ADVERTISEMENT

ನಾಡಗೀತೆಗೆ ನೂರರ ಸಂಭ್ರಮ: ಸಾವಿರ ಕಂಠಗಳಲ್ಲಿ 'ಜಯಭಾರತ'

ನಾಡಗೀತೆ ರಚನೆಯಾಗಿ ನೂರು ವರ್ಷ * ಮೈಸೂರು ವಿಶ್ವವಿದ್ಯಾಲಯ ಆವರಣದಲ್ಲಿ ಕುವೆಂಪು ಸ್ಮರಣೆ

ಶಿವಪ್ರಸಾದ್ ರೈ
Published 24 ಸೆಪ್ಟೆಂಬರ್ 2025, 0:30 IST
Last Updated 24 ಸೆಪ್ಟೆಂಬರ್ 2025, 0:30 IST
ಮೈಸೂರು ದಸರಾ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಆಯೋಜಿಸಿದ್ದ  ‘ನಾಡಗೀತೆಗೆ ನೂರರ ಸಂಭ್ರಮ, ಸಾವಿರ ಸ್ವರಗಳ ಸಂಗಮ’ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು    –ಚಿತ್ರ: ಅನೂಪ್ ರಾಘ. ಟಿ
ಮೈಸೂರು ದಸರಾ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಆಯೋಜಿಸಿದ್ದ  ‘ನಾಡಗೀತೆಗೆ ನೂರರ ಸಂಭ್ರಮ, ಸಾವಿರ ಸ್ವರಗಳ ಸಂಗಮ’ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು    –ಚಿತ್ರ: ಅನೂಪ್ ರಾಘ. ಟಿ   

ಮೈಸೂರು: ತಂಗಾಳಿ, ಸೂರ್ಯನ ಹೊಂಬಣ್ಣದ ಕಿರಣಗಳ ಮೆರುಗಿನ ನಡುವೆ ಸಾವಿರ ಕಂಠಗಳಿಂದ ಕುವೆಂಪು ಅವರ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಯು ಇಲ್ಲಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಮಂಗಳವಾರ ಮಾರ್ದನಿಸಿತು.

ಅದು, ನಾಡಗೀತೆ ರಚನೆಯಾಗಿ ನೂರು ವರ್ಷ ತುಂಬಿದ ಸಂಭ್ರಮದ ಸಲುವಾಗಿಯೆ ದಸರಾ ಕವಿಗೋಷ್ಠಿ ಉಪ ಸಮಿತಿಯು ಕವಿಗೋಷ್ಠಿ ಉದ್ಘಾಟನೆಗೂ ಮುನ್ನ ಆಯೋಜಿಸಿದ್ದ ‘ನಾಡಗೀತೆಗೆ ನೂರರ ಸಂಭ್ರಮ, ಸಾವಿರ ಸ್ವರಗಳ ಸಂಗಮ’ ಕಾರ್ಯಕ್ರಮ.

ಮಕ್ಕಳು, ವಿದ್ಯಾರ್ಥಿಗಳು, ಯುವಜನರು, ಹಿರಿಯ ನಾಗರಿಕರು ಧ್ವನಿಯಾಗಿ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾದರು. 'ಕುವೆಂಪು' ಹೆಸರಿನಡಿ ನಡೆದ ಕಾರ್ಯಕ್ರಮವು 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿತು.

ADVERTISEMENT

ಕುವೆಂಪು ಕುರಿತ ಆಪ್ತ ಭಾವ, ನಾಡಗೀತೆಯ ಮೇಲಿನ ಗೌರವ, ಕನ್ನಡಿಗರೆಂಬ ಹೆಮ್ಮೆ ಎಲ್ಲರ ಮೊಗದಲ್ಲಿ ನಳನಳಿಸಿತು. ಕುವೆಂಪು ಅವರೇ ರೂಪ ನೀಡಿದ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸಾವಿರಾರು ಮಂದಿ ನಾಡಗೀತೆ ಹಾಡಿ ಸಂಭ್ರಮಿಸಿದ ಅನನ್ಯ ಸನ್ನಿವೇಶವು ಇತಿಹಾಸದ ಪುಟದಲ್ಲಿ ಸೇರಿತು.

ಕುವೆಂಪು ಅವರು 1924-25ರಲ್ಲಿ ‘ಕನ್ನಡ ರಾಷ್ಟ್ರಗೀತೆ’ ಎಂದು ನಾಡಗೀತೆಯನ್ನು ಬರೆದಿದ್ದರು. ನೂರನೇ ವರ್ಷದ ಸಂಭ್ರಮದಲ್ಲಿ ಭಾಗಿಯಾಗಲು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜು ವಿದ್ಯಾರ್ಥಿಗಳು ತಂಡೋಪತಂಡವಾಗಿ ವೇದಿಕೆಯತ್ತ ಬಂದರು. ಕೆಂಪು, ಹಳದಿ ಬಣ್ಣದ ಉಡುಗೆ ತೊಟ್ಟ ಯುವಕ, ಯುವತಿಯರು ಕನ್ನಡದ‌ ಜಯಘೋಷ ಹಾಕಿದರು.

ಕುವೆಂಪು ರಚಿಸಿದ 'ಎಂತಾದರು ಇರು, ಏನಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು', 'ಓ ನನ್ನ ಚೇತನ ಆಗು ನೀ ಅನಿಕೇತನ' ಹಾಡುಗಳಿಗೆ ಮೊದಲು ದೇವಾನಂದ ವರಪ್ರಸಾದ್ ಧ್ವನಿಗೂಡಿಸಿದರು. ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಕೂಗು ಮುಗಿಲು ಮುಟ್ಟಿತ್ತು.

ರಾಜ್ಯ ಸುಗಮ ಸಂಗೀತ ಪರಿಷತ್ತಿನ ಸದಸ್ಯರು, ನಗರದ ಜಾನಪದ ಗಾಯಕರು, ಹಾಡುಗಾರರ ಸಹಿತ ಸಾವಿರಾರು ಗಾಯಕರು ಸುಶ್ರಾವ್ಯವಾಗಿ ನಾಡಗೀತೆ ಹಾಡಿದರು. ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಸಾಲು ನೆರೆದವರಲ್ಲಿ ರೋಮಾಂಚನ ಮೂಡಿಸಿತು.

‘ಬೌದ್ಧರುದ್ಯಾನ ಸೇರಿಸಿ’

‘ನಾಡಗೀತೆಯಲ್ಲಿ ಇದ್ದ ‘ಬೌದ್ಧರುದ್ಯಾನ’ ಎಂಬ ಪದವು 70ರ ದಶಕದಲ್ಲಿ ತಪ್ಪಿಹೋಗಿದ್ದು ಅದನ್ನು ರಾಜ್ಯ ಸರ್ಕಾರ ಸೇರಿಸಬೇಕು’ ಎಂದು ಲೇಖಕ ಅರವಿಂದ ಮಾಲಗತ್ತಿ ಕೋರಿದರು.  ‘ಕುವೆಂಪು ಅವರು ಜೈನರುದ್ಯಾನ ಎಂಬುದನ್ನು ಬಳಸುವ ಮುನ್ನ ಬೌದ್ಧರುದ್ಯಾನ ಎಂದು ಬರೆದಿದ್ದರು. ಅದನ್ನು ಯಾವ ಕಾರಣಕ್ಕಾಗಿ ಯಾರು ತೆಗೆದು ಹಾಕಿದರೋ ಕಾಣೆ. ಅದನ್ನು ಜೋಡಿಸುವುದರಿಂದ ನಾಡಿಗೂ ಗೌರವವಾಗುತ್ತದೆ. ಹಾಡುವುದಕ್ಕೂ ಯಾವುದೇ ತೊಂದರೆ ಆಗದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.