ADVERTISEMENT

ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ: ಪ್ರಧಾನಿ ಮೋದಿಗೆ ದೇವೇಗೌಡ ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2025, 13:52 IST
Last Updated 22 ಜೂನ್ 2025, 13:52 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಮತ್ತು ಎಚ್.ಡಿ.ದೇವೇಗೌಡ</p></div>

ಪ್ರಧಾನಿ ನರೇಂದ್ರ ಮೋದಿ ಮತ್ತು ಎಚ್.ಡಿ.ದೇವೇಗೌಡ

   

ಚಿತ್ರಕೃಪೆ: X/@Bitt2DA

ನವದೆಹಲಿ: ಕರ್ನಾಟಕದಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆ ಮತ್ತು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್) ಅಡಿಯಲ್ಲಿ ರಾಜ್ಯದ ಮಾವು ಸಂಗ್ರಹಿಸಲು ಕೇಂದ್ರ ಸರ್ಕಾರವು ನಾಫೆಡ್‌ಗೆ ಸೂಚಿಸಬೇಕೆಂದು ದೇವೇಗೌಡರು ಮನವಿ ಮಾಡಿದ್ದಾರೆ.

‘ರೈತರಿಂದ ನೇರ ಖರೀದಿ ಅಥವಾ ರೈತ ಉತ್ಪಾದನಾ ಸಂಸ್ಥೆಗಳಿಂದ (ಎಫ್‌ಪಿಒ) ನೇರವಾಗಿ ಖರೀದಿಸುವುದರಿಂದ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ರೈತರಿಗೆ ಬೆಂಬಲ ನೀಡಿದಂತಾಗುತ್ತದೆ’ ಎಂದು ದೇವೇಗೌಡ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈಚೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾವಿಗೆ ಬೆಂಬಲ ಬೆಲೆ ವಿಚಾರ ಪ್ರಸ್ತಾಪವಾಯಿತಾದರೂ ಅಂತಿಮ ನಿರ್ಧಾರವಾಗಿಲ್ಲ.

ಮಾವಿನ ಧಾರಣೆ ಕುಸಿದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಬೆಂಬಲ ಬೆಲೆಗಾಗಿ ಕಳೆದ 18 ದಿನಗಳಿಂದ ಬೆಳಗಾರರು, ಮುಖಂಡರು, ರೈತ ಮುಖಂಡರು ಆಗ್ರಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಈಚೆಗೆ ಮಾಜಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌, ಮುಖ್ಯಮಂತ್ರಿ ಭೇಟಿ ಮಾಡಿ ಬೆಂಬಲ ಬೆಲೆಗೆ ಆಗ್ರಹಿಸಿದ್ದರು. ಜೆಡಿಎಸ್‌ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್‌ ವಿಧಾನಸೌಧ ಆವರಣದಲ್ಲಿನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ್ದರು. ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಗದ ಜಿಲ್ಲಾ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ನೇತೃತ್ವದಲ್ಲಿ ಶ್ರೀನಿವಾಸಪುರ ತಾಲ್ಲೂಕು ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗಿತ್ತು.

ಪಕ್ಕದ ಆಂಧ್ರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಮಾವಿಗೆ ಬೆಂಬಲ ಬೆಲೆ ಘೋಷಿಸುವಂತೆ ಪಟ್ಟು ಹಿಡಿದಿದ್ದಾರೆ. ಬೆಲೆ ಇಲ್ಲದೆ ತೋತಾಪುರಿ ಮಾವಿನ ಕಾಯಿಗಳನ್ನು ಕಟಾವು ಮಾಡದೆ ತೋಟದಲ್ಲೇ ಬಿಟ್ಟಿದ್ದು, ಕೊಳೆಯುವ ಹಂತ ತಲುಪಿವೆ ಎಂದು ರೈತರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.