ADVERTISEMENT

ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಪುನರ್ವಸತಿ: ಸಹಜ ಜೀವನಕ್ಕೆ ಮರಳಿಸುವ ಪ್ರಯತ್ನ

ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ 30 ಹಾಸಿಗೆಗಳ ಆರೈಕೆ ಕೇಂದ್ರ *ಸರ್ಕಾರೇತರ ಸಂಸ್ಥೆಗಳ ನೆರವಿನಿಂದ ಸಹಜ ಜೀವನಕ್ಕೆ ಮರಳಿಸುವ ಪ್ರಯತ್ನ

ವರುಣ ಹೆಗಡೆ
Published 15 ಫೆಬ್ರುವರಿ 2026, 0:30 IST
Last Updated 15 ಫೆಬ್ರುವರಿ 2026, 0:30 IST
.
.   

ಬೆಂಗಳೂರು: ಬಸ್‌ ಹಾಗೂ ರೈಲು ನಿಲ್ದಾಣಗಳು, ಬೀದಿ ಬದಿ ಸೇರಿ ವಿವಿಧೆಡೆ ಅಲೆದಾಡುತ್ತಿರುವ ನಿರ್ಗತಿಕ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ಸಹಿತ ಪುರ್ನವಸತಿ ಕಲ್ಪಿಸುವ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಈ ಸಂಬಂಧ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಅಗತ್ಯ ಸಿದ್ಧತೆಯನ್ನು ಇಲಾಖೆ ಮಾಡಿಕೊಳ್ಳುತ್ತಿದೆ. ಜಿಲ್ಲಾ ಆಸ್ಪತ್ರೆಗಳು ಹಾಗೂ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಮತ್ತು ಪುನರ್ವಸತಿ ಕೇಂದ್ರಗಳನ್ನು (ಇಸಿಆರ್‌ಸಿ) ಸ್ಥಾಪಿಸುತ್ತಿದೆ. ಈ ಕೇಂದ್ರಗಳು ಗರಿಷ್ಠ 30 ಹಾಸಿಗೆಗಳನ್ನು ಒಳಗೊಂಡಿರಲಿದೆ. ದಾಖಲಾದವರಿಗೆ ಚಿಕಿತ್ಸೆ ಜತೆಗೆ ಅಗತ್ಯ ವೈದ್ಯಕೀಯ ಹಾಗೂ ಸಾಮಾಜಿಕ ನೆರವಿನೊಂದಿಗೆ ಸಹಜ ಜೀವನಕ್ಕೆ ಮರಳಿಸಲು ಪ್ರಯತ್ನಿಸಲಾಗುತ್ತದೆ. ಬೆಂಗಳೂರು, ಉಡುಪಿ, ಗದಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಾದ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ, ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆ. 

ಇಲಾಖೆಯು ಮಾನಸಿಕ ಆರೋಗ್ಯ ಕಾರ್ಯಕ್ರಮಗಳಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡುತ್ತಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳು ಹಾಗೂ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಮನೋವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಮನೋಚೈತನ್ಯ’ ಕಾರ್ಯಕ್ರಮದ ಮೂಲಕ ಆಯ್ದ ಮಂಗಳವಾರ ಹಾಗೂ ಶುಕ್ರವಾರ ತಜ್ಞ ಮನೋವೈದ್ಯರ ತಂಡವು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಿದೆ. ಇದಲ್ಲದೆ, ‘ಕ್ಷೇಮ’ ಸೇರಿದಂತೆ ವಿವಿಧ ಕಾರ್ಯಕ್ರಮಗಳಡಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆಯ ಜತೆಗೆ ಪುನರ್ವಸತಿ ಒದಗಿಸುತ್ತಿದೆ. ಈ ಯೋಜನೆಗಳ ಮುಂದುವರಿದ ಭಾಗವಾಗಿ ನಿರ್ಗತಿಕ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಕೇಂದ್ರಗಳಿಗೆ ಕರೆತರಲಾಗುತ್ತದೆ. 

ADVERTISEMENT

ಆಶ್ರಯ ವ್ಯವಸ್ಥೆ: ಈ ಕೇಂದ್ರಗಳ ನಿರ್ಮಾಣಕ್ಕೆ ಇಲಾಖೆ ₹6 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ನಿರ್ಗತಿಕ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಕೇಂದ್ರಗಳಿಗೆ ಕರೆತರುತ್ತಾರೆ. ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳುವವರೆಗೆ ಅವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುತ್ತದೆ. ಅಸ್ವಸ್ಥರಿಗೆ ಮಾನಸಿಕ ಸಮಸ್ಯೆಗಳ ಜತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ, ನಿಗದಿತ ಆಸ್ಪತ್ರೆಯ ವೈದ್ಯರೇ ಅಗತ್ಯ ಚಿಕಿತ್ಸೆ ನೀಡುತ್ತಾರೆ. 

‘ಕೇಂದ್ರದಲ್ಲಿ ಚಿಕಿತ್ಸೆ ಪಡೆದವರು ಚೇತರಿಸಿಕೊಂಡ ಬಳಿಕ, ಅವರ ಕೌಟುಂಬಿಕ ಹಿನ್ನೆಲೆ ವಿಚಾರಿಸಲಾಗುತ್ತದೆ. ಅಗತ್ಯ ವಿವರ ಲಭ್ಯವಾದಲ್ಲಿ ಕುಟುಂಬಸ್ಥರನ್ನು ಸಂಪರ್ಕಿಸಿ, ಅವರನ್ನು ಸುರಕ್ಷಿತವಾಗಿ ನಿಗದಿತ ಸ್ಥಳಕ್ಕೆ ತಲುಪಿಸಲು ಸರ್ಕಾರೇತರ ಸಂಸ್ಥೆಗಳು ಶ್ರಮಿಸಲಿವೆ. ಸೂರು ಇಲ್ಲದಿದ್ದರೆ ನಿರಾಶ್ರಿತ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ನೂರಕ್ಕೂ ಅಧಿಕ ಮಂದಿ ಈ ಕೇಂದ್ರದ ನೆರವಿನಿಂದ ಚೇತರಿಸಿಕೊಂಡಿದ್ದಾರೆ’ ಎಂದು ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಉಪ ನಿರ್ದೇಶಕಿ ಡಾ. ರಜನಿ ಪಿ. ತಿಳಿಸಿದರು.

ಆಯ್ದ ತುರ್ತು ಆರೈಕೆ ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಇನ್ನಷ್ಟು ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ರೋಗಿಗಳು ಹಾಗೂ ಅವರ ಕುಟುಂಬದವರನ್ನು ಒಟ್ಟುಗೂಡಿಸುವುದು ನಮ್ಮ ಗುರಿ
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಜತೆಗೆ ಪುನರ್ವಸತಿ ಕಲ್ಪಿಸಲು ರಾಜ್ಯದಾದ್ಯಂತ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಆರು ವರ್ಷ ಮನೆಯಿಂದ ಹೊರ ಇದ್ದವರೂ ಕೇಂದ್ರದ ನೆರವಿನಿಂದ ಚೇತರಿಸಿಕೊಂಡು ಮರಳಿದ್ದಾರೆ
ಡಾ. ರಜನಿ ಪಿ. ಉಪ ನಿರ್ದೇಶಕಿ (ಮಾನಸಿಕ ಆರೋಗ್ಯ) ಆರೋಗ್ಯ ಇಲಾಖೆ

₹1 ಸಾವಿರ ಮೌಲ್ಯದ ಕಿಟ್

ತುರ್ತು ಆರೈಕೆ ಮತ್ತು ಪುನರ್ವಸತಿ ಕೇಂದ್ರಗಳಿಗೆ ದಾಖಲಾದವರಿಗೆ ₹1 ಸಾವಿರ ಮೌಲ್ಯದ ವೈದ್ಯಕೀಯ ಕಿಟ್‌ಗಳನ್ನು ಒದಗಿಸಲಾಗುತ್ತದೆ. ಈ ಕಿಟ್‌ ಸೋಪು ಪೇಸ್ಟ್ ಸೇರಿ ಅಗತ್ಯ ದಿನಬಳಕೆ ವಸ್ತುಗಳನ್ನು ಒಳಗೊಂಡಿರಲಿದೆ. ಬಟ್ಟೆಯನ್ನು ಕೂಡ ನೀಡಲಾಗುತ್ತದೆ. ಚಿಕಿತ್ಸೆಯ ಅವಧಿಯಲ್ಲಿ ಔಷಧ ಆಹಾರ ಸೇರಿ ಎಲ್ಲವನ್ನೂ ಉಚಿತವಾಗಿ ಒದಗಿಸಲಾಗುತ್ತದೆ. ನೆರವಿಗೆ ಸಿಬ್ಬಂದಿಯನ್ನೂ ಸರ್ಕಾರೇತರ ಸಂಸ್ಥೆ ವತಿಯಿಂದ ನಿಯೋಜಿಸಲಾಗುತ್ತದೆ. ಈ ಯೋಜನೆ ಕಾರ್ಯಗತವಾಗಲು ಪ್ರಮುಖವಾಗಿ ಇಲಾಖೆ ಜತೆಗೆ ಆಲದಮರ ಫೌಂಡೇಷನ್‌ ಕೈಜೋಡಿಸಿದೆ. ಈ ಫೌಂಡೇಷನ್‌ ನೆರವಿನಿಂದ ಬೆಂಗಳೂರಿನ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ಕೇಂದ್ರವನ್ನು 2024ರಲ್ಲಿ ಪ್ರಾರಂಭಿಸಲಾಗಿತ್ತು. ಅದು ರಾಜ್ಯದ ಪ್ರಥಮ ಕೇಂದ್ರವೆಂಬ ಹಿರಿಮೆಗೆ ಭಾಜನವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.