ಬೆಂಗಳೂರು: ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿ ಪ್ರವಾಸಿಗರ ಮೇಲೆ ಹಲ್ಲೆ ಮತ್ತು ಅತ್ಯಾಚಾರ ಎಸಗಿದ ಪ್ರಕರಣದ ಬೆನ್ನಲ್ಲೇ ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಪ್ರವಾಸಿಗರ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲು ಸರ್ಕಾರ ಮುಂದಾಗಿದೆ.
ಗೃಹ ಇಲಾಖೆಯು ಈ ಸಂಬಂಧ ಕೆಲವು ನಿರ್ದೇಶನಗಳನ್ನು ಹೊರಡಿಸಿದೆ. ಅವುಗಳನ್ನು ಉಲ್ಲಂಘಿಸಿದರೆ ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರನ್ನೇ ಹೊಣೆ ಮಾಡಲಾಗುವುದು. ಪ್ರವಾಸಿಗರಿಗೆ ಅಪಾಯವಾದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಸಂಬಂಧ ಪೊಲೀಸ್ ಮಹಾ ನಿರ್ದೇಶಕ, ಎಲ್ಲ ಜಿಲ್ಲಾಧಿಕಾರಿಗಳು, ಎಲ್ಲ ಜಿಲ್ಲಾ ಎಸ್‌ಪಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿಗೆ ಗೃಹ ಇಲಾಖೆ ನಿರ್ದೇಶನ ನೀಡಿದೆ.
‘ಇದರಲ್ಲಿ ಉಲ್ಲೇಖಿಸಿರುವ ನಿರ್ದೇಶನಗಳ ಪಾಲನೆ ಬಗ್ಗೆ ಎಲ್ಲ ರೆಸಾರ್ಟ್ ಮತ್ತು ಹೋಂಸ್ಟೇಗಳ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕು. ಅವರ ಪ್ರವಾಸಿ/ವೀಕ್ಷಣಾ ಕಾರ್ಯಕ್ರಮಗಳನ್ನು ಪರಿಶೀಲಿಸಿ, ಅವುಗಳಲ್ಲಿ ಅಪಾಯದ ಸಾಧ್ಯತೆಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಸೂಚಿಸಿದೆ.
‘ತಕ್ಷಣದಿಂದಲೇ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿ, ಒಂದು ವಾರದಲ್ಲಿ ಪೂರ್ಣಗೊಳಿಸಬೇಕು. ಇದೇ 18ರ ಒಳಗೆ ವರದಿ ನೀಡಬೇಕು’ ಎಂದು ಸೂಚಿಸಿದೆ.
ನಿರ್ದೇಶನಗಳು
* ವಿದೇಶಿ ಪ್ರವಾಸಿಗರೂ ಒಳಗೊಂಡು ಎಲ್ಲರ ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು
* ರೆಸಾರ್ಟ್ ಅಥವಾ ಹೋಂಸ್ಟೇ ಆವರಣದ ಹೊರವಲಯ ಮತ್ತು ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುನ್ನ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅನುಮತಿ ಪಡೆದುಕೊಳ್ಳಬೇಕು
* ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿ ಪಡೆಯದೆ ನಿರ್ಜನ ಪ್ರದೇಶ/ಹೊರವಲಯ/ಅರಣ್ಯ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯಬಾರದು
* ಅನುಮತಿ ಪಡೆಯದೇ ಕರೆದೊಯ್ದ ಸಂದರ್ಭದಲ್ಲಿ ಕಾಡುಪ್ರಾಣಿಗಳಿಂದ ಅಥವಾ ದುಷ್ಕರ್ಮಿಗಳಿಂದ ಅಪಾಯ ಎದುರಾದಲ್ಲಿ ಮಾಲೀಕರೇ ಜವಾಬ್ದಾರರು. ಇದು ಶಿಕ್ಷಾರ್ಹ ಅಪರಾಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.