
ಬೆಳಗಾವಿ: ‘ಬೆಂಗಳೂರಿನಲ್ಲಿ ನಡೆದ ಅಧಿವೇಶನಗಳಲ್ಲಿ ಸಚಿವರು ಮತ್ತು ಶಾಸಕರ ಊಟ, ಉಪಾಹಾರಕ್ಕಾಗಿ ಸರ್ಕಾರದಿಂದ ವ್ಯಯಿಸಿದ ಹಣವನ್ನು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರಿಂದ ಮರುಪಾವತಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟ ಮಾಡಲಾಗುವುದು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎಚ್ಚರಿಕೆ ಕೊಟ್ಟರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2024ರ ಫೆಬ್ರುವರಿ, ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದ ಅಧಿವೇಶನಗಳಲ್ಲಿ ಸಚಿವರು, ಶಾಸಕರ ಊಟ, ಉಪಾಹಾರ ಮತ್ತು ಕಿರುನಿದ್ರೆಯ ಕುರ್ಚಿಗಾಗಿ ಸರ್ಕಾರದಿಂದ ₹35.33 ಲಕ್ಷ ಪಾವತಿಸಲಾಗಿದೆ. 2025ರ ಮಾರ್ಚ್‌ನಲ್ಲಿ ನಡೆದ ಅಧಿವೇಶನದಲ್ಲೂ ಸಚಿವರು, ಶಾಸಕರ ಊಟ, ಉಪಾಹಾರಕ್ಕಾಗಿ ಹಣ ವ್ಯಯಿಸಲಾಗಿದೆ. ಹಾಗಾಗಿ ಖಾದರ್ ಅವರಿಂದ ಈ ಹಣ ವಸೂಲಿ ಮಾಡುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕಾನೂನು ಮತ್ತು ಸಂಸದೀಯ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದರು.
‘ಬೆಂಗಳೂರಿನಲ್ಲಿ ನಡೆಯುವ ಅಧಿವೇಶನಗಳ ಕಲಾಪದಲ್ಲಿ ಭಾಗವಹಿಸುವ ಸದಸ್ಯರಿಗೆ ಸರ್ಕಾರದಿಂದ ಉಚಿತವಾಗಿ ಊಟ, ಉಪಾಹಾರ ನೀಡಲು ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಲಿಖಿತವಾಗಿ ಉತ್ತರ ಕೊಟ್ಟಿದ್ದಾರೆ. ಹೀಗಿದ್ದರೂ ಈ ಉದ್ದೇಶಕ್ಕಾಗಿ ಹಣ ವ್ಯಯಿಸಿದ್ದು ಸರಿಯಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.