ADVERTISEMENT

ರಾಜ್ಯದಾದ್ಯಂತ ಬೇಸಿಗೆ ತೀವ್ರ: ರಾಜ್ಯಕ್ಕೆ ‘ಜಲದಾಹ’ದ ಆತಂಕ

ಕುಡಿಯುವ ನೀರಿನ ಅಭಾವ

ರಾಜೇಶ್ ರೈ ಚಟ್ಲ
Published 2 ಮಾರ್ಚ್ 2026, 19:30 IST
Last Updated 2 ಮಾರ್ಚ್ 2026, 19:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತೀವ್ರತೆ ದಿನೇ ದಿನೇ ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವದ ಭೀತಿ ಎದುರಾಗಿದೆ.

ಸದ್ಯ 36 ತಾಲ್ಲೂಕುಗಳ 102 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಈ ಪೈಕಿ, 23 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ, 79 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ.

ADVERTISEMENT

ತುಮಕೂರು, ರಾಮನಗರ, ಬಳ್ಳಾರಿ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಧಾರವಾಡ ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚು ಕಾಣಿಸಿಕೊಂಡಿದೆ. ತುಮಕೂರಿನಲ್ಲಿ ಅತೀ ಹೆಚ್ಚು 34 ಗ್ರಾಮ ಪಂಚಾಯಿತಿಗಳಲ್ಲಿ ಜಲ ದಾಹ ಎದುರಾಗಿದೆ.

ಮುಂಬರುವ ಬೇಸಿಗೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡಲು, ತುರ್ತು ಕಾಮಗಾರಿಗಳ ಶೀಘ್ರ ಅನುಷ್ಠಾನ, ಸಂಬಂಧಿಸಿದ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಕಾರ್ಯತಂತ್ರ ರೂಪಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂದಾಗಿದೆ.

ಹೊಸದಾಗಿ ಕೊಳವೆ ಬಾವಿ ಕೊರೆದು ಪಂಪ್‌ ಸಹಿತ ಪೈಪ್‌ ಲೈನ್‌ ಅಳವಡಿಕೆ, ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ, ಖಾಸಗಿ ಕೊಳವೆ ಬಾವಿ ಬಾಡಿಗೆಗೆ ಪಡೆದು ನೀರು ಸರಬರಾಜು, ಒಣಗಲಾರಂಭಿಸಿರುವ ಕೊಳವೆ ಬಾವಿಗಳನ್ನು ಮರು ಕೊರೆಯುವುದು ಸೇರಿದಂತೆ ವಿವಿಧ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಇಲಾಖೆ ಉದ್ದೇಶಿಸಿದೆ. ಪ್ರಸ್ತುತ 28 ಜಿಲ್ಲೆಗಳಿಂದ (ಚಿಕ್ಕೋಡಿ ಸೇರಿ) ಒಟ್ಟು 6,321 ಕಾಮಗಾರಿಗಳಿಗೆ ಅಂದಾಜು ₹206.89 ಕೋಟಿ ಅನುದಾನ ಕೋರಿ ಪ್ರಸ್ತಾವಗಳು ಸಲ್ಲಿಕೆ ಆಗಿವೆ. ಚಾಮರಾಜನಗರ, ದಕ್ಷಿಣ ಕನ್ನಡ, ಮೈಸೂರು, ತುಮಕೂರು ಜಿಲ್ಲೆಗಳಿಂದ ತುರ್ತು ಕಾಮಗಾರಿಗಾಗಿ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಬೇಸಿಗೆಯಲ್ಲಿ ಕುಡಿಯುವ ನೀರು ಒದಗಿಸುವ ತುರ್ತು ಕಾಮಗಾರಿಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು ₹272.80 ಕೋಟಿ ಅನುದಾನ ಒದಗಿಸಲಾಗಿದೆ. ಈ ಅವಧಿಯಲ್ಲಿ 11,769 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ, 10,248 ಪೂರ್ಣಗೊಂಡಿದ್ದು, ₹128.09 ಕೋಟಿ ವೆಚ್ಚವಾಗಿದೆ ಎಂದೂ ಮೂಲಗಳು ತಿಳಿಸಿವೆ.

ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಟ್ಯಾಂಕರ್‌ಗಳ ಮೂಲಕ ಹಾಗೂ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಒದಗಿಸಲು ಕ್ರಮವಹಿಸುತ್ತಿರುವ ಕುರಿತ ದಿನನಿತ್ಯದ ಮಾಹಿತಿ, ಮೂರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಹೊಂದಿರುವ ಗ್ರಾಮ ಪಂಚಾಯಿತಿಗಳು, ಗ್ರಾಮಗಳು, ಬರ ಪರಿಸ್ಥಿತಿಯ ಅವಧಿ, ಈ ಅವಧಿಯಲ್ಲಿ ನೀರು ಪೂರೈಕೆ ಮಾಡಲು ಕೈಗೊಂಡ ಕ್ರಮ, ಮುಂಬರುವ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರು ಒದಗಿಸಲು ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಕ್ಷಣ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಿ. ರಂದೀಪ್‌ ಅವರು ಈಗಾಗಲೇ ಸೂಚಿಸಿದ್ದಾರೆ.

ಬರ ಪರಿಸ್ಥಿತಿ ಎದುರಾದರೆ ಏನೇನು ಕ್ರಮ?

  • ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆದ್ಯತೆ

  • ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ತೀರ್ಮಾನ

  • ಅಗತ್ಯವಿದ್ದರೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ

  • ಅನಿವಾರ್ಯವಾದರೆ ಭೂ ವಿಜ್ಞಾನಿಯ ವರದಿ ಆಧರಿಸಿ ಹೊಸ ಕೊಳವೆ ಬಾವಿ ಕೊರೆಯುವುದು

ಶುದ್ಧ ನೀರು: ದುರಸ್ತಿಗೆ ಗರಿಷ್ಠ ₹1.5 ಲಕ್ಷ

ಜ. 23ರಂದು ಹೊರಡಿಸಿದ್ದ ಆದೇಶದಲ್ಲಿ ಪ್ರತಿ ಘಟಕದ ದುರಸ್ತಿಗೆ ₹50 ಸಾವಿರ ಒದಗಿಸಲಾಗಿತ್ತು. ಇದೀಗ, ಪ್ರತಿ ಘಟಕವನ್ನು ಗರಿಷ್ಠ ₹1.50 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸಬೇಕೆಂದು ಸೂಚಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಫೆ. 26ರಂದು ನೀಡಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 19,298 ಶುದ್ಧ ನೀರಿನ ಘಟಕಗಳಿವೆ. ಅವುಗಳಲ್ಲಿ 16,117 ಮಾತ್ರ ಕಾರ್ಯಾಚರಣೆಯಲ್ಲಿವೆ. ಉಳಿದ 3,181 ಘಟಕಗಳು ದುರಸ್ತಿಯಲ್ಲಿವೆ. ಒಟ್ಟು ಘಟಕಗಳ ಪೈಕಿ, 10,590 ಅನ್ನು ಗುತ್ತಿಗೆದಾರರು ನಿರ್ವಹಿಸುತ್ತಿದ್ದು, 8,679 ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಗೊಂಡಿವೆ.

‘ಶುದ್ಧ ನೀರಿನ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬಿಲ್ ಮೊತ್ತ ₹58.14 ಕೋಟಿ ಪಾವತಿಸಲು ಬಾಕಿಯಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.