ADVERTISEMENT

Karnataka Rains | ಮುಂದುವರಿದ ಮಳೆ ಆರ್ಭಟ: ಕೆಲವೆಡೆ ಶಾಲೆ, ಕಾಲೇಜಿಗೆ ರಜೆ

* ಹಲವೆಡೆ ರಸ್ತೆ ಸಂಪರ್ಕ ಕಡಿತ * ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 14:05 IST
Last Updated 19 ಆಗಸ್ಟ್ 2025, 14:05 IST
<div class="paragraphs"><p>ಆಲಮಟ್ಟಿ ಜಲಾಶಯದಿಂದ&nbsp;ನೀರನ್ನು ನದಿಗೆ ಬಿಡಲಾಗುತ್ತಿರುವ ದೃಶ್ಯ </p></div>

ಆಲಮಟ್ಟಿ ಜಲಾಶಯದಿಂದ ನೀರನ್ನು ನದಿಗೆ ಬಿಡಲಾಗುತ್ತಿರುವ ದೃಶ್ಯ

   

-ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ

ಬೆಂಗಳೂರು: ಬೆಳಗಾವಿ, ಹಾವೇರಿ, ಉತ್ತರ ಕನ್ನಡ, ಧಾರವಾಡ, ವಿಜಯಪುರ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಂಗಳವಾರವೂ ಭಾರಿ ಮಳೆಯಾಯಿತು. ಬಹುತೇಕ ಕಡೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

ADVERTISEMENT

ಮುಂಜಾಗೃತಾ ಕ್ರಮವಾಗಿ ಬೆಳಗಾವಿ, ಹಾವೇರಿ, ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಬುಧವಾರ (ಆ.20) ಕೂಡ ರಜೆ ಘೋಷಣೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾರ್ಗಲ್ ನ ಲಿಂಗನಮಕ್ಕಿ ಅಣೆಕಟ್ಟೆಯಿಂದ ಶರಾವತಿ ನದಿಗೆ ಮಂಗಳವಾರ 15 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದೆ. ಇದರಿಂದ ಜೋಗ ಜಲಪಾತದ ವೈಭವ ಕಳೆಗಟ್ಟಿದೆ.

ಶಿವಮೊಗ್ಗ: ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯ ಭರ್ತಿಯ ಹಂತ ತಲುಪಿರುವುದರಿಂದ ಮಂಗಳವಾರ ಶರಾವತಿ ನದಿಗೆ 15 ಸಾವಿರ ಕ್ಯುಸೆಕ್ ನೀರು ಹರಿಸಲಾಯಿತು. ಇದಕ್ಕೂ ಮುನ್ನ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಜಲಾಶಯಕ್ಕೆ ಬಾಗಿನ ಸಲ್ಲಿಸಿದ್ದಾರೆ.

61 ವರ್ಷಗಳ ಜಲಾಶಯದ ಇತಿಹಾಸದಲ್ಲಿ ಇಲ್ಲಿಯವರೆಗೆ 23 ಬಾರಿ ಲಿಂಗನಮಕ್ಕಿ ಅಣೆಕಟ್ಟೆ ಭರ್ತಿಯಾಗಿದೆ. ಸತತ ಮೂರು ವರ್ಷ ಭರ್ತಿ ಆದ ದಾಖಲೆಯನ್ನು ಈ ಬಾರಿ ಬರೆದಿದೆ.1819 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1816.20 ಅಡಿ ನೀರಿನ ಸಂಗ್ರಹ ಇದೆ. ಸದ್ಯ ಜಲಾಶಯಕ್ಕೆ 48,398 ಕ್ಯುಸೆಕ್ ಒಳಹರಿವು ಇದೆ.

ಗೋಕಾಕ– ಶಿಂಗಳಾಪುರ ಸೇತುವೆ ಘಟಪ್ರಭಾ ನದಿ ನೀರಿನಲ್ಲಿ ಸಂಪೂರ್ಣ ಮುಳುಗಿದೆ

ಗೋಕಾಕ ವರದಿ: ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರಿದ ಕಾರಣ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಉಕ್ಕಿ ಹರಿಯುತ್ತಿವೆ. ಗೋಗಾಕ ನಗರದ ಹೊರವಲಯದ ಗೋಕಾಕ– ಶಿಂಗಳಾಪುರ ಸೇತುವೆ ಮಂಗಳವಾರ ನಸುಕಿನಲ್ಲಿ ಸಂ‍ಪೂರ್ಣ ನದಿ ನೀರಿನಲ್ಲಿ ಮುಳುಗಡೆಯಾಗಿದೆ.

ಹಂಪಿಯ ಚಕ್ರತೀರ್ಥದಲ್ಲಿ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ

ಹೊಸಪೇಟೆ ವರದಿ: ವಿಜಯನಗರ ಜಿಲ್ಲೆಯಲ್ಲಿ ಮಳೆ ಅಷ್ಟಾಗಿ ಇಲ್ಲದಿದ್ದರೂ ತುಂಗಭದ್ರಾ ಜಲಾಶಯಕ್ಕೆ ಭರ್ಜರಿಯಾಗಿಯೇ ನೀರು ಹರಿದುಬರುತ್ತಿದ್ದು, ಆರು ಕ್ರೆಸ್ಟ್‌ಗೇಟ್‌ಗಳು ನಿಶ್ಚಿಲವಾಗಿರುವುದರಿಂದ ಅಣೆಕಟ್ಟೆಯಲ್ಲಿ ನೀರಿನ ನಿರ್ವಹಣೆಗೆ ತುಂಗಭದ್ರಾ ಮಂಡಳಿ ಈ ಬಾರಿ ಸ್ವಲ್ಪ ಹೆಚ್ಚೇ ಸಾಹಸ ಮಾಡುತ್ತಿದೆ.

ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಗಾರ ಗ್ರಾಮದ ಶಿವಗುರೂಜಿ ಮನೆ ಹತ್ತಿರ ಮಂಗಳವಾರ ಬೆಳಿಗ್ಗೆ ಅಲ್ಪ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ.

ವಜ್ರಳ್ಳಿ ಮೂಲಕ ತಾರಗಾರ- ಬೀಗಾರ ಮತ್ತು ಬಾಗಿನಕಟ್ಟಾ ಗ್ರಾಮವನ್ನು ಸಂಪರ್ಕಿಸುವ ರಸ್ತೆಯ ಕೆಳಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ರಸ್ತೆಯೂ ಕುಸಿಯುವ ಆತಂಕ ಎದುರಾಗಿದೆ.

ಆಲಮಟ್ಟಿ ಜಲಾಶಯದಿಂದ ಮಂಗಳವಾರ ಸಂಜೆ 6ಕ್ಕೆ 2 ಲಕ್ಷ ಕ್ಯೂಸೆಕ್ ಬಿಟ್ಟ ನಂತರ ಜಲಾಶಯದ ಮುಂಭಾಗದ ಯಲಗೂರು ಬಳಿ ಕೃಷ್ಣಾ ನದಿಯ ಹರಿವು ಕಂಡಿದ್ದು ಹೀಗೆ

ಆಲಮಟ್ಟಿ (ವಿಜಯಪುರ ಜಿಲ್ಲೆ): ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಜಾಗ್ರತೆಯ ಕ್ರಮವಾಗಿ ಮಂಗಳವಾರ ಸಂಜೆಯಿಂದ ಆಲಮಟ್ಟಿ ಜಲಾಶಯದ ಹೊರಹರಿವನ್ನು 2 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.

ಬೆಳಿಗ್ಗೆ 1.50 ಲಕ್ಷ ಕ್ಯೂಸೆಕ್ ಇದ್ದ ಹೊರಹರಿವನ್ನು ಬೆಳಿಗ್ಗೆ 10ಕ್ಕೆ 1.75 ಲಕ್ಷ ಕ್ಯೂಸೆಕ್‌ಗೆ ಹಾಗೂ ಸಂಜೆ 6 ಕ್ಕೆ 2 ಲಕ್ಷ ಕ್ಯೂಸೆಕ್ ಗೆ ಹೆಚ್ಚಿಸಲಾಗಿದೆ. ಇದು ಈ ವರ್ಷದ ಗರಿಷ್ಠ ಹೊರಹರಿವು.

ಶಾಲಾ–ಕಾಲೇಜಿಗೆ ರಜೆ

ಹಾವೇರಿ: ಜಿಲ್ಲೆಯಾದ್ಯಂತ ನಿರಂತರವಾಗಿ ಜೋರು ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲ ಶಾಲೆ–ಕಾಲೇಜು, ಅಂಗನವಾಡಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಆ. 20ರಂದು ರಜೆ ಘೋಷಿಸಲಾಗಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ‘ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಕ್ಕಳು ಶಾಲೆಗೆ ಹೋಗಿ ಬರಲು ತೊಂದರೆ ಆಗುತ್ತಿದೆ’ ಎಂದಿದ್ದಾರೆ.

ಧಾರವಾಡ: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆ.20 ರಂದು ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.