರು ಕೊಟ್ಟಿರಬಹುದು. ಆದರೆ, ಈ ಬಗ್ಗೆ ನನ್ನ ಜೊತೆ ಸುರ್ಜೇವಾಲಾ ಅವರು ಚರ್ಚೆ ಮಾಡಿಲ್ಲ. ನನ್ನ ಇಲಾಖೆಯ ಕೆಲಸಗಳ ಬಗ್ಗೆ ಮತ್ತು ಹೊಸ ಯೋಜನೆಗಳ ಕುರಿತು ವಿವರಣೆ ಕೇಳಿದರು’ ಎಂದು ಬೈರತಿ ಸುರೇಶ್ ವಿವರಿಸಿದರು.
ನಂಬರ್ ಒನ್ ಸಚಿವನೆಂಬ ‘ಪ್ರಶಸ್ತಿ’: ಜಮೀರ್
‘ಶಾಸಕರ ಕ್ಷೇತ್ರಗಳಿಗೆ ಮನೆಗಳ ಹಂಚಿಕೆ ಬಗ್ಗೆ ಚರ್ಚೆಯಾಯಿತು. ಶಾಸಕರು ಕೊಟ್ಟಿರುವ ಬೇಡಿಕೆಗಳ ಪಟ್ಟಿಯನ್ನು ಸುರ್ಜೇವಾಲಾ ನನಗೆ ಕೊಟ್ಟಿದ್ದಾರೆ. ನೀವು ನಂಬರ್ ಒನ್ ಸಚಿವ. ಪ್ರಶಸ್ತಿ ಕೊಡುವುದಾದರೆ ನಿಮಗೇ ಕೊಡಬೇಕು ಎಂದಿದ್ದಾರೆ. ಅವರ ಮಾತಿನಿಂದ ಖುಷಿಯಾಗಿದೆ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಯಾವ ಶಾಸಕರೂ ನನ್ನ ಮೇಲೆ ಆರೋಪ ಮಾಡಿಲ್ಲ. ಸುರ್ಜೇವಾಲಾ ಎಂದೂ ಸುಳ್ಳು ಹೇಳುವುದಿಲ್ಲ. ತಪ್ಪು ಇದ್ದರೆ ತಪ್ಪು ಎಂದೇ ಹೇಳುತ್ತಾರೆ. ಶಾಸಕರು ಮನೆ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಮನೆ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ಕೂಡಾ ಒಂದೇ ಒಂದು ಮನೆ ಕೊಟ್ಟಿಲ್ಲ. ನಮ್ಮ ಬಳಿಯೂ ಗುರಿ ಇಲ್ಲ. ನಾವು ಕೂಡಾ ಎರಡು ವರ್ಷಗಳಿಂದ ಮನೆಗಳ ಹಂಚಿಕೆ ಮಾಡಿಲ್ಲ’ ಎಂದರು.
‘ಮುಂದಿನ ವರ್ಷ ಮನೆಗಳ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಮನೆ ನಿರ್ಮಾಣಕ್ಕೆ ₹ 1.20 ಲಕ್ಷ ಸಾಲುವುದಿಲ್ಲ. ಹೀಗಾಗಿ ಅದನ್ನು ₹ 3.50 ಲಕ್ಷಕ್ಕೆ ಹೆಚ್ಚಿಸಿದ್ದೇವೆ. ಶಾಸಕ ಬಿ.ಆರ್. ಪಾಟೀಲ ಆರೋಪ ಮಾಡಿರುವ ವಿಚಾರದ ಪ್ರಸ್ತಾಪ ಆಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.