
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಜೀವವೈವಿಧ್ಯದ ತಾಣವಾಗಿರುವ ತಾಲ್ಲೂಕಿನ ಆನೇಕಲ್ಲು ಗ್ರಾಮ ಸಮೀಪದ ಐತಿಹಾಸಿಕ ಗುಡ್ಡದ ತಿಮ್ಮಪ್ಪನ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಸ್ಫೋಟಕಗಳನ್ನು ಬಳಸಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ.
ಹೊಸಪೇಟೆ ಪ್ರಾದೇಶಿಕ ವಲಯಕ್ಕೆ ಸೇರಿದ ದಶಮಾಪುರ ಗಸ್ತು ಕಾಯ್ದಿಟ್ಟ ಅರಣ್ಯ ಪ್ರದೇಶ ಇದಾಗಿದ್ದು, ಮೂರು ಸಾವಿರ ಎಕರೆ ಪ್ರದೇಶದಲ್ಲಿ ಕುರುಚಲು ಕಾಡು ಇದೆ. ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿ ಜೊತೆಗೆ, ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ.
ಈ ಪ್ರದೇಶದಲ್ಲಿ ಅಪರೂಪದ ಸೈಕಾಸ್ ಪ್ರಭೇದದ ಸಸ್ಯಗಳು, ಔಷಧೀಯ ಗುಣದ ಕಾರೆಹಣ್ಣು, ಬಿಕ್ಕೆಹಣ್ಣು, ಕವಳೆಹಣ್ಣುಗಳ ಗಿಡಗಳು ನೈಸರ್ಗಿಕವಾಗಿ ಬೆಳೆದಿವೆ.
ಚಿರತೆ, ಕರಡಿ, ತೋಳ, ನರಿ, ಚಿಪ್ಪು ಹಂದಿ, ಮುಳ್ಳು ಹಂದಿ, ಕಾಡು ಹಂದಿ, ಕಾಡು ಬೆಕ್ಕು, ಕೊಂಡುಕುರಿ, ಪುನುಗು ಬೆಕ್ಕು, ಉಡ ಸೇರಿದಂತೆ ಹಲವು ಕಾಡುಪ್ರಾಣಿಗಳ ಆವಾಸ ಸ್ಥಾನ ಇದಾಗಿದೆ. ವಲಸೆ ಬಾನಾಡಿಗಳು, ಹಲವು ಬಗೆಯ ಚಿಟ್ಟೆಗಳೂ ಕಂಡು ಬರುತ್ತವೆ.
‘ಇಲ್ಲಿ ಕಲ್ಲುಗಣಿಗಾರಿಕೆ ಸ್ಥಗಿತಗೊಂಡರೆ ಮಾತ್ರ ಜೀವವೈವಿಧ್ಯದ ಉಳಿವು ಸಾಧ್ಯ’ ಎನ್ನುತ್ತಾರೆ ಪರಿಸರ ಪ್ರೇಮಿ ಕೊಟ್ರೇಶ್ ತಳವಾರ.
ಈ ಪ್ರದೇಶದಲ್ಲಿ ಆರು ತಿಂಗಳಿನಿಂದ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರವಾದಿಗಳ ಒತ್ತಾಯ.
ತಾಲ್ಲೂಕಿನಲ್ಲಿ 14 ಸಾವಿರ ಎಕರೆ ಅರಣ್ಯ ಪ್ರದೇಶ ಇದೆ. ಆದರೆ ಅರಣ್ಯ ಇಲಾಖೆ ಕಚೇರಿ ಇಲ್ಲ. ಕಚೇರಿ ಸ್ಥಾಪಿಸಿ ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸಬೇಕು.–ಜಿ.ಪ್ರವೀಣ್‍ಕುಮಾರ್, ಹಂಪಾಪಟ್ಟಣ ನಿವಾಸಿ
ತಿಮ್ಮಪ್ಪನ ಗುಡ್ಡದ ಬಳಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿಲ್ಲ. ಈ ಕುರಿತು ಪರಿಶೀಲನೆಗೆ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಕಳುಹಿಸಲಾಗುವುದು–ಆರ್.ಕವಿತಾ, ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.