ADVERTISEMENT

ನಾಯಕತ್ವ, ವಿಸ್ತರಣೆ: ‘ಹೈ’ ಹಂತದಲ್ಲಿ ಚರ್ಚೆ

ಹೈಕಮಾಂಡ್‌ ತೀರ್ಮಾನಕ್ಕೆ ಎಲ್ಲರೂ ಬದ್ಧ –ಸಚಿವ ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
ಬೈರತಿ ಸುರೇಶ
ಬೈರತಿ ಸುರೇಶ   

ಕೋಲಾರ: ‘ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಿ ಎಂದು ಸಿ.ಎಂ., ಡಿಸಿಎಂ ಮತ್ತು ಪಕ್ಷದ ನಾಯಕರು ಸೂಚಿಸಿದ್ದಾರೆ. ನಾವೆಲ್ಲ ಬದ್ಧರಾಗಿದ್ದೇವೆ’ ಎಂದು ತಿಳಿಸಿದರು.

‘ಸಿ.ಎಂ ಆಗಬೇಕೆಂದು ದಲಿತ ಸಮುದಾಯದವರು ಕೇಳುವುದರಲ್ಲಿ ತಪ್ಪೇನಿಲ್ಲ. ಕೆ.ಎಚ್.ಮುನಿಯಪ್ಪ ಅವರಿಗೆ ಸಿ.ಎಂ ಆಗುವ ಅರ್ಹತೆ ಇದೆ. ಸದ್ಯಕ್ಕೆ ಆ ಸ್ಥಾನ ಖಾಲಿ ಇಲ್ಲ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಿ ಎಂದೂ ಯಾರೂ ಕೇಳುತ್ತಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಬಿಜೆಪಿಯಲ್ಲೇ ನವೆಂಬರ್ ಕ್ರಾಂತಿ’: ‘ನವೆಂಬರ್‌ ಕ್ರಾಂತಿ ಕಾಂಗ್ರೆಸ್ಸಿನಲ್ಲಿ ಅಲ್ಲ; ಬಿಜೆಪಿಯಲ್ಲಿ ಆಗಲಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ಮತ್ತು ಆರ್‌. ಅಶೋಕ ಕಿತ್ತಾಡುತ್ತಿದ್ದು, ಆ ಪಕ್ಷದಲ್ಲಿ ಕ್ರಾಂತಿ ಸಾಧ್ಯತೆ ಇದೆ ಎಂದು  ಬೈರತಿ ಸುರೇಶ ಹೇಳಿದರು.

‘ಸಚಿವ ಸ್ಥಾನ ಸಿಗುವ ವಿಶ್ವಾಸ’

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಈ ಸಂಬಂಧ ಪಕ್ಷದ ನಾಯಕರಿಗೆ ಕೋರಿದ್ದೇನೆ’ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಬುಧವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅವರು, ಇವರು ಹೇಳಿದರೆ ಮಾತ್ರ ಸಚಿವ ಸ್ಥಾನ ಸಿಗಲ್ಲ. ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆಯಿದೆ’ ಎಂದರು. 

ಖರ್ಗೆ ಸಿ.ಎಂ ಆಗ್ತಾರೆ: ಯತ್ನಾಳ

ಬೆಳಗಾವಿ: ‘ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ. ಸಿ.ಎಂ ಹುದ್ದೆಗಾಗಿ ಲಾಬಿ ಮಾಡುವವರಿಗೆ ಅದು ಸಿಗಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವರು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ‘ಮುಖ್ಯಮಂತ್ರಿ ಹುದ್ದೆಗೆ ಲಾಬಿ ನಡೆದಿದೆ. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಇಲ್ಲ. ಆದರೆ ಸಾರಥ್ಯ ‘ಡಾರ್ಕ್‌ಹಾರ್ಸ್‌’ಗೆ ಸಿಗಲಿದೆ’ ಎಂದು ಸುದ್ದಿಗಾರರಿಗೆ ಇಲ್ಲಿ ಹೇಳಿದರು. ‘ಖರ್ಗೆ ಹೆಸರು ಬಂದಾಗ ಡಿ.ಕೆ.ಶಿವಕುಮಾರ್ ಸತೀಶ ಜಾರಕಿಹೊಳಿ ಮತ್ತು ಇತರರು ಸ್ಪರ್ಧೆಯಿಂದ ಹೊರಗುಳಿಯುತ್ತಾರೆ’ ಎಂದು ಹೇಳಿದರು.

ತಾರ್ಕಿಕ ಅಂತ್ಯಕ್ಕೆ ಕುರ್ಚಿ ಕಾಳಗ–ವಿಜಯೇಂದ್ರ

ಚಿತ್ರದುರ್ಗ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಯ ಕಾಳಗ ನವೆಂಬರ್‌ ಅಂತ್ಯಕ್ಕೆ ತಾರ್ಕಿಕ ಅಂತ್ಯ ಕಾಣುವ  ಮುನ್ಸೂಚನೆ ಸಿಕ್ಕಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ‘ಸಿದ್ದರಾಮಯ್ಯ ಮೊದಲು ಐದು ವರ್ಷ ನಾನೇ ಸಿ.ಎಂ ಎಂದರು. ಈಗ ಹೈಕಮಾಂಡ್‌ ಸೂಚಿಸಿದರೆ ಐದು ವರ್ಷ ಎನ್ನುತ್ತಿದ್ದಾರೆ. ಯಾವ ಕ್ಷಣದಲ್ಲಿ ಏನೂ ಬೇಕಾದರೂ ಆಗುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಬುಧವಾರ ಅಭಿಪ್ರಾಯಪಟ್ಟರು. ‘ಕಾಂಗ್ರೆಸ್‌ನಲ್ಲಿನ ಆಂತರಿಕ ಕಚ್ಚಾಟ ಬಣ ಕದನದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ರೈತರ ಬಗ್ಗೆ ಕಿಂಚಿತ್‌ ಕಾಳಜಿ ಇಲ್ಲವಾಗಿದೆ’ ಎಂದು ಟೀಕಿಸಿದರು.

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾದರೆ ಸಂತೋಷ. ಈಗ ಇರುವವರೇ ಕೆಲಸ ಮಾಡುತ್ತಿಲ್ಲ. ಯಾರೇ ಬಂದರೂ ಕರ್ನಾಟಕದ ಹಣೆಬರಹ ಕಾಂಗ್ರೆಸ್‌ ಕೈಯಲ್ಲಿ ಬದಲಾಗಲು ಸಾಧ್ಯವಿಲ್ಲ.
-ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.