ADVERTISEMENT

ಹಾವೇರಿ | ಹಾಸಿಗೆ ಸಿಗದೆ ಕಾರಿಡಾರ್‌ನಲ್ಲೇ ಹೆರಿಗೆ: ನೆಲಕ್ಕೆ ಬಿದ್ದು ಶಿಶು ಸಾವು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 11:15 IST
Last Updated 18 ನವೆಂಬರ್ 2025, 11:15 IST
<div class="paragraphs"><p>ಶಿಶು (ಸಾಂದರ್ಭಿಕ ಚಿತ್ರ)</p></div>

ಶಿಶು (ಸಾಂದರ್ಭಿಕ ಚಿತ್ರ)

   

ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು‌ ಮಕ್ಕಳ ಆಸ್ಪತ್ರೆಯ ಕಾರಿಡಾರ್‌ನಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ಆಗಿದ್ದು, ನೆಲದ ಮೇಲೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಶಿಶು ಸ್ಥಳದಲ್ಲೇ ಮೃತಪಟ್ಟಿದೆ.

ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕಿಯರ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಮಹಿಳೆಯರ ಸಂಬಂಧಿಕರು ಆರೋಪಿಸಿದ್ದಾರೆ.

ADVERTISEMENT

ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ರೂಪಾ (30) ಅವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ, ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಹೆರಿಗೆ ಕೊಠಡಿಯಲ್ಲಿ ಹೆಚ್ಚು ಮಹಿಳೆಯರಿದ್ದರು. ಹೀಗಾಗಿ, ಬೆಡ್‌ಗಳ ಕೊರತೆ ಇತ್ತು. ಮಹಿಳೆಗೆ ಬೆಡ್ ಸಿಕ್ಕಿರಲಿಲ್ಲ.

ಕೊಠಡಿ ಹೊರಗೆಯೇ ನೆಲದ ಮೇಲೆ ಕುಳಿತಿದ್ದ ಮಹಿಳೆ ರೂಪಾ, ತೀವ್ರವಾದ ನೋವು ಅನುಭವಿಸುತ್ತಿದ್ದರು. ವೈದ್ಯರಾಗಲಿ ಶುಶ್ರೂಷಕಿಯರಾಗಲಿ ಬೆಡ್ ಕೊಡಿಸಲು ಮುಂದಾಗಿರಲಿಲ್ಲವೆಂದು ಸಂಬಂಧಿಕರು ದೂರಿದರು.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾರಿಡಾರ್‌ನಲ್ಲಿದ್ದ ಮಹಿಳೆ ಮೇಲಕ್ಕೆ ಎದ್ದು ಶೌಚಾಲಯದತ್ತ ಹೊರಟಿದ್ದರು. ಇದೇ ಸಂದರ್ಭದಲ್ಲಿ ಮಾರ್ಗಮಧ್ಯೆಯೇ ಹೆರಿಗೆ ಆಗಿದೆ. ಮಹಿಳೆ ನಡೆದುಕೊಂಡು ಹೋಗುವಾಗಲೇ ಹೆರಿಗೆ ಆಗಿದ್ದರಿಂದ, ಶಿಶು ನೆಲಕ್ಕೆ ಬಿದ್ದಿತ್ತು. ಅದರ ತಲೆಗೆ ತೀವ್ರ ಪೆಟ್ಟಾಗಿತ್ತು. ಹೀಗಾಗಿ, ಸ್ಥಳದಲ್ಲಿಯೇ ಶಿಶು ಮೃತಪಟ್ಟಿದೆ ಎಂದು ಸಂಬಂಧಿಕರು ತಿಳಿಸಿದರು‌.

'ತೀವ್ರ ಹೆರಿಗೆ ನೋವಿದ್ದರೂ ವೈದ್ಯರು ಹಾಗೂ ಶುಶ್ರೂಷಕಿಯರು ಸ್ಪಂದನೆ ಮಾಡಲಿಲ್ಲ. ಮಹಿಳೆ ಕಿರುಚಾಡಿದರೂ ಬರಲಿಲ್ಲ. ಬಹುತೇಕ ಶುಶ್ರೂಷಕಿಯರು ಮೊಬೈಲ್‌ನಲ್ಲಿ ಮಾತನಾಡುತ್ತ, ಅದರಲ್ಲೇ ತಲ್ಲೀನರಾಗಿದ್ದರು. ವೈದ್ಯರು ಸಹ ರೂಪಾ ಬಳಿ ಬಂದು ತಪಾಸಣೆ ಮಾಡಲಿಲ್ಲ. ಇವರೆಲ್ಲರ ನಿರ್ಲಕ್ಷ್ಯವೇ ಶಿಶು ಸಾವಿಗೆ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದಾರೆ.

ಶಿಶು ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರು, 'ಯಾರದ್ದು ತಪ್ಪು ಎಂಬುದರ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.