ADVERTISEMENT

ಕುತೂಹಲ ಮೂಡಿಸಿದ ಮಲ್ಲಿಕಾರ್ಜುನ ಖರ್ಗೆ-ಪರಮೇಶ್ವರ ಭೇಟಿ:ಪರಿಶಿಷ್ಟರ ಸಮಾವೇಶ ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 2:57 IST
Last Updated 10 ಫೆಬ್ರುವರಿ 2025, 2:57 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ</p></div>

ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ

   

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ ಸುಮಾರು 45 ನಿಮಿಷ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸದಾಶಿವನಗರದಲ್ಲಿರುವ ಖರ್ಗೆಯವರ ನಿವಾಸದಲ್ಲಿ ಉಭಯ ನಾಯಕರು ರಾಜ್ಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ADVERTISEMENT

ಪರಮೇಶ್ವರ ಅವರು ತಮ್ಮ‌ ನಿವಾಸದಲ್ಲಿ ಸಮುದಾಯದ ಸಚಿವರು, ಶಾಸಕರು ಮತ್ತು ಮುಖಂಡರಿಗೆ ಇತ್ತೀಚೆಗೆ ಆಯೋಜಿಸಲು ಉದ್ದೇಶಿಸಿದ್ದ ಔತಣಕೂಟಕ್ಕೆ ಕಾಂಗ್ರೆಸ್ ಹೈಕಮಾಂಡ್ ತಡೆ ಒಡ್ಡಿತ್ತು. ಔತಣಕೂಟದ ನೆಪದಲ್ಲಿ ಸಭೆ ಸೇರುವ ಸಚಿವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ವರಿಷ್ಠರಿಗೆ ದೂರು ನೀಡಿದ್ದರು. ಆ ನಂತರ ಖರ್ಗೆ- ಪರಮೇಶ್ವರ ಭೇಟಿ ನಡೆದಿಲ್ಲ.

ರಾಜ್ಯದಾದ್ಯಂತ ಪರಿಶಿಷ್ಟ ಜಾತಿ, ಪಂಗಡದ ಸಮಾವೇಶವನ್ನು ಆಯೋಜಿಸಲು ಸಚಿವರಾದ ಕೆ.ಎನ್. ರಾಜಣ್ಣ, ಸತೀಶ ಜಾರಕಿಹೊಳಿ, ಜಿ. ಪರಮೇಶ್ವರ ಯೋಜನೆ ಹಾಕಿಕೊಂಡಿದ್ದಾರೆ. ಈ ಬಗ್ಗೆಯೂ ಪರಮೇಶ್ವರ ಅವರು ಖರ್ಗೆ ಜೊತೆ ಮಾತುಕತೆ ನಡೆಸಿದರು ಎಂದೂ ಮೂಲಗಳು ತಿಳಿಸಿವೆ. ಸಚಿವ ಪ್ರಿಯಾಂಕ್‌ ಖರ್ಗೆ ಅವರ ಜತೆ ಒಂದೇ ಕಾರಿನಲ್ಲಿ ಖರ್ಗೆಯವರ ನಿವಾಸಕ್ಕೆ ಪರಮೇಶ್ವರ ಬಂದರು.

ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಹರಿಹರಕ್ಕೆ ತೆರಳಿದ ಪರಮೇಶ್ವರ ಅವರು ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು‌. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಸಂಸದ ತುಕಾರಾಂ ಮತ್ತು ಕೆಲವು ಶಾಸಕರ ಜೊತೆಗೂ ಪರಮೇಶ್ವರ ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.