ಎ.ಐ ಚಿತ್ರ
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎ.ಐ) ಮೂಲಸೌಕರ್ಯ ಕೇಂದ್ರ ನಿರ್ಮಾಣಕ್ಕಾಗಿ ಆಂಧ್ರಪ್ರದೇಶದಲ್ಲಿ ಒಟ್ಟು 15 ಬಿಲಿಯನ್ ಡಾಲರ್ (ಸರಿಸುಮಾರು ₹1.33 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಗೂಗಲ್ ಕಂಪನಿಯು ಮಂಗಳವಾರ ಘೋಷಿಸಿದೆ. ಇದು ಭಾರತದಲ್ಲಿ ಗೂಗಲ್ ಕಂಪನಿಯ ಅತಿ ದೊಡ್ಡ ಹೂಡಿಕೆಯಾಗಿದೆ.
ಇದನ್ನೇ ಉಲ್ಲೇಖ ಮಾಡಿರುವ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷ, 'ರಾಜ್ಯದ ಕೈತಪ್ಪಿದ ಗೂಗಲ್ ಎ.ಐ ಹಬ್ ಆಂಧ್ರ ಪಾಲಾಗಿದೆ' ಎಂದು ಆರೋಪಿಸಿದೆ.
'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿಗೆ ಗ್ರಹಣ ಹಿಡಿದಿದೆ. ಬೆಂಗಳೂರಿನ ಗುಂಡಿಗಳು, ಐಟಿ ಸಚಿವ ಪ್ರಿಯಾಂಕ್ ಖರ್ಗೆ ನಿರ್ಲಕ್ಷತನದಿಂದ ₹1.3 ಲಕ್ಷ ಕೋಟಿ ಹೂಡಿಕೆಯ ಯೋಜನೆಯೊಂದು ರಾಜ್ಯದ ಕೈತಪ್ಪಿದ್ದು, ಕರ್ನಾಟಕಕ್ಕೆ ದೊಡ್ಡ ಹೊಡೆತ ಬಿದ್ದಿದೆ' ಎಂದು ಹೇಳಿದೆ.
'ಜಾಗತಿಕ ಟೆಕ್ ದಿಗ್ಗಜ ಗೂಗಲ್ ವಿಶಾಖಪಟ್ಟಣದಲ್ಲಿ ಸುಮಾರು ₹1.3 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ ಎ.ಐ ಹಬ್ ಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 30,000 ಉದ್ಯೋಗ ಜೊತೆಗೆ ವಾರ್ಷಿಕ ₹10,000 ಕೋಟಿ ಆದಾಯ ಗಳಿಸಬಹುದಾಗಿದ್ದ ಯೋಜನೆಯು ಕರ್ನಾಟಕದ ಕೈತಪ್ಪಿ ಅನ್ಯ ರಾಜ್ಯಕ್ಕೆ ಹೋಗಿದೆ' ಎಂದು ಆರೋಪಿಸಿದೆ.
'ಗಾರ್ಡನ್ ಸಿಟಿಯ ರಸ್ತೆ ಗುಂಡಿ, ಕಸ ಹಾಗೂ ಮೂಲ ಸೌಕರ್ಯ ಸಮಸ್ಯೆ ಕಾರಣಕ್ಕೆ ಕಾರ್ಪೊರೇಟ್ ವಲಯದ ಕೆಂಗಣ್ಣಿಗೆ ಗುರಿಯಾಗಿರುವ ಸಮಯದಲ್ಲೇ ಜಾಗತಿಕ ಬೃಹತ್ ಹೂಡಿಕೆಯ ಯೋಜನೆ ನೆರೆ ರಾಜ್ಯ ಆಂದ್ರ ಪಾಲಾಗಿದೆ' ಎಂದು ಟೀಕಿಸಿದೆ.
'ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವುದನ್ನು ಬಿಟ್ಟು ಉದ್ಯಮಿಗಳು ಬೆಂಗಳೂರು ಬಿಟ್ಟು ಹೋದರೆ ಹೋಗಲಿ ಎಂದು ಧಮ್ಕಿ ಹಾಕುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ನಿಷ್ಪ್ರಯೋಜಕ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಗೂಗಲ್ ಎ.ಐ ಹಬ್ ಕರ್ನಾಟಕದ ಕೈತಪ್ಪಲು ನೀವು ಮತ್ತು ನಿಮ್ಮ ಸರ್ಕಾರದ ನಿರ್ಲಕ್ಷತನವೇ ಕಾರಣ' ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.