
ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ 2025ರ ಆಗಸ್ಟ್-ನವೆಂಬರ್ ಅವಧಿಯಲ್ಲಿ ರಾಜ್ಯದ 31,340 ಅರ್ಹ ರೈತರು ಆರ್ಥಿಕ ನೆರವು ಪಡೆದಿಲ್ಲ ಎಂದು ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ತಿಳಿಸಿದೆ ಮತ್ತು ಹಣವನ್ನು ಬಿಡುಗಡೆ ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಇಲ್ಲಿ ಭೇಟಿ ಮಾಡಿದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ಈ ಯೋಜನೆ ಅಡಿಯಲ್ಲಿ ರೈತರ ಹೆಚ್ಚುತ್ತಿರುವ ಯಾಂತ್ರೀಕರಣ ಬೇಡಿಕೆ ಗಮನಿಸಿ ಈ ವರ್ಷಕ್ಕೆ ಹೆಚ್ಚುವರಿ ₹250 ಕೋಟಿ ಅನುದಾನ ಕೋರಿದರು. ಅದೇ ರೀತಿ, ಮಳೆಯ ಮೇಲೆ ಅವಲಂಬಿತವಾಗಿರುವ ಕರ್ನಾಟಕದ ಕೃಷಿಯಲ್ಲಿ ಆಗಾಗ ಬೆಳೆ ನಷ್ಟಗಳನ್ನು ತಪ್ಪಿಸಲು ಸೂಕ್ಷ್ಮ ನೀರಾವರಿ ಯೋಜನೆಗೆ ಹೆಚ್ಚುವರಿ ₹250 ಕೋಟಿ ನೀಡಬೇಕು ಎಂದು ಮನವಿ ಮಾಡಿದರು.
ಡಿಜಿಟಲ್ ಬೆಳೆ ಸಮೀಕ್ಷೆಗೆ ಕೇಂದ್ರ ಅನುಮೋದಿಸಿದ ₹25.704 ಕೋಟಿಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿ ₹3.10 ಕೋಟಿ ಬಿಡುಗಡೆ ಮಾಡಬೇಕು. ರೈತಸಿರಿ ಯೋಜನೆಯನ್ನು ಸಿರಿಧಾನ್ಯ ರೈತರಿಗೆ ಡಿಬಿಟಿ ಮೂಲಕ ಪ್ರೋತ್ಸಾಹ ನೀಡುವ ರೀತಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ಮಾಡುವಂತೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.