ADVERTISEMENT

ಮನಸ್ಸಿದ್ದರೆ ಚುನಾವಣೆಗೆ ಸ್ಪರ್ಧಿಸುವಂತೆ ನಿಖಿಲ್‌ಗೆ ಸಮ್ಮತಿಸಿದ್ದೇನೆ: ದೇವೇಗೌಡ 

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 7:26 IST
Last Updated 3 ಮಾರ್ಚ್ 2019, 7:26 IST
   

ಮಂಗಳೂರು: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇತ್ತೀಚೆಗೆ ನಡೆದ ಉಪ‌ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಮ್ಮ ಪಕ್ಷದ ಎಲ್.ಆರ್.ಶಿವರಾಮೇಗೌಡ ಆಯ್ಕೆಯಾಗಿದ್ದರು. ಆದರೆ, ಸ್ಥಳೀಯ ಜನರು ನಿಖಿಲ್ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವರು ಕೂಡ ಆಕಾಂಕ್ಷಿಯಾಗಿದ್ದಾರೆ. ಮನಸ್ಸಿದ್ದರೆ ಸ್ಪರ್ಧಿಸುವಂತೆ ನಾನು ಕೂಡ ಸಮ್ಮತಿ ಸೂಚಿಸಿದ್ದೇನೆ' ಎಂದರು.

ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಟಿಕೆಟ್ ಆಕಾಂಕ್ಷಿಯಾಗಿರುವ ಕುರಿತು ಕೇಳಿದಾಗ, ‘ಆಕಾಂಕ್ಷೆ ಇರುವುದು ಸ್ವಾಭಾವಿಕ. ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳು ಮೊದಲಿನಿಂದಲೂ ಜೆಡಿಎಸ್ ಪಕ್ಷದ ಹಿಡಿತದಲ್ಲೇ ಇವೆ’ ಎಂದರು.

ಪ್ರಜ್ವಲ್ ರೇವಣ್ಣ ಹಲವು ವರ್ಷಗಳಿಂದ ಲೋಕಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಚುನಾವಣೆಗಳಲ್ಲಿ ಜವಾಬ್ದಾರಿ ನಿಭಾಯಿಸಿದ್ದಾರೆ ಎನ್ನುವ‌ ಮೂಲಕ ಪ್ರಜ್ವಲ್ ಸ್ಪರ್ಧೆಯ ಸುಳಿವನ್ನೂ ನೀಡಿದರು.

12 ಕ್ಷೇತ್ರಗಳಿಗೆ ಬೇಡಿಕೆ: ‘ಲೋಕಸಭಾ ಚುನಾವಣೆ ಸ್ಥಾನಗಳ ಹಂಚಿಕೆಯಲ್ಲಿ ಜೆಡಿಎಸ್ ಪಕ್ಷಕ್ಕೆ 12 ಕ್ಷೇತ್ರಗಳನ್ನು ನೀಡುವಂತೆ ಕೇಳಿದ್ದೇನೆ. ಅಷ್ಟನ್ನು ಕೊಡಲೇಬೇಕು ಎಂದು ಹಟ ಹಿಡಿದಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಇದೇ ರೀತಿಯ ಉದಾರತೆ ಇರಲಿ ಎಂಬುದು ನನ್ನ ಭಾವನೆ’ ಎಂದು ದೇವೇಗೌಡ ತಿಳಿಸಿದರು.

ಬಿಜೆಪಿಯ ಬಲ‌ ಕುಗ್ಗಿಸುವುದು‌ ಎರಡೂ ಪಕ್ಷಗಳ ಹೊಂದಾಣಿಕೆಯ ಉದ್ದೇಶ. ಯಾವುದೇ ವಿವಾದಗಳಿಗೆ ಆಸ್ಪದ‌ ಇಲ್ಲದಂತೆ ಸೀಟು ಹಂಚಿಕೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಹತ್ತು ದಿನಗಳಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ ಎಂದರು.

ಸೋಮವಾರ ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಆ ಬಳಿಕ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಸೀಟು ಹಂಚಿಕೆ ಅಂತಿಮಗೊಳ್ಳಲಿದೆ ಎಂದರು.

ಇದನ್ನೂ ಓದಿ...ಸುಮಲತಾಗೆ ಕಾಂಗ್ರೆಸ್‌ ಬೆಂಬಲ ಇಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.