ADVERTISEMENT

40 ದಿನ ಬಳ್ಳಾರಿ ಜೈಲಿನಲ್ಲಿದ್ದ ಏಕನಾಥ ಶಿಂಧೆ!

1986ರಲ್ಲಿ ಬೆಳಗಾವಿಯಲ್ಲಿ ಹಿಂಸಾಚಾರಕ್ಕೆ ಕಾರಣವಾದ ಗಡಿ ಹೋರಾಟದಲ್ಲಿ ಪಾಲ್ಗೊಂಡಿದ್ದರು

ಸಂತೋಷ ಈ.ಚಿನಗುಡಿ
Published 30 ಜೂನ್ 2022, 16:29 IST
Last Updated 30 ಜೂನ್ 2022, 16:29 IST
ಏಕನಾಥ ಶಿಂಧೆ
ಏಕನಾಥ ಶಿಂಧೆ    

ಬೆಳಗಾವಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ರಾಜಕೀಯ ಜೀವನಕ್ಕೆ ಮೆಟ್ಟಿಲಾಗಿದ್ದೇ ಬೆಳಗಾವಿ..!

ಕರ್ನಾಟಕ– ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ 1986ರಲ್ಲಿ ಬೆಳಗಾವಿ ನಗರದಲ್ಲಿ ನಡೆದ ‘ಮಹಾದಂಗೆ’ಯಲ್ಲಿ ಪಾಲ್ಗೊಂಡಿದ್ದೇ ಏಕನಾಥ ರಾಜಕೀಯ ನಾಯಕರಾಗಿ ಬೆಳೆಯಲು ಕಾರಣವಾಯಿತು. ಗಡಿ ಸಂಘರ್ಷದಲ್ಲಿ ಪಾಲ್ಗೊಂಡಿದ್ದ ಅವರನ್ನು 40 ದಿನಗಳವರೆಗೆ ಬೆಳಗಾವಿ ಹಾಗೂ ಬಳ್ಳಾರಿ ಜೈಲಿನಲ್ಲಿ ಇಡಲಾಗಿತ್ತು. ಆ ಹೋರಾಟದಲ್ಲಿ 9 ಮರಾಠಿಗರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು.

ಜೈಲಿನ ದಿನಗಳೇ ಅವರನ್ನು ರಾಜಕೀಯವಾಗಿ ಬೆಳೆಯಲು ಪ್ರೇರೇಪಿಸಿದವು. ಹೊರಹೋದ ನಂತರ ಗಡಿ ತಂಟೆಯನ್ನೇ ಬಂಡವಾಳ ಮಾಡಿಕೊಂಡು ಅವರು ಮರಾಠಿಗರ ನಾಯಕನಾಗಿ ಬೆಳೆದರು. ಅಲ್ಲಿಯವರೆಗೂ ಕೊಲ್ಹಾಪುರದಲ್ಲಿ ಸಾಮಾನ್ಯ ಆಟೊ ಚಾಲಕನಾಗಿದ್ದ ಏಕನಾಥ ‘ಗಡಿ ಉಗ್ರವಾದ’ದ ಮೂಲಕವೇ ಶಿವಸೇನೆ ಸೇರಲು ದಾರಿ ಮಾಡಿಕೊಂಡರು.

ADVERTISEMENT

ರಕ್ತಚರಿತ್ರೆಯ ಪುಟ: ಬೆಳಗಾವಿಯೂ ಸೇರಿದಂತೆ ಒಟ್ಟು 865 (ನಗರ, ಪಟ್ಟಣ, ಹಳ್ಳಿ) ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು 1980ರಲ್ಲಿ ಮರಾಠಿಗರು ಉಗ್ರವಾದ ಹೋರಾಟ ಆರಂಭಿಸಿದ್ದರು. 1986ರ ಜೂನ್‌ 1ರಂದು ಶಿವಸೇನೆ ಹಾಗೂ ಎಂಇಎಸ್‌ ಕಾರ್ಯಕರ್ತರು ‘ಸೀಮಾಲಡಾಯಿ(ಗಡಿ ಸಂಘರ್ಷ)’ಗೆ ಕರೆ ಕೊಟ್ಟರು. ಸಾವಿರಾರು ಚಳವಳಿಕಾರರು ಕಳ್ಳದಾರಿಯ ಮೂಲಕ ಬೆಳಗಾವಿಗೆ ನುಗ್ಗಿದ್ದರು. ಹೀಗೆ ಬಂದವರ ಗುಂಪಿನಲ್ಲೇ ಇದ್ದರು ಏಕನಾಥ ಶಿಂಧೆ.

ಮಹಾರಾಷ್ಟ್ರದ ನಾಯಕರಾಗಿದ್ದ ಶರದ್‌ ಪವಾರ್‌ ಸೀಮಾ ಲಡಾಯಿಗೆ ಕರೆ ಕೊಟ್ಟಿದ್ದರು. ಶಿವಸೇನೆಯಲ್ಲಿದ್ದ ಸುರೇಶ್‌ ಕಲ್ನಾಡಿ, ಛಗನ್‌ ಭುಜಬಳ್ (ಈಗ ಎನ್‌ಸಿಪಿಯಲ್ಲಿ ಇದ್ದಾರೆ) ಅವರ ಹಿಂಬಾಲಕರಾಗಿ ಏಕನಾಥ ಬಂದಿದ್ದರು.

ಛಗನ್ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮರಾಠಿಗರು ನಗರದಲ್ಲಿ ಹಿಂಸಾಚಾರ ನಡೆಸಿದ್ದರು. ಹಲವು ಕನ್ನಡ ಶಾಲೆಗಳಿಗೆ, ಮನೆಗಳಿಗೆ ಬೆಂಕಿ ಹಚ್ಚಿದ್ದರು. ಕಿರ್ಲೋಸ್ಕರ್‌ ರಸ್ತೆಯಲ್ಲಿ ಕಾವಲಿಗೆ ನಿಂತಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಅವರಿಗೂ ಬೆಂಕಿ ಹಚ್ಚಿದ್ದರು. ರೈಲು ಬೋಗಿಗಳನ್ನು ಉರುಳಿಸಿ, ಹಳಿಗಳನ್ನು ಕಿತ್ತೆಸೆದಿದ್ದರು. ಹಿಂಡಲಗಾ ಜೈಲಿನ ಹತ್ತಿರ ಇದ್ದ ನೀರಿನ ಪಂಪ್‌ಹೌಸ್‌ಗೂ ಕೊಳ್ಳಿ ಇಟ್ಟಿದ್ದರು.

ಆ ಹಿಂಸಾಚಾರ ತಡೆಯಲು ಆಗಿನ ರಾಜ್ಯದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಗೋಲಿಬಾರ್‌ಗೆ ಆದೇಶ ನೀಡಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಗಿದ್ದ ಕೆ.ನಾರಾಯಣ್‌ ಅವರ ನೇತೃತ್ವದಲ್ಲಿ ನಡೆಸಿದ ಗೋಲಿಬಾರ್‌ನಲ್ಲಿ 9 ಮರಾಠಿಗರು ಸ್ಥಳದಲ್ಲೇ ಮೃತರಾಗಿದ್ದರು. ನೂರಾರು ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದರ ಸ್ಮರಣಾರ್ಥವಾಗಿ ಎಂಇಎಸ್‌ ಮುಖಂಡರು ಈಗಲೂ ಜೂನ್‌ 1ಕ್ಕೆ ಹುತಾತ್ಮ ದಿನ ಆಚರಿಸುತ್ತಾರೆ.

ನಾಯಕತ್ವ ವಹಿಸಿದ್ದ ಛಗನ್‌ ಜತೆಗೇ ಏಕನಾಥ ಶಿಂಧೆ ಅವರನ್ನೂ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ಜಾಗ ಸಾಲದ ಕಾರಣ ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು. 40 ದಿನ ಜೈಲುವಾಸದ ನಂತರ ಏಕನಾಥ ಜಾಮೀನು ಪಡೆದು ಹೊರಬಂದರು.

‘ಗಡಿ ತಂಟೆಯೇ ಏಕನಾಥ ರಾಜಕೀಯದ ಮೆಟ್ಟಿಲು’

ಗಡಿ ವಿವಾದವೇ ಏಕನಾಥ ಶಿಂಧೆ ಹಾಗೂ ಛಗನ್‌ ಭುಜಬಲ್‌ ಅವರ ರಾಜಕೀಯದ ಮೆಟ್ಟಿಲು. ಇದೇ ಕಾರಣಕ್ಕೆ ಉದ್ಧವ್‌ ಠಾಕ್ರೆ ಸರ್ಕಾರದಲ್ಲಿ ಇಬ್ಬರಿಗೂ ಗಡಿ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿತ್ತು. ಗಡಿ ವಿಚಾದರಲ್ಲಿ ಏಕನಾಥ ಅವರದು ಉಗ್ರವಾದ ನಿಲುವು. ಈಗ ಅವರೇ ಮುಖ್ಯಮಂತ್ರಿ ಆಗಿದ್ದರಿಂದ ಮತ್ತೆ ಗಡಿ ಕ್ಯಾತೆಗೆ ಪುಷ್ಠಿ ನೀಡದೇ ಇರಲಾರರು. ಎಂಇಎಸ್‌ ಹಾಗೂ ಶಿವಸೇನಾ ಬೇರೆಬೇರೆ ರಾಜಕೀಯ ನಿಲುವು ಹೊಂದಿದ್ದರೂ ಗಡಿ ವಿಚಾರದಲ್ಲಿ ಇಬ್ಬರದೂ ಒಂದೇ ಅಜೆಂಡ. ಹೀಗಾಗಿ, ಈಗ ತೆಪ್ಪಗೆ ಕುಳಿತ ಎಂಇಎಸ್‌ ಕಾರ್ಯಕರ್ತರೂ ಬಾಲ ಬಿಚ್ಚಬಹುದು.

–ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ

*

(ಮಾಹಿತಿ: ಅಶೋಕ ಚಂದರಗಿ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ)

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.