
ವಿಧಾನಸೌಧ
ಬೆಂಗಳೂರು: ಈ ಬಾರಿಯ ನೈರುತ್ಯ ಮುಂಗಾರು ವೇಳೆ ಮಳೆ ಮತ್ತು ಪ್ರವಾಹದಿಂದಾಗಿ ಮೂಲಸೌಕರ್ಯಕ್ಕೆ ಭಾರಿ ಪ್ರಮಾಣದ ಹಾನಿಯಾಗಿದ್ದು, ಅವುಗಳ ಪುನರ್ ನಿರ್ಮಾಣಕ್ಕಾಗಿ ಕೇಂದ್ರದಿಂದ ₹1,545 ಕೋಟಿ ಆರ್ಥಿಕ ನೆರವು ಕೇಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮೂಲಸೌಕರ್ಯಗಳ ಪುನರ್‌ನಿರ್ಮಾಣಕ್ಕಾಗಿ ಇದೇ ಮೊದಲ ಬಾರಿ ಕೇಂದ್ರದಿಂದ ಆರ್ಥಿಕ ನೆರವಿಗೆ ಮನವಿ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮಳೆ ಮತ್ತು ಪ್ರವಾಹದಿಂದಾಗಿ ರಸ್ತೆ, ಸೇತುವೆಗಳು, ಚೆಕ್‌ಡ್ಯಾಂ, ಕಟ್ಟಡಗಳು ಹಾನಿಗೀಡಾಗಿವೆ. ಇದರ ಮೌಲ್ಯ ₹5,000 ಕೋಟಿ ಆಗುತ್ತದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ (ಎನ್‌ಡಿಆರ್‌ಎಫ್) ಮಾನದಂಡದಡಿ ₹1,545 ಕೋಟಿ ಆರ್ಥಿಕ ನೆರವು ಕೇಳಲು ತೀರ್ಮಾನಿಸಿದ್ದೇವೆ. ಬೆಳೆ ಹಾನಿಗೆ ಪರಿಹಾರ ನೀಡುವಂತೆ ಈಗಾಗಲೇ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ. ಬೆಳೆ ಹಾನಿಯ ಪ್ರಮಾಣದ ಬಗ್ಗೆ ಕೇಂದ್ರ ಮತ್ತು ರಾಜ್ಯದ ಜಂಟಿ ಸಮೀಕ್ಷೆ ನಡೆದಿದೆ. 14.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಪರಿಹಾರಕ್ಕಾಗಿ ₹1,543 ಕೋಟಿ ಅಗತ್ಯವಿದೆ’ ಎಂದು ಅವರು ವಿವರಿಸಿದರು.
‘ಎನ್‌ಡಿಆರ್‌ಎಫ್‌ನ ಚೇತರಿಕೆ ಮತ್ತು ಪುನರ್‌ನಿರ್ಮಾಣ ಗವಾಕ್ಷಿ ಅಡಿ (ಪಿಡಿಎನ್‌ಎ) ಜಿಲ್ಲಾ ಮತ್ತು ವಿಭಾಗವಾರು ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ಮೌಲ್ಯಮಾಪನ ನಡೆಸಲಾಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪುನರ್‌ನಿರ್ಮಾಣ ಮತ್ತು ಪುನರ್‌ವಸತಿ (ಆರ್ ಆ್ಯಂಡ್ ಆರ್) ನಿಧಿಗಳನ್ನು ಅನುಮೋದಿಸಿದ ನಂತರ, ನಿರ್ದಿಷ್ಟಪಡಿಸಿದ ವೆಚ್ಚ ಹಂಚಿಕೆ ಮಾದರಿಗೆ ಅನುಗುಣವಾಗಿ ರಾಜ್ಯ ನಿಧಿಯಿಂದ ಪುನರ್‌ನಿರ್ಮಾಣ ಮತ್ತು ಪುನರ್‌ವಸತಿ ವೆಚ್ಚವನ್ನು ಹಂಚಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಪಾಟೀಲ ತಿಳಿಸಿದರು.
2,200 ಶಾಲಾ ಕೊಠಡಿ ನಿರ್ಮಾಣ: ವಿವಿಧ ಜಿಲ್ಲೆಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ 2,200 ಶಾಲಾ ಕೊಠಡಿಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಒಪ್ಪಿಗೆ ನೀಡಲಾಗಿದೆ. ಇದರ ಒಟ್ಟು ವೆಚ್ಚ ₹360 ಕೋಟಿ ಎಂದು ಅವರು ಹೇಳಿದರು.
ಲೋಕೋಪಯೋಗಿ ಇಲಾಖೆ ನಿರ್ಧರಿಸಿದ ಸಕ್ಷಮ ಪ್ರಾಧಿಕಾರವು ವಲಯ ಮಟ್ಟದಲ್ಲಿ ಟೆಂಡರ್ ಕರೆಯಲು ಅವಕಾಶ ನೀಡಲಾಗುವುದು ಎಂದರು.
ಗಂಗಾ ಕಲ್ಯಾಣ ಹೊಣೆ ಸಚಿವರಿಗೆ: ಗಂಗಾ ಕಲ್ಯಾಣ ಯೋಜನೆ ಮತ್ತು ಸ್ವಯಂ ಉದ್ಯೋಗ ಯೋಜನೆಗಳಡಿ ಫಲಾನುಭವಿಗಳನ್ನು ಆಯಾ ವರ್ಷದ ಅಕ್ಟೋಬರ್ 31ನೇ ತಾರೀಖಿನೊಳಗೆ ಸಂಬಂಧಪಟ್ಟ ಶಾಸಕರು ಆಯ್ಕೆ ಮಾಡದೇ ಇದ್ದರೆ, ಆಯ್ಕೆ ಪ್ರಕ್ರಿಯೆಯನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಲು (2025–26 ನೇ ಸಾಲಿನ ಗುರಿ ಹೊರತುಪಡಿಸಿ) ಸಂಪುಟ ಸಭೆ ತೀರ್ಮಾನಿಸಿದೆ ಎಂದು ಪಾಟೀಲ ಹೇಳಿದರು.
ಅಲ್ಲದೇ, ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯಲು ಮತ್ತು ಪಂಪ್‌ಸೆಟ್‌ಗಳನ್ನು ಸರಬರಾಜು ಮಾಡಲು 2022–23ನೇ ಸಾಲಿನಲ್ಲಿ ಎಂಪಾನೆಲ್‌ಮೆಂಟ್ ಮಾಡಿಕೊಂಡಿರುವ ಗುತ್ತಿಗೆದಾರರ ಅವಧಿಯನ್ನು ಮುಂದಿನ ಎರಡು ವರ್ಷಗಳಿಗೆ ಅಂದರೆ 2027ರ ಜೂನ್‌ವರೆಗೆ ವಿಸ್ತರಿಸಲೂ ಒಪ್ಪಿಗೆ ನೀಡಲಾಯಿತು ಎಂದರು.
‘ಪರಿಶಿಷ್ಟ ಜಾತಿ ವಿಶೇಷ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯ (ಎಸ್‌ಸಿಎಸ್‌ಪಿ–ಟಿಎಸ್‌ಪಿ) ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡುತ್ತಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ
ಎಚ್.ಸಿ.ಮಹದೇವಪ್ಪ ಅವರು ಸಂಪುಟ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆಯ ವಿಷಯ ಪ್ರಸ್ತಾಪ ಆದಾಗ, ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ ಅನಗತ್ಯವಾಗಿ ವಿಳಂಬವಾಗುತ್ತಿದೆ ಎಂದು ಮಹದೇವಪ್ಪ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ‘ಯೋಜನಾ ವೆಚ್ಚ ಜಾಸ್ತಿ ಆಗುತ್ತಿದ್ದು, ಇಲಾಖೆಯ ಮೇಲೆ ಹೊರೆ ಆಗುತ್ತಿದೆ’ ಎಂದು ತಿರುಗೇಟು ನೀಡಿದರು.
‘ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಕೆ ಆಗುತ್ತಿದೆಯಲ್ಲವೇ? ಆದರೂ ಹೇಗೆ ಹೊರೆ ಆಗುತ್ತದೆ’ ಎಂಬ ವಿಷಯದ ಕಡೆಗೆ ಚರ್ಚೆ ಹೊರಳಿದ್ದರಿಂದಾಗಿ, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು ಎಂದು ಗೊತ್ತಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ‘ಕಾವೇರಿ ಐಟಿ ಸೆಲ್’ ಹೆಸರಿನ ಇನ್–ಹೌಸ್ ತಾಂತ್ರಿಕ ಅಭಿವೃದ್ಧಿ ವಿಭಾಗವನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಐಟಿ ಸೆಲ್ ಅನ್ನು ಹೊರಗುತ್ತಿಗೆ ಮೂಲಕ ನಿರ್ವಹಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಐಟಿ ಸೆಲ್ ಸ್ಥಾಪನೆಗೆ ₹69.13 ಕೋಟಿ ವೆಚ್ಚವಾಗಲಿದೆ. ಈಗ ನೋಂದಣಿ ಸೇವೆಗಳಿಗೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (ಸಿಎಸ್‌ಜಿ) ಸಂಸ್ಥೆ ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿರುವ ಕಾವೇರಿ–2.0 ತಂತ್ರಾಂಶವನ್ನು ಅವಲಂಬಿಸಲಾಗಿದೆ. ಕಾವೇರಿ–2.0 ತಂತ್ರಾಂಶದ ನಿರಂತರ ಅಭಿವೃದ್ಧಿ, ನಿರ್ವಹಣೆ ಮತ್ತು ಬಲವರ್ಧನೆಗೆ ‘ಇನ್ ಹೌಸ್ ಕಾವೇರಿ ಐಟಿ ಸೆಲ್’ ಸ್ಥಾಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಹೊಸ ವ್ಯವಸ್ಥೆಯು ಕಾನೂನು ತಿದ್ದುಪಡಿಗಳು, ಹೊಸ ಸಂಯೋಜನೆಗಳು ಹಾಗೂ ಕಾರ್ಯಾಚರಣೆಯಲ್ಲಿನ ಬದಲಾವಣೆಗಳಿಗೆ ನಿರಂತರವಾಗಿ ಹೊಂದಿಕೊಳ್ಳಬೇಕಾಗಿದೆ. ಇದಕ್ಕಾಗಿ ನಡೆಯುತ್ತಿರುವ ಬದಲಾವಣೆಗಳು, ಸಮಸ್ಯೆಗಳಿಗೆ ಪರಿಹಾರ ಮತ್ತು ವಿಷಯ ತಜ್ಞರೊಂದಿಗೆ ನಿಕಟ ಸಹಯೋಗದ ಅಗತ್ಯವಿದೆ. ಪ್ರತಿಯೊಂದು ಬದಲಾವಣೆ ಗಳನ್ನು ತಂತ್ರಾಂಶದಲ್ಲಿ ಮಾರ್ಪಾಡು ಮಾಡಬೇಕಾಗಿದ್ದು, ಐಟಿ ಸೆಲ್ ಆರಂಭಿಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.