
ಸುವರ್ಣ ವಿಧಾನಸೌಧ (ಬೆಳಗಾವಿ): ‘ರಾಜ್ಯದಲ್ಲಿ ಒಟ್ಟು 3.30 ಲಕ್ಷ ಹೆಕ್ಟೇರ್ ಡೀಮ್ಡ್ (ಪರಿಭಾವಿತ) ಅರಣ್ಯ ಪ್ರದೇಶ ಇರುವುದಾಗಿ ಸುಪ್ರೀಂ ಕೋರ್ಟ್‌ಗೆ 2022ರಲ್ಲಿ ಸರ್ಕಾರ ಮಾಹಿತಿ ನೀಡಿತ್ತು. ಇದರ ಪುನರ್ ಪರಿಶೀಲನೆ ನಡೆಸಿ ವಾಸ್ತವದಲ್ಲಿರುವ ಡೀಮ್ಡ್ ಅರಣ್ಯ ಪ್ರದೇಶವನ್ನು ಗುರುತಿಸಲು ಸಮಿತಿ ರಚಿಸಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಧಾನಸಭೆಗೆ ತಿಳಿಸಿದರು.
ಕಾಂಗ್ರೆಸ್‌ನ ಎಸ್.ಎನ್. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಡೀಮ್ಡ್ ಅರಣ್ಯ ಪ್ರದೇಶವನ್ನು ಗುರುತಿಸುವಾಗ ಕೆಲವು ಲೋಪಗಳಾಗಿವೆ ಎಂಬ ದೂರು, ಆರೋಪಗಳು ಬಂದಿವೆ. ಹೀಗಾಗಿ, ಪುನರ್‌ಪರಿಶೀಲನೆಗೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಸಮಿತಿ ರಚಿಸಲಾಗಿದೆ’ ಎಂದರು.
‘ಸರ್ಕಾರವೇ ಮಂಜೂರು ಮಾಡಿ ರೈತರ ಹೆಸರಲ್ಲಿ ಖಾತೆ, ಪಹಣಿ ದಾಖಲೆಗಳಿರುವ ಆಸ್ತಿಗಳನ್ನೂ ತಮ್ಮ ಕ್ಷೇತ್ರದಲ್ಲಿ ಗ್ರಾಮ ಅರಣ್ಯ, ಡೀಮ್ಡ್ ಅರಣ್ಯ ಎಂದು ಗುರುತಿಸಿ ಅರಣ್ಯ ಸಿಬ್ಬಂದಿ ಒಕ್ಕಲೆಬ್ಬಿಸುತ್ತಿದ್ದಾರೆ’ ಎಂದು ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೆ ದನಿಗೂಡಿಸಿದ ಬಿಜೆಪಿಯ ಸಿ.ಸಿ. ಪಾಟೀಲ, ವಿ. ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಭಾಗೀರಥಿ ಮರುಳ್ಯ, ‘ಡೀಮ್ಡ್ ಅರಣ್ಯ ಪ್ರದೇಶವನ್ನು ಹಿಂದೆ ಬೇಕಾಬಿಟ್ಟಿಯಾಗಿ ಗುರುತಿಸಲಾಗಿದೆ. ಇದರಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ಪುನರ್ ಪರಿಶೀಲಿಸಿ ನೈಜ ಅರಣ್ಯವನ್ನು ಮಾತ್ರ ಗುರುತಿಸಿ ಉಳಿದ ಪ್ರದೇಶವನ್ನು ರೈತರು, ಜನಸಾಮಾನ್ಯರಿಗೆ ವಾಪಸ್ ನೀಡಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನ್ಯಾಯಾಲಯದ ಸೂಚನೆಯಂತೆ ಪುನರ್ ಪರಿಶೀಲಿಸಲು ನಿರ್ಧರಿಸಲಾಗಿದೆ. ನೈಜವಾಗಿ ಯಾವ್ಯಾವ ಪ್ರದೇಶ ಡೀಮ್ಡ್ ಅರಣ್ಯ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಗುರುತಿಸಿ ಸುಪ್ರಿಂ ಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು. ಡೀಮ್ಡ್ ಅರಣ್ಯವಲ್ಲದ ಹೆಚ್ಚುವರಿ ಜಾಗವನ್ನು ಗುರುತಿಸಿ ಸಂಬಂಧಿಸಿದ ರೈತರು, ಜನಸಾಮಾನ್ಯರಿಗೆ ಬಿಟ್ಟುಕೊಡಲಾಗುವುದು ’ಎಂದು ಭರವಸೆ ನೀಡಿದರು.
‘ಗ್ರಾಮ ಅರಣ್ಯ ಪ್ರದೇಶಕ್ಕೆ ಒಳಪಡದಿದ್ದರೂ ಭೂ ದಾಖಲೆಗಳನ್ನು ಹೊಂದಿರುವ ತಮ್ಮ ಕ್ಷೇತ್ರದಲ್ಲಿ 29 ರೈತರನ್ನು ಒಕ್ಕಲೆಬ್ಬಿಸಲಾಗಿದೆ’ ಎಂದೂ ನಾರಾಯಣಸ್ವಾಮಿ ಆರೋಪಿಸಿದರು. ಈ ಬಗ್ಗೆ ದಾಖಲೆಗಳನ್ನು ಒದಗಿಸಿದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.