
ಬಸನಗೌಡ ಪಾಟೀಲ ಯತ್ನಾಳ ಮತ್ತು ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ಶಾಲಾ ಮಕ್ಕಳು ಶೌಚಾಲಯಗಳನ್ನು ಸ್ವಚ್ಛ ಮಾಡುವುದು ವರದಿ ಆದ ಬೆನ್ನಲ್ಲೇ ‘ಮೈಸೂರು ಬ್ರಾಂಡ್ ಗಾಂಜಾ’, ‘ಮೈಸೂರು ಮ್ಯಾಂಗೋ’ ಹಾಗೂ ‘ಮೈಸೂರು ಕುಶ್’ ಈಗ ಸಾಕಷ್ಟು ಬೇಡಿಕೆಯಲ್ಲಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ಹೋದವಾರವಷ್ಟೇ, ಡ್ರಗ್ಸ್ ದಂಧೆಯನ್ನು ಬುಡ ಸಮೇತ ತೆಗೆದು ಹಾಕುತ್ತೇವೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲೇ ‘ಮೈಸೂರು ಬ್ರಾಂಡ್’ ಗಾಂಜಾ ಜನಪ್ರಿಯವಾಗಿದೆ ಎಂದು ಯತ್ನಾಳ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕುರ್ಚಿ ಕುಸ್ತಿ’ಯಲ್ಲಿ, ‘ನವೆಂಬರ್ ಕ್ರಾಂತಿ’ಯ ನಡುವೆ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲೇ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲು ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಯತ್ನಾಳ ಕಿಡಿಕಾರಿದ್ದಾರೆ.
‘ದೆಹಲಿ ಭೇಟಿ, ಆಪ್ತ ಬಣದೊಂದಿಗೆ ‘ಬ್ರೇಕ್ ಫಸ್ಟ್ ಮೀಟಿಂಗ್’ನಲ್ಲೇ ಕಾರ್ಯನಿರತವಾಗಿರುವ ಸಿ.ಎಂ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ. ಯುವಕರನ್ನು ದಾರಿತಪ್ಪಿಸುವ ಡ್ರಗ್ಸ್ ನಂತಹ ಗಂಭೀರ ಪ್ರಕರಣಗಳ ಉಗಮ ತಮ್ಮ ಜಿಲ್ಲೆಯಿಂದಲೇ ಆಗುತ್ತಿದೆ ಎಂಬುದನ್ನು ಅರಿತು ಡ್ರಗ್ ಪೆಡ್ಲರ್‌ಗಳ ವಿರುದ್ಧ ಕ್ರಮಕೈಗೊಳ್ಳಲಿ ಹಾಗೂ ಕುರ್ಚಿ ಕುಸ್ತಿ ಬಿಟ್ಟು ಸ್ಥಿರ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿ’ ಎಂದೂ ಅವರು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.