ADVERTISEMENT

ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್‌‍ನಿಂದ ಜಾಮೀನು

ಪಿಟಿಐ
Published 11 ಜೂನ್ 2025, 9:40 IST
Last Updated 11 ಜೂನ್ 2025, 9:40 IST
<div class="paragraphs"><p>ಜನಾರ್ದನ ರೆಡ್ಡಿ</p></div>

ಜನಾರ್ದನ ರೆಡ್ಡಿ

   

ಹೈದರಾಬಾದ್: ಓಬಳಾಪುರಂ ಗಣಿ ಕಂಪನಿಯ (ಒಎಂಸಿ) ಮೂಲಕ ಅಕ್ರಮ ಗಣಿಗಾರಿಕೆ ನಡೆಸಿ, ಕಬ್ಬಿಣದ ಅದಿರು ಕಳ್ಳಸಾಗಣೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿರುವ ತೆಲಂಗಾಣ ಹೈಕೋರ್ಟ್‌, ಜಾಮೀನು ಮಂಜೂರು ಮಾಡಿದೆ. 

ರೆಡ್ಡಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ ವಿಧಿಸಿತ್ತು. ಅದನ್ನು ಪ್ರಶ್ನಿಸಿ ರೆಡ್ಡಿ ಮತ್ತು ಇತರ ಅಪರಾಧಿಗಳು ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಕೆ.ಲಕ್ಷ್ಮಣ್‌ ಅವರಿದ್ದ ಹೈಕೋರ್ಟ್‌ ಪೀಠವು, ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿದೆ. ರೆಡ್ಡಿ ಮತ್ತು ಇತರ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನೂ ಪುರಸ್ಕರಿಸಿದೆ.

ADVERTISEMENT

₹10 ಲಕ್ಷ ಮೊತ್ತ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು. ಅರ್ಜಿದಾರರು ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ಬಿಟ್ಟು ಹೋಗುವಂತಿಲ್ಲ. ಪಾಸ್‌ಪೋರ್ಟ್‌ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು. ಜಾಮೀನಿನ ಅವಧಿಯಲ್ಲಿ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುವಂತಿಲ್ಲ ಎಂಬ ಷರತ್ತುಗಳನ್ನು ಹೈಕೋರ್ಟ್‌ ವಿಧಿಸಿದೆ.

‘ಅರ್ಜಿದಾರರು (ರೆಡ್ಡಿ) ಶಿಕ್ಷೆಯ ಅರ್ಧ ಅವಧಿಯನ್ನು ಈಗಾಗಲೇ ಬಂಧನದಲ್ಲಿ ಕಳೆದಿದ್ದಾರೆ. ಈಗ ಶಿಕ್ಷೆಯನ್ನು ಅಮಾನತುಗೊಳಿಸದೇ ಇದ್ದರೆ ಅವರು ಕರ್ನಾಟಕದಲ್ಲಿ ಪ್ರತಿನಿಧಿಸುತ್ತಿದ್ದ ವಿಧಾನಸಭಾ ಕ್ಷೇತ್ರಕ್ಕೆ (ಗಂಗಾವತಿ) ಉಪ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಆ ರೀತಿ ಆದಲ್ಲಿ ಅರ್ಜಿದಾರರಿಗೆ ಯಾವತ್ತೂ ಸರಿಪಡಿಸಲಾಗದಂತಹ ನಷ್ಟವಾಗುತ್ತದೆ. ಅರ್ಜಿದಾರರಿಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿ, ಜಾಮೀನು ಮಂಜೂರು ಮಾಡಲು ಬಲವಾದ ಕಾರಣಗಳು ಇವೆ’ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.

ಒಎಂಸಿ ಮೂಲಕ ಕರ್ನಾಟಕ– ಆಂಧ್ರಪ್ರದೇಶ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ, ಕಬ್ಬಿಣದ ಅದಿರು ಕಳ್ಳಸಾಗಣೆ ಮಾಡಿ ₹ 800 ಕೋಟಿಗೂ ಹೆಚ್ಚು ನಷ್ಟ ಉಂಟುಮಾಡಿರುವ ಆರೋಪ ಜನಾರ್ದನ ರೆಡ್ಡಿ ಮತ್ತು ಇತರರ ಮೇಲಿದೆ. ಈ ಸಂಬಂಧ ಸಿಬಿಐ 2009ರ ಡಿಸೆಂಬರ್‌ನಲ್ಲಿ ಎಫ್‌ಐಆರ್‌ ದಾಖಲಿಸಿತ್ತು. 2011ರಲ್ಲಿ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಮೇ 6ರಂದು ತೀರ್ಮಾನ ಪ್ರಕಟಿಸಿದ್ದ ಹೈದರಾಬಾದ್‌ನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ, ‘ಜನಾರ್ದನ ರೆಡ್ಡಿ ಮತ್ತು ಇತರ ಮೂವರು ಅಪರಾಧಿಗಳು’ ಎಂದು ಸಾರಿತ್ತು.  ಜನಾರ್ದನ ರೆಡ್ಡಿ, ಅವರ ಬಾವ ಹಾಗೂ ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ (ಆಂಧ್ರಪ್ರದೇಶ) ಅಂದಿನ ನಿರ್ದೇಶಕ ವಿ.ಡಿ. ರಾಜಗೋಪಾಲ್‌, ಜನಾರ್ದನ ರೆಡ್ಡಿ ಅವರ ಆಪ್ತ ಸಹಾಯಕ ಮೆಹಫೂಜ್‌ ಅಲಿ ಖಾನ್‌ಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಅಂದಿನಿಂದಲೂ ನಾಲ್ವರೂ ಬಂಧನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.