ADVERTISEMENT

ಚನ್ನಪಟ್ಟಣದಲ್ಲೂ ಸ್ಪರ್ಧಿಸುತ್ತಾರ ಡಿಕೆಶಿ? ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 5:32 IST
Last Updated 26 ಮಾರ್ಚ್ 2023, 5:32 IST
ಚನ್ನಪಟ್ಟಣದಿಂದ ಡಿ.ಕೆ. ಶಿವಕುಮಾರ್ ಸ್ಪರ್ಧೆ ಕುರಿತು ಕಾಂಗ್ರೆಸ್ ಕಾರ್ಯಕರ್ತರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಬರಹ
ಚನ್ನಪಟ್ಟಣದಿಂದ ಡಿ.ಕೆ. ಶಿವಕುಮಾರ್ ಸ್ಪರ್ಧೆ ಕುರಿತು ಕಾಂಗ್ರೆಸ್ ಕಾರ್ಯಕರ್ತರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಬರಹ   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರದ ಜೊತೆಗೆ ಪಕ್ಕದ ಚನ್ನಪಟ್ಟಣ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುತ್ತಾರ?

ಹೀಗೊಂದು ಬಿಸಿ ಸುದ್ದಿ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಚನ್ನಪಟ್ಟಣದ ಕಾಂಗ್ರೆಸ್‌ನ ಕಾರ್ಯಕರ್ತರ ಹೆಸರುಗಳಲ್ಲಿ ಇರುವ ಫೇಸುಬುಕ್‌ ಪುಟಗಳಲ್ಲಿ ಹೀಗೆಂದು ಕಾರ್ಯಕರ್ತರು ಬರೆದುಕೊಂಡಿದ್ದು ಕೆಪಿಸಿಸಿ ಅಧ್ಯಕ್ಷರನ್ನು ಕ್ಷೇತ್ರಕ್ಕೆ ಸ್ವಾಗತಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಯಾರೂ ಈ ಸುದ್ದಿಯನ್ನು ಖಾತ್ರಿಪಡಿಸಿಲ್ಲ.

ಎಚ್‌.ಡಿ. ಕುಮಾರಸ್ವಾಮಿ– ಸಿ.ಪಿ. ಯೋಗೇಶ್ವರ್‌ ನಡುವಿನ ಗದ್ದಲದಿಂದ ಚನ್ನಪಟ್ಟಣ ಕ್ಷೇತ್ರ ಈಗಾಗಲೇ ರಾಜ್ಯದ ಗಮನ ಸೆಳೆಯುತ್ತಿದೆ. ಇನ್ನೂ ಇಲ್ಲಿ ಡಿಕೆಶಿ ಸ್ಪರ್ಧೆ ಮಾಡಿದರಂತೂ ಚುನಾವಣಾ ಕಣ ಭಾರಿ ರಂಗೇರಲಿದೆ. ಈ ಹಿಂದೆ ಇದೇ ಕ್ಷೇತ್ರದಿಂದ ನಟಿ ರಮ್ಯಾ ಹೆಸರು ಸಹ ಕೇಳಿಬಂದಿತ್ತು.

ADVERTISEMENT

**

ಚನ್ನಪಟ್ಟಣ: ಘೋಷಣೆಯಾಗದ ಕಾಂಗ್ರೆಸ್‌ ಟಿಕೆಟ್‌
ರಾಮನಗರ: ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ‌ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಚನ್ನಪಟ್ಟಣಕ್ಕೆ ಮಾತ್ರ ಅಭ್ಯರ್ಥಿಯನ್ನು ಹೆಸರಿಸದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ನಿರೀಕ್ಷೆಯಂತೆಯೇ ರಾಮನಗರ ಕ್ಷೇತ್ರದಿಂದ ಇಕ್ಬಾಲ್ ಹುಸೇನ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಇಲ್ಲಿ ಡಿ.ಕೆ.‌ ಸುರೇಶ್ ಹೆಸರನ್ನು ಈಚೆಗೆ ತೇಲಿಬಿಡಲಾಗಿತ್ತು. ರಾಜ್ಯದಲ್ಲಿನ ಏಕೈಕ ಕಾಂಗ್ರೆಸ್ ಸಂಸದ ಅವರಾಗಿದ್ದು, ತಮಗೆ ವಿಧಾನಸಭೆಗೆ ಸ್ಪರ್ಧಿಸುವ ಆಸಕ್ತಿ ಇಲ್ಲ ಎಂದು ಸ್ವತಃ ಸುರೇಶ್‌ ಹೇಳಿದ್ದರು. ಹೀಗಾಗಿ ಇಕ್ಬಾಲ್‌ ಅವರಿಗೆ ಪಕ್ಷ ಮನ್ನಣೆ ನೀಡಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಇಕ್ಬಾಲ್‌ 2018ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 22 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸೋತರೂ ಧೃತಿಗೆಡದೇ ನಿರಂತರವಾಗಿ ಕ್ಷೇತ್ರದ ಜನರ ಜೊತೆ ಸಂಪರ್ಕ ಹೊಂದಿದ್ದಾರೆ.

ಕನಕಪುರ ದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಣಕ್ಕೆ ಇಳಿಯಲಿದ್ದಾರೆ. ಸತತ ಏಳು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರನಾಗಿರುವ ಡಿಕೆಶಿಗೆ ಈ ಬಾರಿಯೂ ಕನಕಪುರದ ಅಖಾಡದಲ್ಲಿ ಪ್ರಬಲ ಎದುರಾಳಿ ಸಿಕ್ಕಿಲ್ಲ. ಪ್ರತಿ ಪಕ್ಷಗಳಿಗೆ ಇನ್ನೂ ಅಭ್ಯರ್ಥಿಯನ್ನು ಹುಡುಕಲು ಆಗಿಲ್ಲ.

ಮಾಗಡಿಯಲ್ಲಿ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಸ್ಪರ್ಧೆ ಖಚಿತವಾಗಿದೆ. 2018ರ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದ ಬಾಲಕೃಷ್ಣ ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎ. ಮಂಜುನಾಥ್‌ ಎದುರು ಭಾರಿ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿಯೂ ಮಾಗಡಿಯಲ್ಲಿ ಈ ಇಬ್ಬರು ಎದುರಾಳಿ ಆಗಲಿದ್ದಾರೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಪ್ರಸನ್ನ ಗೌಡ ಟಿಕೆಟ್ ಆಕಾಂಕ್ಷಿ ಆಗಿದ್ದರು. ಜೆಡಿಎಸ್ ನಿಂದ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಹೆಸರು ಚಾಲ್ತಿಯಲ್ಲಿದೆ. ಈ‌ ನಡುವೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಗುಟ್ಟು ಬಿಟ್ಟುಕೊಡದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

ಚನ್ನಪಟ್ಟಣದಿಂದ ಟಿಕೆಟ್ ಆಕಾಂಕ್ಷಿಗಳಾಗಿ ಒಟ್ಟು 8 ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಪ್ರಸನ್ನ ಗೌಡ ಅವರ ಹೆಸರನ್ನು ಅಂತಿಮಗೊಳಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಕೆಪಿಸಿಸಿಗೆ ಶಿಫಾರಸು ಮಾಡಿತ್ತು. ಈಚೆಗೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ಅವರಿದ್ದ ಕಾರ್ಯಕ್ರಮದಲ್ಲೂ ಪ್ರಸನ್ನ ಕೈ ಬೀಸಿದ್ದರು. ಹೀಗಿದ್ದೂ ಅವರ ಹೆಸರು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ. ಕೆಪಿಸಿಸಿ ಮತ್ಯಾರಿಗೆ ಟಿಕೆಟ್ ನೀಡಲು ಯೋಜಿಸುತ್ತಿದೆಯಾ? ಯಾರಾದರೂ ದೊಡ್ಡ ನಾಯಕರು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಬಹುದ ಎನ್ನುವ ಕುತೂಹಲ ಕಾಂಗ್ರೆಸ್ ಕಾರ್ಯಕರ್ತರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.