ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮಧ್ಯೆ ನಡೆಯುತ್ತಿರುವ ಶೀತಲ ಸಮರ, ಈಗ ಪತ್ರ ಸಮರವಾಗಿ ಮಾರ್ಪಟ್ಟಿದೆ.
ವಿಧಾನಮಂಡಲದ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ತಮ್ಮನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗುತ್ತಿದೆ ಎಂದು ಹೊರಟ್ಟಿ ಅವರು ಯು.ಟಿ.ಖಾದರ್ ಅವರಿಗೆ ಪತ್ರವೊಂದನ್ನು ಬರೆದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಯು.ಟಿ.ಖಾದರ್ ಪತ್ರದ ಮೂಲಕವೇ ಹೊರಟ್ಟಿಯವರ ಎಲ್ಲ ಆರೋಪಗಳಿಗೂ ಉತ್ತರ ನೀಡಿದ್ದಾರೆ.
ಬಸವರಾಜ ಹೊರಟ್ಟಿ ಹೇಳಿದ್ದು
ವಿಧಾನಮಂಡಲದ ಅಧಿಕೃತ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸುವ ವೇಳೆ ವಿಧಾನಪರಿಷತ್ತಿನ ಸಭಾಪತಿಯಾದ ನನ್ನನ್ನು ಸೌಜನ್ಯಕ್ಕಾಗಿಯಾದರೂ ಸಂಪರ್ಕಿಸದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.
ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಆಯೋಜನೆ ವಿಧಾನಸೌಧ ಕಟ್ಟಡಕ್ಕೆ ಲೇಸರ್ ದೀಪ ಅಳವಡಿಕೆ ಯೋಜನೆ 11 ನೇ ಸಿಪಿಎ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್‌ನ ಭಾರತ ವಲಯದ ಸಮ್ಮೇಳನ ಆಯೋಜನೆ ಹೀಗೆ ಹಲವು ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸುವಾಗ ಸೌಜನ್ಯಕ್ಕಾದರೂ ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಕೇಳಬಹುದಿತ್ತು. ಆ ಕಾರ್ಯಕ್ರಮಗಳ ಸಂಬಂಧ ಏಕಪಕ್ಷೀಯವಾಗಿ ಪತ್ರಿಕಾಗೋಷ್ಠಿ ನಡೆಸಿದ್ದೀರಿ.
‘ಬಾರ್ಬಡೊಸ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 21 ದಿನಗಳ ಅಧಿಕೃತ ಪ್ರವಾಸ ಪಟ್ಟಿಯನ್ನು ನನ್ನ ಸಲಹೆ ಪಡೆಯದೇ ತಾವು ತಯಾರಿಸಿದ್ದು ಅನ್ಯ ಮೂಲಗಳಿಂದ ತಿಳಿದು ಬಂತು. ಈ ಕಾರ್ಯಕ್ರಮದಲ್ಲಿ ಅಧ್ಯಯನ ಪ್ರವಾಸ ಯಾವ ದೇಶಕ್ಕೆ ಹೋಗಬೇಕು ಎಂದು ನಿರ್ಧರಿಸುವ ಹಕ್ಕು ನನಗೆ ಇಲ್ಲವೆಂದು ಭಾಸವಾಗುತ್ತಿದೆ. ನಿಮಗೆ ಅನುಕೂಲವಾಗುವ ರೀತಿ ಕಾರ್ಯಕ್ರಮವನ್ನು ರೂಪಿಸಿ ಒತ್ತಾಯಪೂರ್ವಕವಾಗಿ ನಾನು ಅದರಲ್ಲಿ ಭಾಗವಹಿಸುವಂತೆ ಮಾಡುವ ಸಂದಿಗ್ಧತೆ ಸೃಷ್ಟಿ ಆಯಿತು.
ಯು.ಟಿ. ಖಾದರ್ ಪ್ರತಿಕ್ರಿಯೆ
ಪುಸ್ತಕ ಮೇಳದ ರೂಪುರೇಷೆ ತಮ್ಮ ಗಮನಕ್ಕೆ ತರಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು ಉದ್ಘಾಟಿಸಿದ್ದು ನಮ್ಮಿಬ್ಬರ ಜಂಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಧಾನಸೌಧ ಕಟ್ಟಡಕ್ಕೆ ಲೇಸರ್ ದೀಪ ಅಳವಡಿಸುವ ಬಗ್ಗೆ ನಾನು ಕಾಳಜಿ ವ್ಯಕ್ತಪಡಿಸಿದ್ದೆ. ಈ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದೆ. ಅವರ ಆಸಕ್ತಿಯಿಂದ ಮುಖ್ಯಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯ ನೆರವೇರಿದೆ.
11 ನೇ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಭಾರತ ವಲಯ ಸಮ್ಮೇಳನಕ್ಕೆ ಲೋಕಸಭೆಯಿಂದ ಕೋರಿಕೆ ಬಂದಿದ್ದು ನಾವಿಬ್ಬರೂ ಸೇರಿ ಒಪ್ಪಿಗೆ ನೀಡಿದ್ದೇವೆ. ನಾನೇ ನಿಮ್ಮ ಕೊಠಡಿಗೆ ಬಂದು ಪರಸ್ಪರ ಚರ್ಚಿಸಿದ ನಂತರ ಅಧಿವೇಶನ ನಡೆಸಲು ನಿರ್ಧಾರ ತೆಗೆದುಕೊಂಡೆವು. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿಲ್ಲ ಸುದ್ದಿಗಾರರ ಪ್ರಶ್ನೆಗಳಿಗೆ ಮಾಹಿತಿ ನೀಡಿದ್ದೇನೆ ಅಷ್ಟೇ.
ಬಾರ್ಬಡೋಸ್‌ನಲ್ಲಿ ನಡೆಯುವ 68 ನೇ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಕಾನ್ಫರೆನ್ಸ್‌ಗೆ ವಿಧಾನಸಭಾ ಕಾರ್ಯದರ್ಶಿ ಸಲ್ಲಿಸಿದ ಕಡತದಲ್ಲಿ ತಾವು ಪ್ರತಿನಿಧಿಯಾಗಿ ನಾನು ವೀಕ್ಷಕನಾಗಿ ಭಾಗವಹಿಸಲು ನಾವಿಬ್ಬರೂ ಒಪ್ಪಿಗೆ ನೀಡಿದ್ದೇವೆ. ನನ್ನ ಆಪ್ತ ಕಾರ್ಯದರ್ಶಿಗೆ ಪ್ರವಾಸದ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸಲು ತಿಳಿಸಿದ್ದೆ. ಈ ವಿಚಾರ ತಮಗೂ ಹಾಗೂ ತಮ್ಮ ಇಲಾಖಾ/ ಆಪ್ತ ಕಾರ್ಯದರ್ಶಿಗೆ ಅವರಿಗೆ ವಿವರಿಸಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.